ದೊಡ್ಡಕೆರೆಯಲ್ಲಿ ಪ್ರಾಣಿಗಳಮೈತೊಳೆದದ್ದಕ್ಕೆ ಆಕ್ರೋಶ
ಕ.ಪ್ರ.ವಾರ್ತೆ ಕುಣಿಗಲ್ ಮೆ 29
ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ತಾಣವಾದ ಕುಣಿಗಲ್ ದೊಡ್ಡಕೆರೆಯಲ್ಲಿ ಸಾಕುಪ್ರಾಣಿಗಳನ್ನು, ಬಟ್ಟೆಗಳನ್ನು ತೊಳೆಯುವುದು ಸೇರಿದಂತೆ ಸ್ನಾನಮಾಡುವುದನ್ನು ನಿಷೇಧಿಸಿದ್ದರೂ ಚಟುವಟಿಕೆಗಳು ಮುಂದುವರೆದಿದ್ದು ನಾಗರಿಕರ ದೂರಿನ ಮೇರೆಗೆ ಪುರಸಭಾಧ್ಯಕ್ಷ ಕೆ.ಎಲ್. ಹರೀಶ್ ನೇತೃತ್ವದಲ್ಲಿ ಸಿಬ್ಬಂದಿ, ಗುರುವಾರ ಸಂಜೆ ದಾಳಿ ನಡೆಸಿ ಜಾನುವಾರುಗಳನ್ನು ವಶಕ್ಕೆ ಪಡೆದರು.
ಪಟ್ಟಣಕ್ಕೆ ಹೊಂದುಕೊಂಡಿರುವ ಕುಣಿಗಲ್ ದೊಡ್ಡಕೆರೆಯಲ್ಲಿ ಹೇಮಾವತಿ ನೀರನ್ನು ಸಂಗ್ರಹಿಸಿ, ಶಾಶ್ವತ ಕುಡಿಯುವ ನೀರು ಯೋಜನೆಯಡಿಯಲ್ಲಿ 7 ಕೋಟಿ ರು.ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಶುದ್ಧೀಕರಣ ಘಟಕ ಮತ್ತು ವಿತರಣ ವ್ಯವಸ್ಥೆ ಮೂಲಕ ಪಟ್ಟಣದ ಬಹುಪಾಲು ಜನತೆಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ.ದೊಡ್ಡಕೆರೆಯಲ್ಲಿ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಿದ ಕಳೆದ ನಾಲ್ಕು ವರ್ಷಗಳಿಂದಲೂ ಬಟ್ಟೆ,ಜಾನುವಾರು ತೊಳೆಯುವುದನ್ನು ಮತ್ತು ಕಲುಶಿತಗೊಳಿಸುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ಕೆರೆಯ ದಂಡೆಯಲ್ಲಿನ 18,17,16,15,14ನೇ ವಾರ್ಡ್ನ ಕೆಲವರು ತಮ್ಮ ಜಾನುವಾರುಗಳನ್ನು ಕೆರೆಯಲ್ಲಿ ಬಿಟ್ಟು ಮೈತೊಳೆದರೆ, ಈ ಪ್ರದೇಶದ ಬಹುತೇಕರು ಕೆರೆದಂಡೆಯಲ್ಲಿ ಬಟ್ಟೆ ಒಗೆದರೆ ಮತ್ತೆ ಕೆಲವರು ಬೆಳಗಿನ ನಿತ್ಯಕರ್ಮಗಳಿಗೆ ಕೆರೆಯನ್ನೇ ಅಶ್ರಯಿಸಿದ್ದಾರೆ. ಕೆರೆಯ ಸುತ್ತಲೂ ತಂತಿಬೇಲಿ ಹಾಕಿದ್ದರೂ, ಬೇಲಿಯನ್ನು ತುಂಡರಿಸಿ ಅಕ್ರಮವಾಗಿ ಕೆರೆ ಪ್ರವೇಶಿಸಿ, ನಿಷೇಧಿತ ಚಟುವಟಿಕೆ ನಡೆಸಿ ಇರುವ ಸ್ವಲ್ಪ ನೀರನ್ನು ಮಲೀನಗೊಳಿಸುತ್ತಿದ್ದಾರೆ.
ಪುರಸಭಾಧ್ಯಕ್ಷ ಕೆ.ಎಲ್.ಹರೀಶ್, ಆರೋಗ್ಯ ನಿರೀಕ್ಷಕಿ ವರಲಕ್ಷ್ಮೀ ಮತ್ತು ಸಿಬ್ಬಂದಿಗಳು ಆಗಮಿಸಿ,ಪೊಲೀಸರಿಗೂ ವಿಷಯ ತಿಳಿಸಿದರು. ಸಿಬ್ಬಂದಿ ಕೊರೆತ ಕಾರಣ ಯಾವುದೇ ಪೊಲೀಸ್ ಸಿಬ್ಬಂದಿ ಸುಮಾರು ಒಂದು ತಾಸು ಕಳೆದರೂ ಸ್ಥಳಕ್ಕೆ ಬಾರದ ಕಾರಣ ವಿಧಿ ಇಲ್ಲದೆ, ಪುರಸಭೆ ಸಿಬ್ಬಂದಿಗಳು ಕೆರೆ ಅಂಗಳಕ್ಕೆ ಇಳಿದರು. ಪುರಸಭೆ ಸಿಬ್ಬಂದಿ ಕೆರೆಅಂಗಳಕ್ಕೆ ಇಳಿಯುತ್ತಿದ್ದುದನ್ನು ಕಂಡ ಸ್ನಾನಕ್ಕೆ ಇಳಿದಿದ್ದ ನೂರಾರು ಮಂದಿ ದಿಕ್ಕಾಪಾಲಾಗಿ ಒಡಿ, ಸಿಬ್ಬಂದಿಯಿಂದ ತಪ್ಪಿಸಿಕೊಂಡರು. ನಂತರ ಕೆರೆಯಲ್ಲೆ ಇದ್ದ ನಾಲ್ಕು ಎಮ್ಮೆ ಮತ್ತು ಒಂದು ಹಸುವನ್ನು ಸಿಬ್ಬಂದಿ ವಶಕ್ಕೆ ಪಡೆದರು.
ವಾಗ್ವಾದ: ಜಾನುವಾರು ಮಾಲೀಕರು ಪುರಸಭೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರೂ, ಲೆಕ್ಕಿಸದೆ ಸಿಬ್ಬಂದಿ ಜಾನುವಾರುಗಳನ್ನು ಪುರಸಭೆಯ ಜಾಗದಲ್ಲಿ ಕಟ್ಟಿಹಾಕಿದರು. ಪುರಸಭಾಧ್ಯಕ್ಷ ಕೆ.ಎಲ್. ಹರೀಶ್, ಸಕಾಲದಲ್ಲಿ ಮಳೆಯಾಗದ ಕಾರಣ ಕೆರೆಯಲ್ಲಿ ನೀರಿನ ಪ್ರಮಾಣ ಅಲ್ಪವಾಗಿದ್ದು, ನೀರಿನ ಮೂಲ ಮಲೀನವಾಗದಂತೆ ಎಚ್ಚರ ವಹಿಸಬೇಕಾಗಿದೆ. ಪ್ರಾಣಿಗಳು, ಜನತೆ ನೀರು ಮಲೀನ ಗೊಳಿಸದಂತೆ, ಈಗಾಗಲೆ ಸಾಕಷ್ಟು ಕ್ರಮಗಳ ಮೂಲಕ ಅರಿವು ಮೂಡಿಸಿದ್ದರೂ, ಸ್ಪಂದಿಸದ ಕಾರಣ, ಶುಕ್ರವಾರದಿಂದ ಪೊಲೀಸರು ಮತ್ತು ಪುರಸಭೆ ಸಿಬ್ಬಂದಿ ಸಹಕಾರದಿಂದ ಕೆರೆಯಲ್ಲಿ ಅಕ್ರಮ ಚಟುವಟಿಕೆ ನಡೆಸಲು ಮುಂದಾಗುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕೆರೆಯ ನೀರನ್ನು ಸಂರಕ್ಷಿಸಲು ಸಾಧ್ಯವಿರುವ ಕ್ರಮ ಕೈಗೊಳ್ಳಲಾಗುವುದೆಂದರು.
ದೂರು ನೀಡಿದ ಸ್ಥಳೀಯರು
ಗುರುವಾರ ಸಂಜೆ ನಾಲ್ಕರ ವೇಳೆಗೆ ಕೆರೆಯಲ್ಲಿ ಕೆಲವರು ಸಾಕುಪ್ರಾಣಿಗಳನ್ನು ತೊಳೆದು ಬಿಟ್ಟಿದ್ದು, ನೂರಾರು ಯುವಕರು ಸ್ನಾನಕ್ಕೆ ಇಳಿದಿದ್ದರು. ಇದನ್ನು ಕಂಡ ನಾಗರಿಕರಾದ ಗಂಗಾಧರ, ಲಕ್ಷ್ಮಣ ಇತರರು ಪುರಸಭಾಧ್ಯಕ್ಷರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

