ಉಚ್ಚಿಲದಲ್ಲಿ ತ್ಯಾಜ್ಯ ಸಮಸ್ಯೆ ಉಲ್ಬಣ
ಪಡುಬಿದ್ರಿ: ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಪೇಟೆ ಮುಂದಿನ ದಿನಗಳಲ್ಲಿ ಪಂಚಾಯತ್ ಪ್ರಾಯೋಜಿತ 2ನೇ ಬೀಡಿನಗುಡ್ಡೆ(ಉಡುಪಿ ನಗರದಲ್ಲಿ ಹಲವಾರು ವರ್ಷಗಳಿಂದ ಭಾರೀ ಸಮಸ್ಯೆಗೆ ಕಾರಣವಾಗಿದ್ದ ಡಂಪಿಂಗ್ ಯಾರ್ಡ್) ಯಾಗಿ ಕುಖ್ಯಾತಿ ಪಡೆಯುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ.
ಉಚ್ಚಿಲ ಬಡಾ ಗ್ರಾಮದ ತ್ಯಾಜ್ಯ ವಿಲೇವಾರಿಗಾಗಿ ಖಾಲಿ ಜಾಗವನ್ನು ಗ್ರಾ.ಪಂ. ಗುರುತಿಸಿಲ್ಲ. ಆದರೂ ಜನರು ಇದುವರೆಗೆ ತಂತಮ್ಮ ಮನೆಗಳ ಪಕ್ಕದಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರು. ಆದ್ದರಿಂದ ಇಲ್ಲಿ ಇದುವರೆಗೆ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿರಲಿಲ್ಲ.
ಆದರೆ ಕೆಲ ದಿನಗಳ ಹಿಂದೆ ಸಂಘಟನೆಯೊಂದರ ಸದಸ್ಯರು ಉಚ್ಚಿಲ ಗ್ರಾಮವನ್ನು ಸ್ವಚ್ಛಗೊಳಿಸಿ ಪೇಟೆಯ ಪಕ್ಕದ ಕೋಳಿ ಫಾರ್ಮ್ ಬಳಿ ಗುಂಡಿ ಮಾಡಿ ಅಲ್ಲಿ ತ್ಯಾಜ್ಯಗಳನ್ನು ರಾಶಿ ಹಾಕಿ ಬೆಂಕಿ ಇಟ್ಟಿದ್ದರು. ಅಲ್ಲಿಂದ ಪ್ರಾರಂಭವಾಗಿದೆ. ಉಚ್ಚಿಲ ಪೇಟೆಯಲ್ಲಿ ಹೊಸ ಡಂಪಿಂಗ್ ಯಾರ್ಡ್ ಮತ್ತು ಆ ಮೂಲಕ ಹೊಸ ಸಮಸ್ಯೆ.
ಖಾಸಗಿ ವ್ಯಕ್ತಿಯಿಂದ ಕಸ ಸಂಗ್ರಹ: ಇದೀಗ ಉಚ್ಚಿಲದಲ್ಲಿ ಖಾಸಗಿಯವರೊಬ್ಬರು ಪ್ರತಿ ಮನೆಯಿಂದ ತಿಂಗಳಿಗೆ ರು. 100 ಪಡೆದು ತ್ಯಾಜ್ಯವನ್ನು ಸಂಗ್ರಹಿಸಿ ತನ್ನ ಟೆಂಪೋದಲ್ಲಿ ಪಡೆಯುತ್ತಾರೆ. ಆರಂಭದಲ್ಲಿ ಈ ಟೆಂಪೋದಲ್ಲಿ ಉಚ್ಚಿಲ ಗ್ರಾ.ಪಂ. ಎಂದು ಬರೆದಿತ್ತು. ಗ್ರಾಪಂ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅದನ್ನು ತೆಗೆಯಲಾಗಿದೆ. ಈ ತ್ಯಾಜ್ಯವನ್ನೂ ಉಚ್ಚಿಲ ಪೇಟೆಯ ಪಕ್ಕದ ಗುಂಡಿಯಲ್ಲಿ ಸುರಿಯಲಾಗುತಿದ್ದು, ತ್ಯಾಜ್ಯ ರಾಶಿ ದೊಡ್ಡದಾಗುತ್ತಾ ಕೊಳೆಯುತ್ತಾ, ದುರ್ವಾಸನೆ ಬೀರುತ್ತಾ ಸಮಸ್ಯೆ ಬೃಹದಾಕಾರ ತಾಳಿದೆ.
ಅಲ್ಲದೇ ಆಗಾಗ್ಗೆ ಈ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಪರಿಸರ ದುರ್ವಾಸನೆ ಹೊಗೆಮಯವಾಗುತ್ತಿದ್ದು, ಸ್ಥಳೀಯ ಅಂಗಡಿಗಳು ಹಾಗೂ ಬಸ್ಸು ನಿಲ್ದಾಣದಲ್ಲಿ ನಿಲ್ಲುವುದು ಅಸಹನೀಯವಾಗಿದೆ. ಈ ಸಮಸ್ಯೆಯ ಬಗ್ಗೆ ಉಚ್ಚಿಲ ಬಡಾ ಗ್ರಾಪಂ ದೂರ ನೀಡಲಾಗಿದೆ.
ಈ ಗ್ರಾಮದಲ್ಲಿ ಯಾರಿಗೂ ತ್ಯಾಜ್ಯ ಸಂಗ್ರಹದ ಗುತ್ತಿಗೆ ನೀಡಲಾಗಿಲ್ಲ. ಈ ಖಾಸಗಿ ವ್ಯಕ್ತಿಗಳು ಸಂಗ್ರಹಿಸುವ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಅದರೆ ಅವರು ಪೇಟೆಯಲ್ಲಿ ಸುರಿಯುತ್ತಿದ್ದುದು ನಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಾಪ್ಚಂದ್ರ ಶೆಟ್ಟಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

