ಉಡುಪಿ

ನೀರು ಸರಬರಾಜು ಕಾಮಗಾರಿಗೆ 3369 ಕೋಟಿ ಅನುದಾನ

Published On :

ಉಡುಪಿ: ಉಡುಪಿ ಜಿಲ್ಲೆಯಲ್ಲಿ 2012 ಏಪ್ರಿಲ್‌ನಿಂದ ಈವರೆಗೆ ಸಕಾಲ ಯೋಜನೆಯಡಿ ಒಟ್ಟು 2,80,036 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳ ಪೈಕಿ ಒಟ್ಟು 2,73,151 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಶನಿವಾರ ಅಜ್ಜರಕಾಡಿನ ಮಹತ್ಮಾಗಾಂಧಿ ಕ್ರೀಡಾ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭ ರಾಷ್ಟ್ರಧ್ವಜರೋಹಣಗೈದು ಅವರು ಮಾತನಾಡಿದರು.
ನೀರು ಸರಬರಾಜಿಗೆ ರು. 3369 ಲಕ್ಷ ಅನುದಾನ: 2012-13ನೇ ಸಾಲಿನಲ್ಲಿ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮದಲ್ಲಿ ರು. 3369.96 ಲಕ್ಷ ಅನುದಾನವನ್ನು 817 ಕಾಮಗಾರಿಗಳ ಕ್ರಿಯಾ ಯೋಜನೆಗೆ ಸರ್ಕಾರಾದ ಮಂಜೂರಾತಿ ಪಡೆಯಲಾಗಿದ್ದು, ಈವರೆಗೆ ಒಟ್ಟು ರು. 1135 ಲಕ್ಷ ವಿನಿಯೋಗಿಸಿ 247 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಹೆಚ್ಚುವರಿಯಾಗಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳಿಗೆ ರು. 391.75 ಲಕ್ಷ ಅನುದಾನ ಮಂಜೂರಾಗಿದ್ದು, 128 ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದ್ದು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 72,845 ಮಕ್ಕಳಿಗೆ ರು. 101.33 ಲಕ್ಷ ಮೌಲ್ಯದ ತಲಾ ಒಂದು ಜೊತೆ ಸಮವಸ್ತ್ರ ವಿತರಿಸಲಾಗಿದೆ. 8ನೇ ತರಗತಿ ವಿದ್ಯಾರ್ಥಿಗಳಿಗೆ ರು. 11,907 ಲಕ್ಷ ಮೌಲ್ಯದ ಸಮವಸ್ತ್ರ ವಿತರಿಸಲಾಗಿದೆ ಎಂದರು.
ಪ್ರವಾಸೋದ್ಯಮಕ್ಕೆ ರು. 17 ಕೋಟಿ: ಉಡುಪಿ ಜಿಲ್ಲೆಗೆ ಪ್ರವಾಸೋದ್ಯಮ ಕುರಿತು 2010-11ನೇ ಸಾಲಿನಲ್ಲಿ ರು. 17.25 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈವರೆಗೆ 12 ಪ್ರವಾಸಿ ಸ್ಥಳಗಳ ಕಾಮಗಾರಿಯು ಮುಕ್ತಾಯಗೊಂಡಿದೆ. ಉಳಿದ 11 ಪ್ರವಾಸಿ ಸ್ಥಳಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದ ಸಚಿವ ಕೋಟ, ಉಡುಪಿಯಲ್ಲಿರುವ ಮಣ್ಣಪಳ್ಳ ಕೆರೆ ಅಭಿವೃದ್ದಿಗೆ ರು. 80 ಲಕ್ಷ ಹಾಗೂ ಹಸ್ತಶಿಲ್ಪ ಕಲಾಗ್ರಾಮದ ಅಭಿವೃದ್ಧಿಗೆ ರು. 100 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.
ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಎಂ.ಟಿ. ರೇಜು, ಜಿಪಂ ಮು.ಕಾ.ನಿ. ಅಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ತಂಗಿನ ನಾರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ಗೌರಿ ಪೂಜಾರಿ, ಕರಾವಳಿ ಪ್ರಾಧಿಕಾರ ನಿಗದಮ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಇದ್ದರು.
ಅತ್ಯುನ್ನತ ಸೇವೆಗೈದ ರಾಜ್ಯ ಸರ್ಕಾರಿ ನೌಕರರಾದ ಮಂಜುನಾಥ ಶೆಟ್ಟಿ, ರಾಘವೇಂದ್ರ ಪಿ.ಎಸ್, ಮೋಹನ್ ರಾವ್, ಅಶೋಕ ಇನ್ನಿತರರನ್ನು ಸನ್ಮಾನಿಸಲಾಯಿತು.
ಇದಕ್ಕೆ ಮೊದಲು ಪೊಲೀಸ್, ಎನ್‌ಸಿಸಿ, ಸ್ಕೌಟ್ಸ್ ಗೈಡ್ಸ್, ಸೇವಾದಳ ಇತ್ಯಾದಿ 24 ತಂಡಗಳಿಂದ ಆಕರ್ಷಕ ಪಂಥಸಂಚಲನ ನಡೆಯಿತು. ಕಾರ್ಯಕ್ರಮ ನಂತರ ಶಾಲೆ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.