ಕಡಲು ಗೆದ್ದ ಖಾರ್ವಿ ಗಿನ್ನಿಸ್ ದಾಖಲೆ
ಉಡುಪಿ: ಇಲ್ಲಿನ ಮಲ್ಪೆ ಸಮುದ್ರ ತೀರದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಅದ್ಭುತ ವಿಶ್ವದಾಖಲೆ ಸೃಷ್ಟಿಯಾಯಿತು.
ಇಲ್ಲಿನ ಕೋಡಿಕನ್ಯಾಣ ಗ್ರಾಮದ ಸಾಹಸಿ ಕಡಲು ಈಜುಗಾರ ಗೋಪಾಲ ಖಾರ್ವಿ ಸೈಂಟ್ ಮೇರೀಸ್ ದ್ವೀಪದಿಂದ ಮಲ್ಪೆ ತೀರದ ವರೆಗೆ ಸುಮಾರು 3.07 ಕಿ.ಮೀ. ದೂರವನ್ನು, ತನ್ನ ಕೈಗಳೆರಡನ್ನ್ನು ಬೆನ್ನ ಹಿಂದೆ ಕೋಳದಿಂದ ಬಿಗಿದು, ಕಾಲುಗಳನ್ನು ಸಂಕೋಲೆಯಿಂದ ಬಂಧಿಸಿಕೊಂಡು ಈಜುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದರು. ಮಾತ್ರವಲ್ಲ ಆ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ತಮ್ಮ ಹೆಸರಿನಲ್ಲಿ ಹೊಸ ದಾಖಲೆ ಬರೆದುಕೊಂಡರು.
ಬೆಳಗ್ಗೆ 7.37ಕ್ಕೆ ಸೇಂಟ್ ಮೇರಿಸ್ ದ್ವೀಪದಲ್ಲಿ ಉಡುಪಿಯ ಪೊಲೀಸ್ ವೃತ್ತ ನಿರೀಕ್ಷಕ ಮಾರುತಿ ನಾಯಕ್ ಅವರು ಗೋಪಾಲ ಖಾರ್ವಿ ಕೈ ಹಾಗೂ ಕಾಲುಗಳಿಗೆ ಕೋಳ ತೊಡಿಸಿ, ಈ ಮೈ ನವಿರೇಳಿಸುವ ಸಾಹಸಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ವತಃ ಕಡಲು ಈಜುಪಟುವೂ ಆಗಿರುವ ಉಡುಪಿಯ ಶಿರೂರು ಮಠದ ಶ್ರೀಲಕ್ಮೀವರ ತೀರ್ಥ ಸ್ವಾಮೀಜಿ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಅಧಿಕೃತ ಪ್ರತಿನಿಧಿ ಪ್ರವೀಣ್ ಪಟೇಲ್ ಇದ್ದರು.
ಈಜು ಪಟುವಿನ ಮುಖ್ಯ ಸಾಧನಗಳಾದ ಕೈ ಕಾಲುಗಳನ್ನು ಬಳಸದೆ ಮೀನಿನಂತೆ ನಿರಂತರವಾಗಿ ಈಜಿದ ಖಾರ್ವಿ ಸರಿಯಾಗಿ 10.20ಕ್ಕೆ ಮಲ್ಪೆ ಬೀಡಿನಲ್ಲಿ ಸಮುದ್ರದಿಂದ ಮೇಲೆ ಬಂದಾಗ ಸೇರಿದ್ದ ಸಾವಿರಾರು ಜನರು ಹರ್ಷೋದ್ಘಾರದೊಡನೆ ಸ್ವಾಗತಿಸಿದರು.
ಹಿಂದಕ್ಕೆ ದೂಡುತ್ತಿದ್ದ ಗಾಳಿ, ಎದುರಾಗುತ್ತಿದ್ದ ಸಮುದ್ರದ ರಾಕ್ಷಸ ಗಾತ್ರದ ಅಲೆಗಳು, ಕೊರೆಯುವ ಚಳಿ, ಕೈ ಕೋಳ, ಕಾಲಿನ ಸಂಕೋಲೆಗೆ ಕ್ಯಾರೇ ಎನ್ನದೆ ಈಜಿದ ಖಾರ್ವಿ 3.07 ಕಿ.ಮೀ. ದೂರವನ್ನು ಕ್ರಮಿಸುವುದಕ್ಕೆ ಕೇವಲ 3.23 ಗಂಟೆ ಸಮಯವನ್ನಷ್ಟೇ ತೆಗೆದುಕೊಂಡಿದ್ದರು.
ಮೀನಿನಷ್ಟೇ ಸಲೀಸು: ಸಮುದ್ರ ತೀರದ ಗ್ರಾಮದ ಮೀನುಗಾರರ ಕುಟುಂಬದಲ್ಲಿ ಜನಿಸಿರುವ ಖಾರ್ವಿಗೆ ಈಜು ಎನ್ನುವುದು ಮೀನಿನಷ್ಟೇ ಸಲಿಸು. ಆದರೆ, ಇದು ಚಳಿಗಾಲವಾದ್ದರಿಂದ ಭಾನುವಾರ ಮುಂಜಾನೆ ಸಾಕಷ್ಟು ಚಳಿ ಇತ್ತು, ಸಮುದ್ರ ನೀರು ಮೈಕೊರೆಯುವಷ್ಟು ತಣ್ಣಗಿತ್ತು. ಅಂತಹದರಲ್ಲಿ ಬರಿ ಮೈಯಲ್ಲಿ ನೀರಿಗಿಳಿದ ಖಾರ್ವಿ, ಭೋರ್ಗೆರೆಯುವ ಸಮುದ್ರದ ಭಾರಿ ಗಾತ್ರದ ತೆರೆಗಳ ನಡುವೆ ಈಜು ಆರಂಭಿಸಿದರು.
ಗಿನ್ನೆಸ್ ದಾಖಲೆ ಘೋಷಣೆ: ನಂತರ ಖಾರ್ವಿಯನ್ನು ಅಭಿನಂದಿಸಲು ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್ ಮೊದಲಾದವರು ಮಲ್ಪೆ ಬೀಚಿಗೆ ಆಗಮಿಸಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ನ ಪ್ರತಿನಿಧಿ ಪಟೇಲ್ ಅವರು ಗಿನ್ನಿಸ್ ದಾಖಲೆಯನ್ನು ಘೋಷಿಸಿದರು.
ದಾಖಲೆಗೆ ಜಿಲ್ಲೆಯ ಎಸ್ಪಿ ಡಾ. ಬೋರಲಿಂಗಯ್ಯ, ಎಎಸ್ಪಿ ಸಂತೋಷ್ ಕುಮಾರ್, ಗಿನ್ನಿಸ್ ದಾಖಲೆಯ ಅಂಚೆ ಚೀಟಿ ಸಂಗ್ರಹಕಾರ ಡೆನಿಯಲ್ ಮೊಂತೆರೋ, ತಾಂತ್ರಿಕ ಸಲಹೆಗಾರ ಡಾ. ರವೀಂದ್ರನಾಥ್ ಅಧಿಕೃತ ಸಾಕ್ಷಿಗಳಾದರು.
ಗೆಳೆಯನ ಜಮೀನು ಮೇಲೆ ಸಾಲ
ನನ್ನ ಈ ಸಾಹಸವನ್ನು ಜಗಜ್ಜಾಹೀರುಗೊಳಿಸಬೇಕು ಎನ್ನುವ ಉದ್ದೇಶದಿಂದ ಈಜಿದ್ದೇನೆ. ಸಫಲವೂ ಆಗಿರುವುದಕ್ಕೆ ತುಂಬಾ ಸಂತೋಷವೂ ಆಗಿದೆ. ಆದರೆ, ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಯನ್ನು ಕರೆಸುವುದಕ್ಕೆ, ದಾಖಲೆ ಚಿತ್ರೀಕರಿಸುವುದಕ್ಕೆ, ಇತರ ಸಿದ್ಧತೆಗಳಿಗಾಗಿ ಸುಮಾರು ರು. 12 ಲಕ್ಷ ವೆಚ್ಚವಾಗಿದೆ. ನನ್ನ ಸಾಧನೆಗೆ ಬೆಂಬಲವಾಗಿ ಜಗದೀಶ್ ಉಪಾಧ್ಯ ಎಂಬವರು ತನ್ನ ಜಮೀನನ್ನು ಬ್ಯಾಂಕಿನಲ್ಲಿ ಅಡವಿಟ್ಟು ರು. 3 ಲಕ್ಷ ಸಾಲವನ್ನು ನನಗೆ ನೀಡಿ ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ನನ್ನ ಸಾಹಸ ದಾಖಲೆ ಆಗಿರುವುದು ಸಂತಸವಾಗುತ್ತಿದೆ.
ಟಿ ಗೋಪಾಲ ಖಾರ್ವಿ, ಈಜುಗಾರ.
ಗಿನ್ನಿಸ್ ಪ್ರತಿನಿಧಿಗೆ ರು. 8.30 ಲಕ್ಷ
ಖಾರ್ವಿ ಈ ಕೈಕಾಲುಗಳನ್ನು ಕಟ್ಟಿ ಈ ದೂರವನ್ನು ಈಜಿ ವಿಶ್ವ ದಾಖಲೆ ಸೃಷ್ಟಿಸಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷವೂ ಇದೇ ಸಾಹಸವನ್ನು ಯಶಸ್ವಿಯಾಗಿ ಮಾಡಿದ್ದರು. ಆದರೆ, ಅದನ್ನು ತಾಂತ್ರಿಕವಾಗಿ ದಾಖಲಿಸಿಕೊಳ್ಳದೆ ಗಿನ್ನಿಸ್ ಸಂಸ್ಥೆಯವರು ಅದನ್ನು ದಾಖಲೆ ಎಂದು ಒಪ್ಪಿಕೊಂಡಿರಲಿಲ್ಲ. ಅದಕ್ಕಾಗಿ ಈ ಬಾರಿ ಖುದ್ದು ಸಂಸ್ಥೆಯ ಪ್ರತಿನಿಧಿಯೇ ಬಂದಿದ್ದರು. ಅವರಿಗೆ ಖಾರ್ವಿ ಸಾಲಸೋಲ ಮಾಡಿ ಸುಮಾರು ರು. 8.30 ಲಕ್ಷ ಭರಿಸಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

