ಉಡುಪಿ

ಉಡುಪಿ ಕೃಷ್ಣನಿಗೆ ಇಂದು ಲಡ್ಡು, ಚಕ್ಕುಲಿ

Published On :

ಉಡುಪಿ: ಉಡುಪಿಯ ಕಡೆಗೋಲು ಹಿಡಿದ ಬಾಲಕೃಷ್ಣನಿಗೆ ಬುಧವಾರ ಮಧ್ಯರಾತ್ರಿ 2 ಲಕ್ಷ ಲಡ್ಡು, 1 ಲಕ್ಷ ಚಕ್ಕುಲಿ ಸಮರ್ಪಣೆಯಾಗಲಿವೆ.
 ಗುರುವಾರ ನಾಡಿನಾದ್ಯಂತ ಶ್ರದ್ಧಾಭಕ್ತಿ- ಸಂಭ್ರಮದಿಂದ ಶ್ರೀ ಕೃಷ್ಣ ಜಯಂತಿ ಆಚರಣೆ ನಡೆಯಲಿದೆ. ಅದಕ್ಕೆ ಮುನ್ನಾದಿನವಾದ ಬುಧವಾರ ಉಡುಪಿ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ಶ್ರೀ ಕೃಷ್ಣ ಅವತರಿಸಿದ ಗಳಿಗೆಯಲ್ಲಿ ಪರ್ಯಾಯ ಶ್ರೀಗಳು ಕೃಷ್ಣನಿಗೆ ಮತ್ತು ಅವತಾರದ ಗಳಿಗೆಗೆ ಕಾರಣನಾದ ಚಂದ್ರನಿಗೆ ಸರ್ವ ಕೃಷ್ಣ ಭಕ್ತರ ಪರವಾಗಿ ಕೃತಜ್ಞತಾಪೂರ್ವಕ ಅರ್ಘ್ಯ ಪ್ರದಾನ ಮಾಡಲಿದ್ದಾರೆ. ಬುಧವಾರ ಮಧ್ಯರಾತ್ರಿ 12.10ಕ್ಕೆ ಈ ಗಳಿಗೆ ಒದಗಿ ಬರಲಿದೆ. ಈ ಸಂದರ್ಭದಲ್ಲಿ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಲಡ್ಡು ಮತ್ತು ಚಕ್ಕುಲಿಗಳನ್ನು ಸಮರ್ಪಿಸಲಾಗುವುದು.
 ಕೃಷ್ಣನಿಗೆ ಸಮರ್ಪಿಸುವ ಈ ಲಡ್ಡು, ಚಕ್ಕುಲಿಗಳನ್ನು 80 ಮಂದಿ ಬಾಣಸಿಗರು ಕಳೆದ 3 ದಿನಗಳಿಂದ ತಯಾರಿಸುತ್ತಿದ್ದಾರೆ. ಪರಂಪರೆಯಂತೆ ಸ್ವತಃ ಪರ್ಯಾಯ ಪೀಠಾಧೀಶರಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಸಾಂಕೇತಿಕವಾಗಿ ಲಡ್ಡು ತಯಾರಿಸುವ ಮೂಲಕ ಈ ಭಕ್ಷ್ಯ ತಯಾರಿಗೆ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿದರು. ಕೃಷ್ಣನಿಗೆ ಸಮರ್ಪಿಸಿದ ಈ ಭಕ್ಷ್ಯಗಳನ್ನು ನಂತರ  ಉಡುಪಿಯ ಶಾಲೆಗಳ ಪುಟಾಣಿಗಳಿಗೆ ಪ್ರಸಾದದ ರೂಪದಲ್ಲಿ ವಿತರಿಸುವುದಕ್ಕೆ ಆಯಾಯ ಶಾಲೆಗಳಿಗೆ ಕಳುಹಿಸುವುದು ವಾಡಿಕೆಯಾಗಿದೆ.
ಉತ್ಸವಕ್ಕೆ ಭರದ ಸಿದ್ಧತೆ:  ನಾಳೆ ರಥ ಬೀದಿಯಲ್ಲಿ ವೈಭವದ ಕೃಷ್ಣ ಲೀಲೋತ್ಸವ ನಡೆಯಲಿದೆ. ಇದರಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸಲಿದ್ದಾರೆ. ಈ ಉತ್ಸವದ ಮುಖ್ಯ ಆಕರ್ಷಣೆ ಎಂದರೇ ಗೊಲ್ಲ ವೇಷಧಾರಿಗಳು ಎತ್ತರದ ಕಮಾನು (ಗುರ್ಜಿ)ಗಳ ಮೇಲೆ ಕಟ್ಟಿರುವ ಮೊಸರು, ಓಕುಳಿ ನೀರು, ಪಂಚಕಜ್ಜಾಯ ಇತ್ಯಾದಿಗಳಿರುವ ಮಣ್ಣಿನ ಕುಡಿಕೆಗಳನ್ನು ಕೋಲುಗಳಿಂದ ಒಡೆಯುವ ಆಟ. ಅದಕ್ಕಾಗಿ ರಥಬೀದಿಯ 6 ಕಡೆಗಳಲ್ಲಿ ಈಗಾಗಲೇ ಗುರ್ಜಿಗಳನ್ನು ನಿರ್ಮಿಸಲಾಗಿದೆ.
ಕಳೆದೊಂದು ವಾರದಿಂದ ಕೃಷ್ಣ ಜಯಂತಿಯ ಪ್ರಯಕ್ತ ಕೃಷ್ಣ ಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಒಂದು ಕಡೆಯಲ್ಲಿ ರಾಷ್ಟ್ರೀಯ ಮಟ್ಟದ ಸಂಗೀತ ಕಲಾವಿದರಿಂದ ಸಂಗೀತ ಕಛೇರಿಗಳು ನಡೆಯುತ್ತಿವೆ. ಇನ್ನೊಂದು ಕಡೆಯಲ್ಲಿ ರಂಗೋಲಿ ಹಾಕುವ, ಭಕ್ತಿಗೀತೆ ಹಾಡುವ, ಕೃಷ್ಣನ ಮಣ್ಣಿನ ಮೂರ್ತಿ ತಯಾರಿಸುವ ಸ್ಪರ್ಧೆಗಳು ನಡೆಯುತ್ತಿವೆ. ನಾಳೆ ಮಕ್ಕಳಿಗೆ ಮದ್ದುಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಕೈಚಳಕ ತೋರಿಸುವವರೇ ಹುಷಾರ್..
ಪ್ರತಿ ಬಾರಿ ಉಡುಪಿಯ ರಥಬೀದಿಯಲ್ಲಿ ಕೃಷ್ಣ ಜಯಂತಿ- ಲೀಲೋತ್ಸವ ಸಂದರ್ಭ ಸರಗಳ್ಳತನ, ಕಿಸೆಗಳ್ಳತನ, ಯುವತಿಯರ ಚುಡಾಯಿಸುವುದು ಇತ್ಯಾದಿ ಒಂದಷ್ಟು ಮಾಮೂಲಿಯಾಗಿ ನಡೆಯುತ್ತದೆ. ಆದರೆ ಈ ಬಾರಿ ಅಂತಹ ಕೈಚಳಕ ತೋರಿಸಲಿಕ್ಕಾಗಿಯೇ ಬರುವವರು ನೇರವಾಗಿ ಲಾಕಪ್ ಸೇರುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ. ಈಗಾಗಲೇ ಎಲ್ಲ ಅಷ್ಟಮಠಗಳು ಪೊಲೀಸ್ ಇಲಾಖೆ ಸೂಚನೆಯಂತೆ ತಮ್ಮ ಮಠದ ಮುಂಭಾಗ ಮತ್ತು ಒಳಗೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿಕೊಂಡಿವೆ. ಜತೆಗೆ ರಥಬೀದಿಯನ್ನು ಸೇರುವ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯ ಕ್ಯಾಮರಾಗಳಿವೆ. ಕೃಷ್ಣ ಲೀಲೋತ್ಸವ ಪ್ರಯುಕ್ತ ಪೊಲೀಸ್ ಇಲಾಖೆ ಒಂದಷ್ಟು ಆಯಕಟ್ಟಿನ ಪ್ರದೇಶಗಳಲ್ಲೂ ವಿಡಿಯೋ ಕ್ಯಾಮರಾಗಳನ್ನು ಅಳವಡಿಸಿದೆ. ಕೃಷ್ಣಮಠದಲ್ಲಿ ಈ ಎಲ್ಲ ಕ್ಯಾಮರಾಗಳಿಂದ ದೃಶ್ಯಗಳನ್ನು ವೀಕ್ಷಿಸುವ ವ್ಯವಸ್ಥೆ ಇದೆ.
2 ಮೀಸಲು ಪೊಲೀಸ್ ಪಡೆಯ ತುಕಡಿ, 3 ಸಶಸ್ತ್ರ ಮೀಸಲು ಪಡೆಯ ತುಕಡಿಗಳು, ಹೋಮ್‌ಗಾರ್ಡ್ಸ್ ಸೇರಿದಂತೆ ಒಟ್ಟು 250 ಮಂದಿ ಪೊಲೀಸ್ ಸಿಬ್ಬಂದಿಯನ್ನು ರಥಬೀದಿ ಮತ್ತು ಸುತ್ತಲಿನ ಬೀದಿಗಳಲ್ಲಿ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ಎಸ್ಪಿ ಡಾ. ಬೋರಲಿಂಗಯ್ಯ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಪರ್ಯಾಯ ಶ್ರೀಗಳ ಶ್ರೀಕೃಷ್ಣ ಜಯಂತ್ಯುತ್ಸವ ಅಮೃತ ಸಂದೇಶ
ಇತಿಹಾಸದಲ್ಲಿ ಚಿತ್ರಿತನಾದ ಶ್ರೀಕೃಷ್ಣಪರಮಾತ್ಮನಿಂದ ಕಲಿಯಬೇಕಾದ ಆದರ್ಶಗುಣಗಳು ಅನಂತ ಇದ್ದಾವೆ. ಇವತ್ತಿನ ರಾಜ್ಯದ ವ್ಯವಸ್ಥೆ ನಡೆಸುವ ಅಧಿಕಾರಿಗಳು ಯಾವ ಕ್ರಮದಲ್ಲಿ ಅಧಿಕಾರವನ್ನು ಮುನ್ನಡೆಸಿಕೊಂಡು ಹೋಗಬೇಕೆಂದು ಅನ್ನುವುದಕ್ಕೆ ಶ್ರೀಕೃಷ್ಣನ ಪ್ರತಿಯೊಂದು ನಡತೆಯೂ ಆದರ್ಶವಾಗಿದೆ. ಸಮಗ್ರ ಸಮಾಜಕ್ಕೆ ಹಿರಿಯ ಮುತ್ಸದ್ಧಿಯಾಗಿ ನಿಂತು ಕೃಷ್ಣನು ರಾಜರಿಂದ ಹಿಡಿದು ಪ್ರಜೆಗಳ ತನಕ ಪ್ರತಿಯೊಬ್ಬರ ಕರ್ತವ್ಯವೇನು ಅನ್ನುವುದನ್ನು ತನ್ನ ಬದುಕಿನಲ್ಲಿ ತೋರಿಸಿಕೊಟ್ಟಿದ್ದಾನೆ.
ಶ್ರೀಕೃಷ್ಣಪರಮಾತ್ಮನು ಕುಟುಂಬ ರಾಜಕಾರಣವನ್ನು ನಿರಾಕರಣೆ ಮಾಡಿದ್ದಾನೆ. ಅಧಿಕಾರಿಶಾಹಿ ವ್ಯಕ್ತಿತ್ವವನ್ನು ತನ್ನ ಬದುಕಿನಿಂದ ದೂರ ಇಟ್ಟಿದ್ದಾನೆ. ಅಬಲೆಯರಿಗಾದ, ಸ್ತ್ರೀಯರಿಗಾದ ಅನ್ಯಾಯವನ್ನು ಹತ್ತಿಕ್ಕಿದ್ದಾನೆ, ತಡೆದದ್ದು ಮಾತ್ರವಲ್ಲ ಅಂತಹವರಿಗೆ ಆಶ್ರಯದಾತನೂ ಆಗಿದ್ದಾನೆ. ಅನೇಕ ರಾಜರ ಕಷ್ಟಕಾರ್ಪಣ್ಯಗಳಿಗೆ ಸ್ಪಂದನ ಮಾಡಿದ್ದಾನೆ. ಜಗತ್ತಿನ ಯಾವ ಮೂಲೆಯಲ್ಲಿ ಭಯೋತ್ಪಾದನೆ ನಡೆಯುತ್ತಾ ಇದ್ದರೂ ಕೂಡಾ ಅದನ್ನು ನಿಗ್ರಹಿಸಿದ್ದಾನೆ. ಇವತ್ತಿನ ಸಮಾಜದಲ್ಲಿ ಭಯೋತ್ಪಾದನೆ ಅತಿಯಾಗಿದೆ. ಅದಕ್ಕೆ ಶ್ರೀಕೃಷ್ಣನ ಆದರ್ಶಗಳು ತುಂಬಾ ಅಗತ್ಯವಾಗಿದೆ. ಕುಟುಂಬ ರಾಜಕಾರಣವೂ ಕೂಡಾ ಬೆಳೆಯುವಂತಹ ಸಮಾಜ ಕೂಡಾ ನಿರ್ಮಾಣವಾಗುತ್ತಾ ಇದೆ. ಅದಕ್ಕೂ ಉತ್ತರವಾಗಿ ಕೃಷ್ಣನ ಬದುಕು ಮಾರ್ಗದರ್ಶನ ನೀಡುತ್ತದೆ. ಕಂಸನನ್ನು ಸಂಹಾರ ಮಾಡಿದ ಕೃಷ್ಣ, ಉಗ್ರಸೇನನನ್ನು ಪಟ್ಟದಲ್ಲಿ ಕುಳ್ಳಿರಿಸಿದ. ಆದರೆ ಅಧಿಕಾರ ಬಯಸಿರಲಿಲ್ಲ. ಜರಾಸಂಧನನ್ನು ಸಂಹಾರ ಮಾಡಿ ಯೋಗ್ಯನಾದ ಅವನ ಮಗನನ್ನು ಪಟ್ಟದಲ್ಲಿ ಕುಳ್ಳಿರಿಸಿದ. ಸ್ವತಃ ತನ್ನ ಮಗನೇ ಆದ ನರಕಾಸುರನು ಭಯೋತ್ಪದನಾ ಮಾರ್ಗದಲ್ಲಿ ನಡೆದಾಗ ಅವನನ್ನು ಸಂಹರಿಸಿ, ಆ ದೇಶದಲ್ಲಿ ಅತ್ಯಂತ ಪ್ರಾಮಾಣಿಕನಾದ ಭಗದತ್ತನನ್ನು ರಾಜನನ್ನಾಗಿಸಿದ. ಮಥುರೆಯ ನಾಗರಿಕರಿಗೆಲ್ಲಾ ಆಪತ್ತು ಒದಗಿ ಬಂದಾಗ ದ್ವಾರಕಾ ಪಟ್ಟಣವನ್ನೇ ನಿರ್ಮಾಣ ಮಾಡಿ ಪ್ರಜೆಗಳಿಗೆ ಸಾಂತ್ವನವನ್ನು ನೀಡಿದ. ಅಬಲೆಯರಾದ ಸ್ತ್ರೀಯರು  ನರಕಾಸುರರಿಂದ ಅತಿಕ್ರಮಣಕ್ಕೆ ತುತ್ತಾದಾಗ ಸ್ತ್ರೀಯರ ಬಂಧನದಿಂದ ಬಿಡುಗಡೆಮಾಡಿ ಸ್ತ್ರೀಯರ ಮೇಲೆ ತೋರಬೇಕಾದ ಸಾತ್ವಿಕ ಭಾವನೆ ಏನು ಅನ್ನುವುದನ್ನು ಜಗತ್ತಿಗೆ ತೋರಿಸಿದ. ಈ ಅಭಿಪ್ರಾಯದಲ್ಲಿ ನರಕ ಚತುರ್ದಶಿಯನ್ನು ನಾವು ಅನುಷ್ಠಾನ ಮಾಡುತ್ತಾ ಇದ್ದೇವೆ. ದೀಪಾವಳಿಯ
ಸಂಭ್ರಮವನ್ನು ಹಬ್ಬವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಇಷ್ಟು ಮಾತ್ರವಲ್ಲ ಶ್ರೀಕೃಷ್ಣಪರಮಾತ್ಮ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ, ಭೂತದಯಾಪರನಾಗಿದ್ದಾನೆ. ಪ್ರಾಣಿಗಳಿಗೆ ಕುದುರೆಯ ಮೂಲಕ ಮೈ ತೊಳೆದಿದ್ದಾನೆ, ದನ ಹಸು ಕರುಗಳಿಗೆ ಆಹಾರ ನೀಡಿದ್ದಾನೆ. ಎಲ್ಲ ವಿಧವಾದ ವರ್ಗದವರನ್ನೂ ತನ್ನ ಮಕ್ಕಳಂತೆ ನೋಡಿದ್ದಾನೆ. ಪ್ರೀತಿಯಿಂದ ಸ್ನೇಹಿತರಂತೆ ನೋಡಿದ್ದಾನೆ. ಹೀಗೆ ಸ್ವತಃ ತಾನು ಒಬ್ಬ ಸಾಂದೀಪಿನಿ ಮುನಿಗಳ ಆಶ್ರಮಕ್ಕೆ ಹೋಗಿ ಗುರುಗಳ ಸೇವೆಯನ್ನು ಮಾಡಿ ವಿದ್ಯಾಭ್ಯಾಸ ಪದ್ಧತಿಯನ್ನು ತೋರಿಸಿಕೊಟ್ಟಿದ್ದಾನೆ.
 ಸಮಾಜದ ಉನ್ನತಿಗೆ ಬೇಕಾದ ಎಲ್ಲ ಮುಖದ ಆದರ್ಶಗಳಿಗೆ ಒಂದು ಪ್ರತೀಕ ಶ್ರೀಕೃಷ್ಣ ಪರಮಾತ್ಮ. ಮಹಿಳೆಯರಿಗೆ ಬೇಕಾದ ಆದರ್ಶಗಳನ್ನು, ಮಕ್ಕಳಿಗೆ ಬೇಕಾದ ನೀತಿ, ರಾಜರಿಗೆ ಬೇಕಾದ ಲೋಕೋದ್ಧಾತ ಗುಣಗಳು, ಹೆಂಡತಿಯರಿಗೆ ಹೇಳಬೇಕಾದ ಕಾಂತಾಸಂಹಿತೆಯ ಉಪದೇಶ, ಜಗತ್ತಿಗೆ ಒಬ್ಬ ಮುತ್ಸದ್ಧಿತನದಲ್ಲಿ ಇರಬೇಕಾದ, ಒಬ್ಬ ಅಳವಡಿಕೊಳ್ಳಬೇಕಾದ ಜೀವೋದ್ಧಾತ ಗುಣಗಳು ಇವೆಲ್ಲವುದಕ್ಕೂ ಕೂಡಾ ಆದರ್ಶವಾಗಿ ನಿಲ್ಲಬಲ್ಲ ವ್ಯಕ್ತಿ ಶ್ರೀಕೃಷ್ಣ ಪರಮಾತ್ಮ. ಈ ಅಭಿಪ್ರಾಯದಿಂದಲೇ ಜಗತ್ತಿಗೆ ಆದರ್ಶವನ್ನು ಸಂಕೇತಿಸುವ ಭಾವನೆಯಿಂದ ಶ್ರೀ
ಮದಾನಂದಭಗವತ್ಪಾದಾಚಾರ್ಯರು ಕೃಷ್ಣ ಎಂದರೆ ಒಂದು ಆದರ್ಶಗುಣಗಳ ಸಂಕೇತ ಎಂಬ ಅಭಿಪ್ರಾಯದಿಂದ ಕೃಷ್ಣನನ್ನು ಉಡುಪಿಯಲ್ಲಿ ಸ್ಥಾಪಿಸಿದ್ದಾರೆ. ಶ್ರೀಮಧ್ವಾಚಾರ್ಯರ ಕಾಲದಿಂದಲೂ ಶ್ರೀಕೃಷ್ಣಜನ್ಮವ್ರತವನ್ನು ಅತ್ಯಂತ ವೈಭವದಿಂದ ನಾವೆಲ್ಲರೂ ಅನುಷ್ಠಾನಕ್ಕೆ ತಂದಿದ್ದೇವೆ. ಭಾವಿಸಮೀರರಾದ ಶ್ರೀವಾದಿರಾಜರು ಆ ಉತ್ಸವದ ವೈಭವವನ್ನು ತಮ್ಮದೇ ಆದ ಪದ್ಧತಿಯಲ್ಲಿ ಹೆಚ್ಚಿಸಿದ್ದಾರೆ. ಈ ಎಲ್ಲ ಉತ್ಸವಗಳು ಕೂಡಾ ಸಮಾಜಕ್ಕೆ ಬೇಕಾದ ಆದರ್ಶ ಗುಣಗಳನ್ನೇ ನಮ್ಮ ಪಾಲಿಗೆ ನೀಡುತ್ತಾ ಇವೆ ಎಂದು ಅರ್ಥ್ಥೈಸಿಕೊಂಡಲ್ಲಿ ದೇಶದಾದ್ಯಂತ ನಡೆಯುವ ಶ್ರೀಕೃಷ್ಣಜಯಂತ್ಯುತ್ಸವ ಒಂದು ಸಾರ್ಥಕತೆಯನ್ನು ಪಡೆಯುವುದರಲ್ಲಿ ಸಂಶಯವಿಲ್ಲ.
 ಈ ಉಡುಪಿಯಲ್ಲಿ ನಡೆಯುವಂತಹ ಶ್ರೀಕೃಷ್ಣಜಯಂತ್ಯುತ್ಸವದಲ್ಲಿ ನಡೆಯುವ ಅನೇಕ ಛದ್ಮವೇಷಗಳು ಬೇರೆ ಬೇರೆ ಮುಖದ ಛದ್ಮವೇಷಗಳು, ಮಕ್ಕಳಾದಿಯಾಗಿ ವೃದ್ಧರ ತನಕ ಹುರಿದುಂಬಿಸುವ ಅನೇಕ ರೀತಿಯಾದ ಪ್ರೋತ್ಸಾಹಕಾರಿಯಾದ ಸ್ಪರ್ಧೆ, ಕ್ರೀಡೆ ಇವುಗಳೆಲ್ಲೆಲ್ಲಾ  ಶ್ರೀಕೃಷ್ಣಭಕ್ತರು ಈಗಾಗಲೇ ಭಾಗವಹಿಸಿರುತ್ತಾರೆ. ಅವರನ್ನು ಪ್ರೋತ್ಸಾಹಿಸುವಂತಹ ಅನೇಕ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಗವದ್ಭಕ್ತರೆಲ್ಲಾ ಜನ್ಮಾಷ್ಟಮೀ ವ್ರತದಲ್ಲಿ ಭಾಗವಹಿಸಿ ಶ್ರೀಕೃಷ್ಣನ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸುವುದರ ಮೂಲಕ ಈ ವ್ರತವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ.
ಶ್ರೀಕೃರ್ಷಾರ್ಪಣ ಮಸ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.