ಉಡುಪಿ

ಸುದ್ದಿ ಸಂಕ್ಷೇಪ

Published On :

ಟ್ಯಾಂಕ್ನಿಂದ ಬಿದ್ದು ಕಾರ್ಮಿಕ  ಸಾವು
ಮಣಿಪಾಲ: ಇಲ್ಲಿನ ಕೆ.ಎಂ.ಸಿ ಕ್ಯಾಂಪಸ್ನ ಶಾರದಾ ಹಾಸ್ಟೆಲ್ ಬಳಿ ನೀರಿನ ಟ್ಯಾಂಕಿನ ಕೆಲಸ ಮಾಡುವಾಗ ಸುಮಾರು 5 ಅಡಿ ಎತ್ತರದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮೃತರು ಉಪೇಂದ್ರ ನಾಯಕ್(46). ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ತಾತನ ಕೊಂದ ಮೊಮ್ಮಗ
ಕಾರ್ಕಳ: ಕ್ಷುಲ್ಲಕ ಕಾರಣಕ್ಕೆ ಕೋಪನೆತ್ತಿಗೇರಿ ಮೊಮ್ಮಗನೊಬ್ಬ ಅಜ್ಜನನ್ನು ಮರದ ರೀಪಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶನಿವಾರ ತಾಲೂಕಿನ ರೆಂಜಾಳ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ದಾಸರಬೆಟ್ಟು ನಿವಾಸಿ ನೇಮಿರಾಜ ಪೂವಣಿ(80) ಮೃತರು. ಅವರ ಮೊಮ್ಮಗ ರವಿ ಜೈನ್(31) ಕೊಲೆ ಮಾಡಿದ ಆರೋಪಿ.
ಘಟನೆ ವಿವರ: ನೇಮಿರಾಜ ಪೂವಣಿ ಅವರ ಹಿರಿಯ ಮಗನ ಪುತ್ರನಾಗಿರುವ ರವಿ ಜೈನ್ ಬೆಳಗಾವಿಯಲ್ಲಿ ವಾಸವಾಗಿದ್ದ. ಈ ನಡುವೆ ಎಲ್ಲಿಯೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಕಳ್ಳತನವನ್ನು ನಡೆಸಿ ಜನರಿಂದ ಗೂಸಾ ತಿಂದಿದ್ದ. ಮೊಮ್ಮಗನ ವಿಚಾರ ತಿಳಿದು ನೊಂದಿದ್ದ ನೇಮಿರಾಜ ಪೂವಣಿ ಅವರು ಊರಿಗಾಗಮಿಸಿದ ರವಿ ಜೈನ್  ಅವರಿಗೆ ಬುದ್ಧಿಮಾತು ಹೇಳಿದ್ದಾರೆ. ಇದರಿಂದ ಕೋಪಗೊಂಡ ರವಿ ಜೈನ್ ಅವರು ಶನಿವಾರ ಬೆಳಗ್ಗೆ ನೇಮಿರಾಜ ಅವರಿಗೆ ಮರದ ರೀಪಿನಿಂದ ತಲೆಗೆ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ನೇಮಿರಾಜ ಪೂವಣಿ ಅವರನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಜಯವರ್ಮ ಜೈನ್ ನೀಡಿದ ದೂರಿನಂತೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಿಕ್ಷಾಗೆ ಬಸ್ ಡಿಕ್ಕಿ; ನಾಲ್ವರಿಗೆ ಗಾಯ
ಕುಂದಾಪುರ: ಆಟೋ ರಿಕ್ಷಾದ ಹಿಂಬದಿಗೆ ಬಸ್ ಡಿಕ್ಕಿ ಹೊಡೆದು ಆಟೋ ರಿಕ್ಷಾ ಚಾಲಕ ಸೇರಿದಂತೆ 3 ಪ್ರಯಾಣಿಕರು ಗಾಯಗೊಂಡ ಘಟನೆ ಶನಿವಾರ ತಲ್ಲೂರು ಗ್ರಾಮದ ಸೇತುವೆ ಬಳಿಯ ರಾ.ಹೆ.ಯಲ್ಲಿ ನಡೆದಿದೆ. ಗಾಯಗೊಂಡವರನ್ನು ಆಟೋರಿಕ್ಷಾ ಚಾಲಕ ವಿತೇಶ ಹಾಗೂ ಪ್ರಯಾಣಿಕರಾದ ಸಾಯಿಕೃಷ್ಣ, ದಾಕ್ಷಾಯಣಿ ಹಾಗೂ ನಿಧೀಶ್ ಎಂದು ಗುರುತಿಸಲಾಗಿದೆ. ಬಸ್ ಚಾಲಕ ಸುಧೀರ್ ಎಂಬವರು ಬಸ್ ಅನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದಿರುವುದೇ ಅಪಘಾತಕ್ಕೆ ಕಾರಣ ಎಂಬುದಾಗಿ ರಾಘವೇಂದ್ರ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಾಗಿಲು ಮುರಿದು ನಗ, ನಗದು ಕಳವು
ಕಾರ್ಕಳ: ಇಲ್ಲಿನ ಮುಂಡ್ಕೂರು ಗ್ರಾಮದ ದಿನೇಶ್ ಬಿ ಎಂಬವರ ಮನೆಗೆ ನುಗ್ಗಿದ ಕಳ್ಳರು ನಗ ನಗದನ್ನು ಕಳವು ಮಾಡಿರುವ ಘಟನೆ ಶನಿವಾರ ನಡೆದಿದೆ. ದಿನೇಶ್ ಅವರ ಮನೆಯ ಹಿಂದಿನ ಬಾಗಿಲನ್ನು ಕಳ್ಳರು ಪಿಕ್ಕಾಸಿನಿಂದ ಮುರಿದು ಒಳಗೆ ನುಗ್ಗಿ ಕಪಾಟಿನಲ್ಲಿದ್ದ ರು. 50 ಸಾವಿರ ನಗದು ಹಾಗೂ 1.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬೈಕ್ ಅಪಘಾತ: ಹಿಂಬದಿ ಸವಾರೆ ಸಾವು
ಬ್ರಹ್ಮಾವರ: ಸವಾರನ ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಬೈಕಿನ ಹಿಂಬದಿ ಕುಳಿತಿದ್ದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಮಾಬುಕಳ ಸೇತುವೆ ಬಳಿಯ ರಾ.ಹೆ.ಯಲ್ಲಿ ಶನಿವಾರ ನಡೆದಿದೆ. ಮೃತರು ನಾಗರತ್ನ (60), ಇವರು ರಘುನಾಥ್ ಎಂಬವರ ಬೈಕಿನಲ್ಲಿ ಉಡುಪಿ ಕಡೆಗೆ ಬರುತ್ತಿರುವ ಸಮಯದಲ್ಲಿ ರಘುನಾಥ್ ಅವರು ಬೈಕನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಾಬುಕಳ ಸೇತುವೆ ಬಳಿಯ ರಾ.ಹೆ.ಯಲ್ಲಿ ಬೈಕಿನ ಹಿಂಬದಿಯಲ್ಲಿದ್ದ ನಾಗರತ್ನ ಅವರು ವಾಹನದಿಂದ ರಸ್ತೆಗೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡ ನಾಗರತ್ನ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಶ್ರುತಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗೊಳ್ಳಿ ಗ್ರಾ.ಪಂ.ಗೆ ಆಡಳಿತಾಧಿಕಾರಿ
ಗಂಗೊಳ್ಳಿ: ಅವಧಿ ಮುಗಿದು ಇತ್ತೀಚಿಗಷ್ಟೇ ಚುನಾವಣೆ ನಡೆದಿರುವ ಗಂಗೊಳ್ಳಿ ಗ್ರಾ.ಪಂ.ಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಬೈಂದೂರು ವಿಶೇಷ ತಹಸೀಲ್ದಾರ್ ತಿಪ್ಪೇಸ್ವಾಮಿ ಗಂಗೊಳ್ಳಿ ಪಂಚಾಯಿತಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವಧಿ ಮುಗಿದಿರುವ ಗಂಗೊಳ್ಳಿ ಗ್ರಾಪಂಗೆ ಡಿ.8ರಂದು ಚುನಾವಣೆ ನಡೆದಿದ್ದು, ಡಿ.11ರಂದು ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.  ಹಿಂದಿನ ಸದಸ್ಯರದ ಆಡಳಿತಾವಧಿ ಡಿ.14ಕ್ಕೆ ಕೊನೆಗೊಂಡಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸಲಾಗಿಲ್ಲ. ಹೀಗಾಗಿ  ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.