ಉಡುಪಿ

ಮರವಂತೆ ಹೊರ ಬಂದರು ಕಾಮಗಾರಿ ಶೀಘ್ರ ಆರಂಭಕ್ಕೆ ಸಿಎಂ ಭರವಸೆ

Published On :

ಮರವಂತೆ: ರಾಜ್ಯ ಸರ್ಕಾರ ಮರವಂತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೇರಳ ಮಾದರಿಯ ಮೀನುಗಾರಿಕಾ ಹೊರಬಂದರಿನ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆ ನೀಡಿದ್ದಾರೆ. ಬೈಂದೂರಿನ ಶಾಸಕ ಕೆ. ಲಕ್ಷ್ಮೀನಾರಾಯಣರ ನೇತೃತ್ವದಲ್ಲಿ ಮರವಂತೆ ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿಯ ಪ್ರಮುಖರ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಅವರ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಸಲ್ಲಿಸಿದ ಮನವಿಗೆ ಉತ್ತರವಾಗಿ ಅವರು ಈ ಭರವಸೆ ನೀಡಿದರು.
ರಾಜ್ಯ ಸರ್ಕಾರದಿಂದ ಮಂಜೂರಾದ ಈ ಕಾಮಗಾರಿಗೆ 2010- 11ನೇ ಬಜೆಟ್‌ನಲ್ಲಿ 45 ಕೋಟಿ  ಮೀಸಲಿಡಲಾಗಿತ್ತು. ಕೆಲವು ತಾಂತ್ರಿಕ ಕಾರಣಗಳಿಗಾಗಿ ಸಕಾಲದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿಲ್ಲ. ಆದುದರಿಂದ ಕಾಮಗಾರಿಯ ವೆಚ್ಚದಲ್ಲಾಗಿರುವ ಏರಿಕೆಯ ಕಾರಣದಿಂದ ಹಿಂದೆ ನಿಗದಿಯಾದ ಮೊತ್ತಕ್ಕೆ ಯಾವುದೇ ಗುತ್ತಿಗೆದಾರರು ಈ ಕಾಮಗಾರಿ ನಿರ್ವಹಿಸಲು ಮುಂದಾಗುತ್ತಿಲ್ಲ. ಹಾಗಾಗಿ ಕಾಮಗಾರಿಯ ಅಂದಾಜು ಮೊತ್ತವನ್ನು ಏರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಅದಕ್ಕೆ ಸರ್ಕಾರದ ಮಂಜೂರಾತಿ ಬೇಕು ಎನ್ನುವ ವಿಚಾರವನ್ನು ಶಾಸಕರು ಈ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿದರು.
ಈ ಪ್ರಸ್ತಾವನೆಯನ್ನು ಶೀಘ್ರ ಸಚಿವ ಸಂಪುಟದ ಸಭೆಯಲ್ಲಿರಿಸಿ ಅನುಮೋದನೆ ಪಡೆದು ತ್ವರಿತ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಶಾಸಕರಿಗೆ ಮತ್ತು ಮೀನುಗಾರ ಪ್ರಮುಖರಿಗೆ ಮುಖ್ಯಮಂತ್ರಿಗಳು ಭರವಸೆಯಿತ್ತರು.
ನಿಯೋಗವು ಇದಕ್ಕೂ ಮೊದಲು ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನೂ ಭೇಟಿಯಾಗಿ ಅವರಿಗೂ ಮನವಿ ಸಲ್ಲಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.