ಉಡುಪಿ

ಪ್ರೇಮಿ, ಆತನ ಗೆಳೆಯ ಆತ್ಮಹತ್ಯೆ

Published On :

ಉಡುಪಿ: ರಾಮನಗರ ಜಿಲ್ಲೆಯಿಂದ ಆಗಮಿಸಿದ್ದ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಮಲ್ಪೆಯ ತೊಟ್ಟಂ ಬೀಚ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಜೊತೆಗೆ ವಿಷ ಸೇವಿಸಿದ್ದ ಇನ್ನೊಬ್ಬ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾಳೆ.
ಮೃತರು ಮಧು (18) ಮತ್ತು ಹೇಮಂತ್ (20), ಬದುಕುಳಿದವರು ರೇಣುಕಾ ಯಾನೆ ಸೌಮ್ಯ (18). ಹೇಮಂತ್ ಚನ್ನಪಟ್ಟಣ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರೆ, ಸೌಮ್ಯ ರಾಮನಗರ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಓದುತ್ತಿದ್ದಳು. ಇವರಿಬ್ಬರೂ ಕಣ್ವ ಗ್ರಾಮದವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಇವರಿಗೆ ನೆರವಾಗಲು ತೆರಳಿದ್ದ ಮಧು ರಾಮನಗರದ ಹನುಮಂತನಗರ ಪಪೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಧು ಮತ್ತು ಹೇಮಂತ್ ಆಪ್ತ ಮಿತ್ರರಾಗಿದ್ದರು.
10 ದಿನ ಹಿಂದೆ ಮನೆ ಬಿಟ್ಟಿದ್ದರು: ಜ.22ರಂದು ಈ ಮೂವರೂ ಮನೆ ಬಿಟ್ಟಿದ್ದಾರೆ. ಈ ಬಗ್ಗೆ ಸೌಮ್ಯ ತಂದೆ ಲಕ್ಷ್ಮಣ್ ಕುಮಾರ್ ಅವರು ರಾಮನಗರ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಾರೆ. ನಂತರ 10 ದಿನಗಳಲ್ಲಿ ಅವರು ಎಲ್ಲೆಲ್ಲಿ ಹೋಗಿದ್ದರು ಎಂಬುದು ತನಿಖೆಯಿಂದ ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ. ಶನಿವಾರ ಮೂವರು ಮಲ್ಪೆಗೆ ಬಂದಿದ್ದು, ವಸತಿ ಗೃಹವೊಂದರಲ್ಲಿ ರೂಮ್ ಪಡೆದಿದ್ದರು. ಸಂಜೆ 3 ಬಿರಿಯಾನಿ ಪಾರ್ಸೆಲ್‌ಗಳನ್ನು ಕಟ್ಟಿಸಿಕೊಂಡು ಮಲ್ಪೆ ಸಮುದ್ರ ತೀರದಲ್ಲಿ ನಡೆದುಕೊಂಡು ಸುಮಾರು 2-3 ಕಿ.ಮೀ. ದೂರದಲ್ಲಿರುವ ತೊಟ್ಟಂ ಬೀಚ್‌ನಲ್ಲಿರುವ ಬಾಳಿಗ ಗೆಸ್ಟ್ ಹೌಸ್ ಬಳಿಗೆ ಹೋಗಿ, ಬಿರಿಯಾನಿಗೆ ವಿಷ ಬೆರೆಸಿ ಮೂವರೂ ಜೊತೆಯಲ್ಲಿಯೇ ಊಟ ಮಾಡಿದ್ದಾರೆ ಮತ್ತು ಪ್ರಜ್ಞೆ ಕಳೆದುಕೊಂಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಸ್ಥಳೀಯರು ಅಲ್ಲಿಗೆ ಬಂದಾಗ ಈ ಮೂವರೂ ಮರಳಲ್ಲಿ ಬಿದ್ದುಕೊಂಡಿರುವುದು ನೋಡಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಮಧು ಮೃತಪಟ್ಟಿರುವುದು ಪತ್ತೆಯಾಯಿತು. ಉಳಿದಿಬ್ಬರು ಉಸಿರಾಡುತ್ತಿದ್ದು, ತಕ್ಷಣ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಸೌಮ್ಯ ವಾಂತಿ ಮಾಡಿಕೊಂಡಿದ್ದರಿಂದ ಬದುಕುಳಿದಿದ್ದು, ಹೇಮಂತ್ ಬೆಳಗ್ಗೆ 11 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಪ್ರೀತಿಗೆ ಸಿಕ್ಕದ ಒಪ್ಪಿಗೆ: ಸೌಮ್ಯ ಮತ್ತು ಹೇಮಂತ್ ಪರಸ್ಪರ ಪ್ರೀತಿಸುತ್ತಿದ್ದರು. ಬಾಲಕ ಅಪ್ರಾಪ್ತ ಎಂದು ಯುವತಿಯ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಅವರಿಬ್ಬರೂ ಮನೆಯಿಂದ ಓಡಿ ಹೋಗುವ ನಿರ್ಣಯ ಕೈಗೊಂಡಿದ್ದರು. ಮಿತ್ರ ಮಧು ಬಡ ಕುಟುಂಬದವನಾಗಿದ್ದು ತನ್ನ ಗೆಳೆಯ, ಗೆಳತಿ ಮನೆ ಬಿಟ್ಟು ಓಡಿ ಹೋಗುವ ನಿರ್ಧಾರ ಮಾಡಿದ್ದನ್ನು ತಿಳಿದು ತಾನೂ ಅವರ ಜೊತೆಗೆ ಬಂದಿದ್ದ ಎಂದು ಬದುಕುಳಿದಿರುವ ಸೌಮ್ಯ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.