ಪರ್ಯಾಯೋತ್ಸವಕ್ಕೆ ತಿಂಗಳು ಬಾಕಿ
ಉಡುಪಿ: ನೀವು ಧಾರ್ಮಿಕ ಮನಸ್ಸಿನವರಾದರೇ, ಲಕ್ಷಾಂತರ ಜನರು ಸೇರುವ, ರಾತ್ರಿಯಿಡೀ ನಡೆಯುವ ಉತ್ಸವದಲ್ಲಿ ಭಾಗವಹಿಸುವುದು ನಿಮಗಿಷ್ಟವಾದರೆ, ಚಂಡೆ, ಕೊಂಬು, ನಗಾರಿ, ಡೊಳ್ಳು, ನಾದಸ್ವರ, ಗರ್ನಾಲು, ವಾದ್ಯ ಘೋಷಗಳನ್ನು ಕೇಳುವ, ಗೊಂಬೆ ಕುಣಿತ, ನವಿಲು ನೃತ್ಯ, ಕಂಸಾಳೆ, ಹುಲಿವೇಷ, ಮರಗಾಲು, ಕೋಲಾಟ, ಬಿರುದಾವಳಿ ಇತ್ಯಾದಿಗಳನ್ನು ನೋಡುವ, ರಸ್ತೆಯುದ್ದಕ್ಕೂ ರಂಗುರಂಗಿನ ದೀಪಗಳ ನಡುವೆ ಹತ್ತಾರು ಪಲ್ಲಕ್ಕಿಗಳ ಭಾರಿ ವೈಭವದ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವ, ಯಾವ ರಾಜ ದರ್ಬಾರಿಗೂ ಕಡಿಮೆ ಇಲ್ಲದಂತೆ ನಡೆಯುವ ಅಷ್ಟಯತಿಗಳ ಸಾರ್ವಜನಿಕ ದರ್ಬಾರು ಕಾಣುವ ಆಸೆ ನಿಮಗಿದ್ದರೆ ಜ.18ರಂದು ಉಡುಪಿಗೆ ಬನ್ನಿ...
ಯಾಕೆಂದರೆ ಅಂದು 2 ವರ್ಷಗಳಿಗೊಮ್ಮೆ ಉಡುಪಿಗೆ ಉಡುಪಿಯೇ ನಲಿದು ಸಂಭ್ರಮಿಸುವ ವೈಭವದ, ನೂರಾರು ವರ್ಷಗಳಿಂದ ಅಲಿಖಿತ ಸಂಪ್ರದಾಯಬದ್ಧವಾಗಿ ನಡೆದು ಬಂದ 'ಪರ್ಯಾಯೋತ್ಸವ' ನಡೆಯಲಿದೆ. ಅಂದರೆ ಮುಂದಿನ 2 ವರ್ಷಗಳ ಅವಧಿಗೆ ಕೃಷ್ಣ ಮಠದ ಆಡಳಿತ, ವ್ಯವಹಾರ ಮತ್ತು ಪೂಜೆಯ ಅಧಿಕಾರ ಒಂದು ಮಠದಿಂದ ಇನ್ನೊಂದು ಮಠಕ್ಕೆ ಹಸ್ತಾಂತರವಾಗುತ್ತದೆ.
ನಾಲ್ಕು ಶತಮಾನಗಳ ಸಂಪ್ರದಾಯ: ಉಡುಪಿಯ 8 ಮಠಗಳು 16 ವರ್ಷಗಳಿಗೊಮ್ಮೆ ನಿಶ್ಚಿತ ಸರದಿಯಂತೆ ಕೃಷ್ಣನ ಪೂಜೆಯ, ಆಡಳಿತದ ಅಧಿಕಾರವನ್ನು ಪಡೆಯುವ ಸಂಪ್ರದಾಯ ಸುಮಾರು 4 ಶತಮಾನಗಳಿಂದ ನಡೆದುಕೊಂಡು ಬಂದಿದೆ. 2 ವರ್ಷಗಳ ಕಾಲ ಕೃಷ್ಣನ ಪೂಜೆ, ಆಡಳಿತ ನಡೆಸಿದ ಮಠವು ಜ.18ರಂದು ತನ್ನ ಮುಂದಿನ ಮಠಕ್ಕೆ ಅಧಿಕಾರವನ್ನು ವಿಧಿವತ್ತಾಗಿ ಬಿಟ್ಟುಕೊಡಬೇಕು. ಅಧಿಕಾರ ಪಡೆಯುವ ಮಠವು ಅದನ್ನು ಅತ್ಯಂತ ವೈಭವದ ಸಂಭ್ರಮದ ಉತ್ಸವದೊಂದಿಗೆ ಅದನ್ನು ಗ್ರಹಣ ಮಾಡಿಕೊಳ್ಳಬೇಕು, ಇದು ಸಂಪ್ರದಾಯ.
ಪ್ರಸ್ತುತ ಕಳೆದ 2 ವರ್ಷಗಳಿಂದ ಕೃಷ್ಣ ಮಠದಲ್ಲಿ ಸೋದೆ ಮಠದ ಶ್ರೀವಿಶ್ವಲ್ಲಭ ತೀರ್ಥ ಸ್ವಾಮೀಜಿ ಅವರು ಪೂಜೆಯ ಅಧಿಕಾರವನ್ನು ನಡೆಸುತ್ತಿದ್ದಾರೆ. ಜ.18ರಂದು ಅವರಿಂದ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರು ಪರ್ಯಾಯ ಅಧಿಕಾರವನ್ನು ಪಡೆಯಲಿದ್ದಾರೆ.
ಭಾವಿ ಪರ್ಯಾಯ ಶ್ರೀಗಳಿಂದ ದೇಶ ಸಂಚಾರ: ಈ ಪರ್ಯಾಯ ಉತ್ಸವಕ್ಕೆ ಮೊದಲು ಅಧಿಕಾರ ಪಡೆಯುವ ಶ್ರೀಗಳು ಇಡೀ ದೇಶಾದ್ಯಂತ ಸಂಚರಿಸಿ, ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸುವುದು, ಅಲ್ಲಿರುವ ಭಕ್ತರನ್ನು ತಮ್ಮ ಪರ್ಯಾಯೋತ್ಸವಕ್ಕೆ ಆಮಂತ್ರಿಸುವುದು ವಾಡಿಕೆ. ಅದರಂತೆ ಕಾಣಿಯೂರು ಮಠದ ಶ್ರೀಗಳು ಕಳೆದ ಒಂದೂವರೆ ವರ್ಷಗಳಿಂದ ದಕ್ಷಿಣ ಭಾರತದ ಸಂಚಾರ ಮುಗಿಸಿ, ಉತ್ತರ ಭಾರತದ ಪುಣ್ಯ ಕ್ಷೇತ್ರಗಳ ಪ್ರವಾಸ ನಡೆಸಿ ರಾಜ್ಯಕ್ಕೆ ಹಿಂತಿರುಗಿದ್ದಾರೆ.
ಕರ್ನಾಟಕದ ಬಾದಾಮಿ, ಧಾರವಾಡ, ಕೊಪ್ಪಳ, ಉತ್ತರಕನ್ನಡ ಇತ್ಯಾದಿ ಜಿಲ್ಲೆಗಳ ಪುಣ್ಯ ಕ್ಷೇತ್ರಗಳ ಜತೆಗೆ ಚೆನ್ನೈ, ಭುವನೇಶ್ವರ, ಪುರಿ, ಆಹೋಬಲ, ತಿರುಪತಿ, ಮಂತ್ರಾಲಯ, ನಂತರ ಬದರಿ, ಪ್ರಯಾಗ, ದ್ವಾರಕೆ, ಮಥುರಾ, ಕಾಶಿ, ಪಂಡರಾಪುರ, ಕೊಲ್ಕತ್ತಾ, ಗಂಗಾಸಾಗರ ಇತ್ಯಾದಿ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ದೇವರಿಗೆ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಾಮಕುಂಜದಲ್ಲಿದ್ದು, ಜ.1ರಂದು ಮಂಗಳೂರಿನಲ್ಲಿ ಭಾರಿ ಪೌರ ಸನ್ಮಾನ ಸ್ವೀಕರಿಸಲಿದ್ದಾರೆ. 2ರಂದು ಉಡುಪಿ ಪುರಪ್ರವೇಶ ಮಾಡಲಿದ್ದಾರೆ, ಅವರನ್ನು ಸ್ವಾಗತಿಸಲಿಕ್ಕೆ ಮಠದ ಭಕ್ತರು ಅಭಿಮಾನಿಗಳು ವೈಭವದ ಸಿದ್ಧತೆಗಳನ್ನು ನಡೆಸಿದ್ದಾರೆ.
ಹಾಗೆ ನೋಡಿದರೆ ಇದು 2 ಮಠಗಳ ನಡುವೆ ನಡೆಯುವ ಅಧಿಕಾರದ ಹಸ್ತಾಂತರದ ಒಂದು ಸರಳ ವಿಧಿ.
ಆದರೆ ಅದರ ಹಿಂದೆ ಇರುವ ಸಂಪ್ರದಾಯಗಳು, 2 ವರ್ಷಗಳ ಕಾಲ ನಿತ್ಯ ಸಾವಿರಾರು ಮಂದಿ ಭಕ್ತರಿಗೆ ಅನ್ನದಾನ, ದಿನಕ್ಕೆ 16 ಬಗೆಯ ಪೂಜೆಗಳು, ನಿತ್ಯ ನೃತ್ಯ, ಸಂಗೀತ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ, ನೂರಾರು ಸಿಬ್ಬಂದಿ ನಿರ್ವಹಣೆ, ಮಠಕ್ಕೆ ಭೇಟಿ ನೀಡುವ ಗಣ್ಯರಿಗೆ ಆತಿಥ್ಯ, ದಿನಕ್ಕೆ ಲಕ್ಷಾಂತರ ರುಪಾಯಿ ಖರ್ಚು... ಇದೆಲ್ಲವೂ ತನ್ನಷ್ಟಕ್ಕೆ ಯಾವುದೇ ಲಿಖಿತ ಸಂವಿಧಾನ ಇಲ್ಲದೇ ಚಾಚೂ ತಪ್ಪದೆ ನಡೆಯುತ್ತದೆ. ಕೃಷ್ಣಮಠದ ಆಡಳಿತ ಎಂದರೆ ಅದು ಯಾವುದೇ ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಕಲಿಸದ, ಕಲಿಸಲಾಗದ ವಿದ್ಯೆ. ಆದ್ದರಿಂದಲೇ ಇದರೆಲ್ಲದರ ಆರಂಭ ಜ.18ರಂದು ನಡೆಯುವ ಪರ್ಯಾಯೋತ್ಸವಕ್ಕೆ ಇಷ್ಟೊಂದು ವೈಭವ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

