ಅನುದಾನ ಬಂದರೂ ಬಗೆಹರಿಯದ ಕೊರಗರ ಸಮಸ್ಯೆ: ಮಧ್ವರಾಜ್
ಉಡುಪಿ: ಕೊರಗ ಸಮುದಾಯದ ಅಭಿವೃದ್ಧಿಗಾಗಿ ಉಡುಪಿ ಜಿಲ್ಲೆಗೆ ಸರ್ಕಾರದಿಂದ ರು. 5 ಕೋಟಿ ಅನುದಾನ ಬರುತ್ತಿದೆ. ಆದರೆ ಇವತ್ತಿಗೂ ಅನೇಕ ಕಡೆ ಕೊರಗ ಸಮುದಾಯದ ಜನರ ಸಮಸ್ಯೆಗಳು ಬಗೆಹರಿಯದಿರುವುದು ಅತಿ ಬೇಸರದ ಸಂಗತಿ ಎಂದು ಶಾಸಕ ಪ್ರಮೋದ್ ಮಧ್ವರಾಜ್ ವಿಷಾದ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಆದಿ ಉಡುಪಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಉಡುಪಿ ಜಿಲ್ಲಾ ಕೊರಗರ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಕೊರಗ ಸಮಾಜ ಬಾಂಧವರಿಗೆ ಜನಪ್ರತಿನಿಧಿಗಳ ಸ್ಪಂದನ ಮತ್ತು ಉಡುಪಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ವತಿಯಿಂದ ಹಮ್ಮಿಕೊಂಡ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊರಗ ಸಮುದಾಯದ ಪ್ರತಿ ಮನೆಗೆ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅವರ ಸಮಸ್ಯೆಗಳ ಬಗ್ಗೆ ಪಟ್ಟಿ ತಯಾರಿಸಿ ಅದನ್ನು ಬಗೆಹರಿಸುವಲ್ಲಿ ಮುಂದಾದಾಗ ಮಾತ್ರ ಕೊರಗ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಪ್ರಮೋದ್ ಮಧ್ವರಾಜ್, ಇದೀಗ ಬಿಪಿಎಲ್ ಕಾರ್ಡ್ ಪ್ರಕ್ರಿಯೆಯಲ್ಲಿ ಸರಳೀಕರಣ ಮಾಡಲಾಗಿದೆ. ಎಪಿಎಲ್ ಇದ್ದರೂ ಅದನ್ನು ಬಿಪಿಎಲ್ ಕಾರ್ಡ್ಗೆ ಪರಿವರ್ತಿಸಲು ಸಾಧ್ಯವಿದೆ. ಕೊರಗ ಸಮುದಾಯದ ಪ್ರತಿಯೊಬ್ಬರೂ ಈ ಬಿಪಿಎಲ್ ಕಾರ್ಡನ್ನು ಹೊಂದಬೇಕು, ಇದು ನಿಮ್ಮ ಹಕ್ಕು ಎಂದರು.
ಸ್ವಾಭಿಮಾನದಿಂದ ಬದುಕಿ: ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೊರಗ ಸಮುದಾಯವರು ಕೀಳರಿಮೆ ಬಿಟ್ಟು ಸಮಾಜದ ಎಲ್ಲರ ನಡುವೆ ಸ್ವಾಭಿಮಾನಿ ಬದುಕನ್ನು ಬದುಕುವ ಛಲ ಹೊಂದಿರಬೇಕು. ಜತೆಗೆ ಮಕ್ಕಳಿಗೆ ಶಿಕ್ಷಣ ನೀಡುವತ್ತ ಮುಖ್ಯವಾಗಿ ಹೆಚ್ಚಿನ ಗಮನ ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಡಿ. ಪ್ರಭುಲಿಂಗು, ಜಿಲ್ಲಾ ಗಿರಿಜನ ಸಮನ್ವಯ ಯೋಜನಾಧಿಕಾರಿ ಉದಯ ಶೆಟ್ಟಿ, ಜಿಲ್ಲಾ ಸರ್ಜನ್ ಡಾ. ಆನಂದ ನಾಯ್ಕ್ ಎಚ್, ಸಂಘದ ಅಧ್ಯಕ್ಷ ರವಿ ಕೆ. ಅಲೆವೂರು ಇದ್ದರು. ಉಡುಪಿ ಜಿಲ್ಲಾ ಕೊರಗರ ಸೇವಾ ಅಭಿವೃದ್ಧಿ ಸಂಘದ ಸದಸ್ಯ ಮೋಹನ ಉಡುಪ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಗಣೇಶ್ ಸ್ವಾಗತಿಸಿದರು. ಈ ಸಂದರ್ಭ ಉಡುಪಿ ಜಿಲ್ಲಾ ಕೊರಗರ ಸೇವಾ ಅಭಿವೃದ್ಧಿ ಸಂಘ ವತಿಯಿಂದ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಸಂಘದ ಅಧ್ಯಕ್ಷ ರವಿ ಕೆ. ಅಲೆವೂರು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

