ಮಕ್ಕಳ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಲಿ: ಅನುಜ್ಞಾ
ಮಂಗಳೂರು: 'ಮಕ್ಕಳು ರಚಿಸಿದ ಸಾಹಿತ್ಯವನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯದಲ್ಲಿ ಮಕ್ಕಳ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಲಿ' ಎಂದು ಮಕ್ಕಳ ಧ್ವನಿ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನಾಧ್ಯಕ್ಷೆ ಅನುಜ್ಞಾ ಹೇಳಿದ್ದಾರೆ.
ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಶನಿವಾರ ಶಾರದಾ ವಿದ್ಯಾಲಯದಲ್ಲಿ ನಡೆದ 20ನೇ ವರ್ಷದ 'ಮಕ್ಕಳ ಧ್ವನಿ' ಮಕ್ಕಳ ಸಾಹಿತ್ಯಿಕ ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಸಾಹಿತ್ಯವನ್ನು ವಿಶ್ವವಿದ್ಯಾಲಯದ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಬೇಕು. ವಿಶ್ವವಿದ್ಯಾಲಯ ಗ್ರಂಥಾಲಯದಲ್ಲಿ ಮಕ್ಕಳಿಗೆ ಮಾಹಿತಿ ನೀಡುವ ಪುಸ್ತಕಗಳು ಕಡಿಮೆ ಬೆಲೆಗೆ ದೊರಕುವಂತಾಗಬೇಕು. ಪ್ರತಿಯೊಂದು ಶಾಲೆಯಲ್ಲಿಯೂ ಮಕ್ಕಳ ಧ್ವನಿ ಕಾರ್ಯಕ್ರಮ ನಡೆದಾಗ ಇನ್ನಷ್ಟು ಪ್ರತಿಭೆಗಳು ಅರಳಲು ಸಾಧ್ಯ. ಆಕಾಶವಾಣಿ, ದೂರದರ್ಶನ ಮಕ್ಕಳ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ದ.ಕ. ಮತ್ತು ಉಡುಪಿ ತುಳುನಾಡಾದರೂ ಇಲ್ಲಿ ಕನ್ನಡದ ಕಂಪು ಇಷ್ಟೊಂದು ಪಸರಿಸಲು ಗಂಡು ಕಲೆ ಯಕ್ಷಗಾನ ಕಾರಣ. ಕರಾವಳಿಯಲ್ಲಿ ಅನೇಕ ಭಾಷೆಯಿದ್ದರೂ ಒಂದು ಭಾಷೆ ಮತ್ತೊಂದು ಭಾಷೆಗೆ ಪೂರಕವಾಗಿ ಬೆಂಬಲವಾಗಿ ನಿಂತಿದೆ ಎಂದು ಹೇಳಿದರು.
ಕನ್ನಡ ಭಾಷೆ ತನ್ನ ಉಳಿವಿಗಾಗಿ ಇತರ ಭಾಷೆಯೊಂದಿಗೆ ಪೈಪೋಟಿ ನಡೆಸುತ್ತಿದೆ. ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಏಕರೂಪ ನೀತಿಯಾಗಿ ಬಳಸಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ. ಅನ್ಯ ಭಾಷೆಯನ್ನು ಪೂರಕವಾಗಿ ಬಳಸಿ, ಕನ್ನಡಕ್ಕೆ ಪ್ರಥಮ ಆದ್ಯತೆ ನೀಡೋಣ ಎಂದು ಹೇಳಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಶಾರದಾ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ. ಪುರಾಣಿಕ್, ಉದ್ಯೋಗದ ಕಾಳಜಿ ವಹಿಸಿ ಇಂಗ್ಲಿಷ್ ಬೆನ್ನು ಹತ್ತಿ ಮಕ್ಕಳಲ್ಲಿನ ಪ್ರತಿಭೆಯನ್ನು ವ್ಯಕ್ತಪಡಿಸಲು ಅವಕಾಶ ಸಿಗದಂತಾಗಿದೆ. ಮಕ್ಕಳನ್ನು ಕೇವಲ ಅಂಕಕ್ಕಾಗಿ ಓದಿಸುತ್ತಿದ್ದು ಸರ್ವಾಂಗೀಣ ಬೆಳವಣಿಗೆ ಕುಂಠಿತಗೊಂಡಿದೆ. ಯೋಗ, ಸಂಸ್ಕೃತಿ, ನೀತಿ ಕಥೆಗಳಂಥ ಪಂಚಮುಖಿ ವಿದ್ಯಾಭ್ಯಾಸದ ಕೊರತೆಯಿದೆ. ಆಧುನಿಕ ಶಿಕ್ಷಣ ಕೇವಲ ಸರ್ಟಿಫಿಕೇಟ್ಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದರು.
ಮಕ್ಕಳ ಧ್ವನಿ-ವಿಂಶತಿ ಸ್ಮರಣ ಸಂಚಿಕೆಯನ್ನು ಉದ್ಯಮಿ ಬಿ. ರಘುನಾಥ ಸೋಮಯಾಜಿ ಬಿಡುಗಡೆಗೊಳಿಸಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು 2012ರಲ್ಲಿ ಪುಸ್ತಕ ಪ್ರಕಟಿಸಿದ ಪುಟಾಣಿಗಳಿಗೆ ಗೌರವಧನ ವಿತರಿಸಿದರು.
ಶಾರದಾ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷ ಕೆ.ಎಸ್. ಕಲ್ಲೂರಾಯ, ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಭಾರದ್ವಾಜ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

