ಉಡುಪಿ

ಮಾಜಿ ಯೋಧನ ಕೊಲೆ ಆರೋಪಿಗೆ ಜೀವಾವಧಿ

Published On :

ಕ.ಪ್ರ. ವಾರ್ತೆ , ಉಡುಪಿ ,ಏ.20
ಮಾಜಿ ಯೋಧರೊಬ್ಬರನ್ನು ಕೊಲೆ ಮಾಡಿದ ದೆಹಲಿ ಮೂಲದ ಆರೋಪಿಗೆ ಉಡುಪಿ ಜಿಲ್ಲಾ ತ್ವರಿತ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮರಬೆಟ್ಟು ಗ್ರಾಮದ ವಾಸಿ ತನಿಯಪ್ಪ (56) ಎಂಬವರನ್ನು ನವದೆಹಲಿಯ ಧರ್ಮೇಂದ್ರ ಶರ್ಮ (39) ಕೊಲೆ ಮಾಡಿದ್ದರು.
ಸೇನೆಯಲ್ಲಿದ್ದ ತನಿಯಪ್ಪ ನಿವೃತ್ತಿಯ ನಂತರ ತನ್ನ ದೆಹಲಿ ಮೂಲದ ಪತ್ನಿ ಸುಮನಾ ಹಾಗೂ ಮಕ್ಕಳೊಂದಿಗೆ ಬೊಮ್ಮರಬೆಟ್ಟು ಗ್ರಾಮದಲ್ಲಿ ವಾಸಿಸುತ್ತಿದ್ದರು. ಪತ್ನಿಯ ಸಂಬಂಧಿ ಧಮೇಂದ್ರ ಶರ್ಮ 2010ರಲ್ಲಿ ಬೊಮ್ಮರಬೆಟ್ಟಿಗೆ ಬಂದಿದ್ದು, ಸುಮನಾ ಅವರೊಂದಿಗೆ ಅತೀ ಸಲುಗೆಯಿಂದ ಇದ್ದುದು ಕಂಡು ತನಿಯಪ್ಪ ಕರೆದು ಬುದ್ಧಿವಾದ ಹೇಳಿದ್ದರು. ಕೇಳದಿದ್ದಾಗ ಆತನನ್ನು ಮನೆಯಿಂದ ಹೊರ ಹಾಕಿದ್ದರು.
ನಂತರ ಶರ್ಮ ಮಣಿಪಾಲದ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಟೈಲರ್ ಆಗಿ ಕೆಲಸಕ್ಕೆ ಸೇರಿದ್ದು, ಆಗಾಗ ತನಿಯಪ್ಪ ಅವರ ಮನೆಗೆ ಬರುತ್ತಿದ್ದ ಮತ್ತು ಸುಮನಾ ಅವರೊಂದಿಗೆ ಫೋನ್‌ನಲ್ಲಿ ಸಂಪರ್ಕ ಇಟ್ಟುಕೊಂಡಿದ್ದ. ಇದನ್ನು ತಿಳಿದ ತನಿಯಪ್ಪ ಈ ಬಗ್ಗೆ ಕಠಿಣವಾಗಿ ಆಕ್ಷೇಪಿಸಿದ್ದರು. ಇದರಿಂದ ಸಿಟ್ಟಾದ ಶರ್ಮ ತನಿಯಪ್ಪನಿದ್ದರೆ ತನಗೆ ಸುಮನಾ ಅವರನ್ನು ಭೇಟಿಯಾಗಲು ಅಡ್ಡಿಯಾಗುತ್ತದೆ ಎಂದು 2010ರ ಸೆ. 16 ರಾತ್ರಿ 10.30 ಗಂಟೆಗೆ ಅವರ ಮನೆಯಲ್ಲಿಯೇ ಹರಿತವಾದ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ.
ಈ ಆರೋಪವು ಸಾಬೀತಾಗಿದ್ದು, ಉಡುಪಿಯ ಶೀಘ್ರ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶ ಜಿ.ಎಸ್. ರೇವಣಕರ ಶನಿವಾರ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.