ಉಡುಪಿ ಜಿಲ್ಲೆಗೆ ಇನ್ನು ಐದು ತಾಲೂಕು
ಉಡುಪಿ: ಇದುವರೆಗೆ ಮೂರು ತಾಲೂಕುಗಳ ಚಿಕ್ಕ ಜಿಲ್ಲೆ ಎಂದು ಕರೆಯಲ್ಪಡುತ್ತಿದ್ದ ಉಡುಪಿ ಇದೀಗ ಮುಂದೆ 5 ತಾಲೂಕುಗಳ ದೊಡ್ಡ ಜಿಲ್ಲೆಯಾಗಿಬಿಟ್ಟಿದೆ.
ಇದುವರೆಗಿದ್ದ ಉಡುಪಿ, ಕಾರ್ಕಳ, ಕುಂದಾಪುರ ತಾಲೂಕುಗಳನ್ನು ಪುನರ್ವಿಂಗಡಿಸಿ ಬೈಂದೂರು ಮತ್ತು ಬ್ರಹ್ಮಾವರಗಳೆಂಬ ಹೊಸ 2 ತಾಲೂಕುಗಳನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ನಲ್ಲಿ ಘೋಷಿಸಿದ್ದಾರೆ. ಆದರೆ, ಹೆಬ್ರಿ ತಾಲೂಕು ಬೇಡಿಕೆಗೆ ಬೆಲೆ ಸಿಕ್ಕಿಲ್ಲ.
ಬ್ರಹ್ಮಾವರ ತಾಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಬಾರ್ಕೂರು, ಈ ಬಾರಿಯ ಬಜೆಟ್ನಲ್ಲಿ ಬ್ರಹ್ಮಾವರನ್ನು ತಾಲೂಕನ್ನಾಗಿ ಘೋಷಿಸಲೇಬೇಕು ಎಂದು ಸೋಮವಾರದಿಂದ 3 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದಕ್ಕೂ ಮೊದಲು ಇತ್ತೀಚೆಗೆ ಶಾಸಕ ಕೆ. ರಘುಪತಿ ಭಟ್ಟರು ಹೋರಾಟ ಸಮಿತಿಯ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗೆ ಬ್ರಹ್ಮಾವರವನ್ನು ತಾಲೂಕನ್ನಾಗಿ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಮುಖ್ಯಮಂತ್ರಿ ಒಪ್ಪಿದ್ದರು. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯ ಹೋರಾಟ ಯಶಸ್ವಿಯಾಗಿದೆ.
ಬ್ರಹ್ಮಾವರ ತಾಲೂಕು: ಬ್ರಹ್ಮಾವರ ತಾಲೂಕು ಕೋಟ ಮತ್ತು ಬ್ರಹ್ಮಾವರ ಹೋಬಳಿಯನ್ನು ಹೊಂದಿದೆ. ಕೋಟ ಹೋಬಳಿಯಲ್ಲಿ 15 ಗ್ರಾ.ಪಂ., ಬ್ರಹ್ಮಾವರ ಹೋಬಳಿಯಲ್ಲಿ 14 ಗ್ರಾ.ಪಂ.ಗಳು ಇವೆ. ಈ ತಾಲೂಕಿನಲ್ಲಿ ಸುಮಾರು 2.50 ಲಕ್ಷ ಜನಸಂಖ್ಯೆ ಇದೆ. ಬ್ರಹ್ಮಾವರ ತಾಲೂಕು ಕಚೇರಿ ನಿರ್ಮಾಣಕ್ಕಾಗಿ ವಾರಂಬಳ್ಳಿ ಗ್ರಾ.ಪಂ.ನಲ್ಲಿ 15 ಎಕ್ರೆ ಭೂಮಿ ಮೀಸಲಿಡಲಾಗಿದೆ. ಈಗಾಗಲೇ ಬ್ರಹ್ಮಾವರದಲ್ಲಿ ನಾಡಕಚೇರಿ, ವಿಶೇಷ ತಹಸೀಲ್ದಾರ್ ಕಚೇರಿಗಳಿವೆ.
ಬೈಂದೂರು: ಇದರೊಂದಿಗೆ ಕುಂದಾಪುರ ತಾಲೂಕಿನೊಳಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರ ಕೂಡ ತಾಲೂಕಾಗಿ ಘೋಷಣೆಯಾಗಿದೆ. ಇಲ್ಲಿನ ಶಿರೂರು ಭಾಗದ ಜನರು ಕುಂದಾಪುರ ತಾಲೂಕು ಕಚೇರಿಗೆ ಹೋಗುವುದಕ್ಕೆ 35 - 40 ಕಿ.ಮೀ. ಪ್ರಯಾಣಿಸಬೇಕಾಗಿತ್ತು. ಈ ಕಷ್ಟ ನಿವಾರಣೆಯಾಗಿದೆ.
ಬೈಂದೂರಿನ ಬದಲು ಇಲ್ಲಿನ ಶಂಕರನಾರಾಯಣವನ್ನು ತಾಲೂಕನ್ನಾಗಿ ಮಾಡಬೇಕು ಎಂದು ಕೆಲಕಾಲ ಕೂಗೆದ್ದಿತ್ತು. ಆದರೆ, ಅದೀಗ ತಣ್ಣಗಾಗಿರುವುದರಿಂದಲೋ ಏನೋ ಬೈಂದೂರಿಗೆ ಆ ಭಾಗ್ಯ ಒದಗಿದೆ.
ಬೈಂದೂರಿನಂತೆ ಕಾರ್ಕಳ ತಾಲೂಕಿನ ಹೆಬ್ರಿಯನ್ನು ಕೂಡ ತಾಲೂಕನ್ನಾಗಿ ಮಾಡಬೇಕು ಎನ್ನುವ ಬೇಡಿಕೆಗೆ 15- 20 ವರ್ಷಗಳೇ ಸಂದಿವೆ. ಇಲ್ಲಿನ ಕಾಂಗ್ರೆಸ್ ನಾಯಕ ನೀರೆ ಕೃಷ್ಣ ಶೆಟ್ಟಿ ಮುಂತಾದವರು ಈ ಬಗ್ಗೆ ಭಾರಿ ಹೋರಾಟಗಳನ್ನೇ ಮಾಡಿದ್ದರು. ಆದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರವಾದ್ದರಿಂದ ಕಾಂಗ್ರೆಸ್ ನಾಯಕರ ಬೇಡಿಕೆ ಈಡೇರಿಲ್ಲ ಎನ್ನುವುದು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಬೇಸರವಾಗಿದೆ.
ನೆಲೆ ಜೆಡಿಎಸ್ನಲ್ಲಿ, ಪ್ರಚಾರ ಬಿಜೆಪಿಯಲ್ಲಿ...!
ಉಡುಪಿ: ಬ್ರಹ್ಮಾವರ ತಾಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಬಾರ್ಕೂರು ಈ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭ ಉಡುಪಿಯ ಬಿಜೆಪಿ ಶಾಸಕ ಕೆ. ರಘುಪತಿ ಭಟ್ ಪರವಾಗಿ ಬ್ರಹ್ಮಾವರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇದನ್ನು ಖುದ್ದು ಭಟ್ಟರೇ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಉಡುಪಿ ತಾ.ಪಂ.ಗೆ ಆಯ್ಕೆಯಾಗಿದ್ದ ಸತೀಶ್ ಪೂಜಾರಿ ನಂತರ ಜೆಡಿಎಸ್ ಸೇರಿದ್ದರು. 2ನೇ ಬಾರಿ ತಾ.ಪಂ. ಚುನಾವಣೆಯಲ್ಲಿ ಸೋತಿದ್ದರು. ನಂತರ ಬ್ರಹ್ಮಾವರ ತಾಲೂಕು ಹೋರಾಟ ಕೈಗೆತ್ತಿಕೊಂಡಿದ್ದರು.
ಇತ್ತೀಚೆಗೆ ಬಿಜೆಪಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರಿಗೆ ಕಲ್ಲೆಸೆದ ಘಟನೆಯ ಸಂದರ್ಭದಲ್ಲಿ ಜಾತಿ ಪ್ರೇಮಕ್ಕೊಳಗಾಗಿ ಸತೀಶ್ ಅವರು ಕೋಟಾ ಅವರನ್ನು ಬೆಂಬಲಿಸಿ ಸುದ್ದಿಗೋಷ್ಠಿ ನಡೆಸಿದ್ದರು. ಮೊನ್ನೆ ಮೊನ್ನೆ ಬ್ರಹ್ಮಾವರ ತಾಲೂಕು ರಚನೆಗಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.ಬ್ರಹ್ಮಾವರ ತಾಲೂಕು ರಚನೆಗಾಗಿ ಶಾಸಕ ರಘುಪತಿ ಭಟ್ಟರು ಹೋರಾಟ ಸಮಿತಿಯನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಯೊಂದಿಗೆ ಮಾತನಾಡಿಸಿದ್ದರು. ಈ ಸಂದರ್ಭ ಮುಖ್ಯಮಂತ್ರಿ ಬ್ರಹ್ಮಾವರವನ್ನು ತಾಲೂಕನ್ನಾಗಿ ಮಾಡುವ ಭರವಸೆ ನೀಡಿದ್ದರು. ಅಲ್ಲಿಗೆ ಬ್ರಹ್ಮಾವರ ತಾಲೂಕಾಗುವುದು ಬಹುತೇಕ ಖಚಿತವಾಯಿತು.
ಈ ಸಂದರ್ಭದಲ್ಲಿ ನಿಯೋಗದಲ್ಲಿದ್ದ ಸತೀಶ್ ಪೂಜಾರಿ ಅವರು 'ಬ್ರಹ್ಮಾವರವನ್ನು ತಾಲೂಕನ್ನಾಗಿ ಮಾಡಿದರೇ ಈ ಬಾರಿ ನಾನು ನಿಮ್ಮ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೇನೆ' ಎಂದು ಶಾಸಕರಿಗೆ ಹೇಳಿದ್ದಂತೆ. ಈ ಗುಟ್ಟನ್ನು ಸ್ವತಃ ಶಾಸಕರೇ ಶುಕ್ರವಾರ ರಟ್ಟು ಮಾಡಿದರು.
ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಬಿಜೆಪಿ ಪಕ್ಷದಲ್ಲಿ ಚುನಾವಣಾ ಪ್ರಚಾರ, ಬಹಳ ಇಂಟರೆಸ್ಟಿಂಗ್ ಆಗಿದೆ.
-ಸುಭಾಶ್ಚಂದ್ರ ವಾಗ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

