ಜುಗಾರಿ; ಐವರ ಬಂಧನ
ಉಡುಪಿ: ಜುಗಾರಿ ಆಡುತ್ತಿದ್ದ 5 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ ಪ್ರಕರಣ ಭಾನುವಾರ ಇಲ್ಲಿನ ಹೊಟೇಲೊಂದರ ಸಮೀಪ ನಡೆದಿದೆ. ಆರೋಪಿಗಳು ಹೊಟೇಲ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಬಂಧಿಸಿ, ಆಟಕ್ಕೆ ಬಳಸಿದ ರು. 60,200 ನಗದು ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾಹಿತೆ ಪ್ರಿಯಕರನೊಂದಿಗೆ ನಾಪತ್ತೆ ಶಂಕೆ
ಮೂಲ್ಕಿ: ನಾಪತ್ತೆಯಾದ ವಿವಾಹಿತೆ ಪ್ರಿಯಕರನೊಂದಿಗೆ ಪರಾರಿಯಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಮೆನ್ನಬೆಟ್ಟು ಗ್ರಾಮದ ಕಮ್ಮಜೆಯ ಮಂಚಿಗುಡ್ಡೆ ನಿವಾಸಿ ರಮೇಶ್ ಅವರ ಪತ್ನಿ ಸಿಂಧು (23) ಜು.23ರಂದು ತವರು ಮನೆಗೆ ಹೋಗುವುದಾಗಿ ಹೇಳಿ ತವರು ಮನೆಗೆ ಹೋಗದೆ, ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿಈ ಬಗ್ಗೆ ಪತಿ ರಮೇಶ್ ಮೂಲ್ಕಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಬಜಪೆಯ ಕರಂಬಾರಿನ ಅವಿವಾಹಿತನೊಬ್ಬ ಸಿಂಧು ಮನೆಗೆ ಆಗಾಗ ಬರುತ್ತಿದ್ದು ನೆರೆಕರೆಯಲ್ಲಿ ತಾನು ಸಿಂಧುವಿನ ಅಣ್ಣ ಎಂದು ತಿಳಿಸಿದ್ದ. ರಮೇಶ್ನೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು ಈ ಬಗ್ಗೆ ನೆರೆಕರೆಯವರಿಗೆ ಸಂಶಯವಿದ್ದು ಇದೀಗ ಆತನೊಂದಿಗೆ ಪರಾರಿಯಾಗಿರಬೇಕೆಂದು ಶಂಕಿಸಲಾಗಿದೆ.
ಬಸ್ ಡಿಕ್ಕಿ; ಪಾದಚಾರಿ ಗಾಯ
ಮೂಲ್ಕಿ: ಹಳೆಯಂಗಡಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಡಿಕ್ಕಿಯಾಗಿ ಪಾದಚಾರಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಹೆಜಮಾಡಿ ನಿವಾಸಿ ಬಾಲಕೃಷ್ಣ ಗಾಯಗೊಂಡವರು. ಅವರು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸ್ಕಿಡ್; ಸವಾರ ಸಾವು
ಕಾರ್ಕಳ: ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ಸವಾರ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟ ಘಟನೆ ಮರ್ಣೆ ಗ್ರಾಮದಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ ಸುರೇಶ್ ಮೃತರು. ಇವರು ಜು.24ರಂದು ಬೈಕ್ ಪಲ್ಟಿಯಾದ ಪರಿಣಾಮ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅಡಕೆ ಮರ ಬಿದ್ದು ಮಹಿಳೆ ಸಾವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ರಾಮಕುಂಜ ಗ್ರಾಮದ ಖಂಡಿಗ ಎಂಬಲ್ಲಿ ಹುಲ್ಲು ತೆಗೆಯಲೆಂದು ಹೋದ ಮಹಿಳೆ ಅಡಕೆ ಮರ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಖಂಡಿಗ ನಿವಾಸಿ ಲಕ್ಷ್ಮೀ (50) ಮೃತಳು. ಈಕೆ ತನ್ನ ಸಹೋದರನ ಮನೆಯಲ್ಲಿ ವಾಸ್ತವ್ಯ ಇದ್ದು, ಹುಲ್ಲು ತರಲೆಂದು ತೋಟಕ್ಕೆ ಹೋದವರು ಅಲ್ಲಿ ಅಡಕೆ ಮರ ಅವರ ಮೇಲೆ ಬಿದ್ದು ಅವರು ಸಾವನ್ನಪಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕಡಬ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಂದೆ ಮೇಲೆ ಪುತ್ರ ಕತ್ತಿಯಿಂದ ಹಲ್ಲೆ
ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ಕುಟ್ರುಪ್ಪಾಡಿ ಗ್ರಾಮದ ಕಾರ್ಲ ಎಂಬಲ್ಲಿ ಮಗನೇ ತಂದೆಗೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆ ನಡೆದಿದೆ. ಶಿವರಾಮ ಬಂಗೇರ ಎಂಬವರು ಹಲ್ಲೆಗೀಡಾದ ತಂದೆಯಾಗಿದ್ದು, ಅವರ ಮಗ ಹರೀಶ್ (32) ಹಲ್ಲೆ ಆರೋಪಿ. ಕೌಟುಂಬಿಕ ವೈಷಮ್ಯದಿಂದ ಈ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಹಲ್ಲೆಗೀಡಾದ ಶಿವರಾಮ ಬಂಗೇರ ಪುತ್ತೂರಿನ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್-ಕಾರು ಡಿಕ್ಕಿ; ಸವಾರ ಗಂಭೀರ
ಉಪ್ಪಿನಂಗಡಿ: ಕಡಬ ಬಳಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ವಿಕ್ರಂ (42) ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಗಾಯಾಳು ವಿಕ್ರಮ್ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಜೀಪು ಮಗುಚಿ ಪ್ರಯಾಣಿಕರಿಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೀರಕಟ್ಟೆ ಎಂಬಲ್ಲಿ ರಾ.ಹೆ. 75ರಲ್ಲಿ ಜೀಪು ಮಗುಚಿ ಬಿದ್ದ ಪರಿಣಾಮ ಜೀಪಿನಲ್ಲಿದ್ದ ಚಾಲಕ ಸಲೀಂ, ಪ್ರಯಾಣಿಕರಾದ ಸುಲೈಮಾನ್, ಇಸ್ಮಾಯಿಲ್, ಹಮೀದ್ ಎಂಬವರು ಗಾಯಗೊಂಡ ಘಟನೆ ಸಂಭವಿಸಿದೆ. ಗಾಯಾಳುಗಳು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದು, ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಗಾಯಾಳು ಮೃತ್ಯು
ಸುಳ್ಯ: ಸುಳ್ಯದಿಂದ ಮಡಿಕೇರಿಗೆ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭ ದೇವರಕೊಲ್ಲಿ ಎಂಬಲ್ಲಿ ಬೈಕ್ನಿಂದ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡಿದ್ದ ಮಂಡೆಕೋಲಿನ ವ್ಯಕ್ತಿಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ಮಂಡೆಕೋಲಿನ ದಿ.ದಾಮೋದರ್ ಮಾಸ್ತರ್ ಅವರ ಪುತ್ರ ಶ್ರೀಧರ ಎಂ.ಬಿ. (46) ಮೃತರು. ಮಡಿಕೇರಿಯಲ್ಲಿ ಉದ್ಯಮಿಯಾಗಿದ್ದ ಅವರು ಜು.26ರಂದು ರಾತ್ರಿ ಸುಳ್ಯದಿಂದ ಮಡಿಕೇರಿಗೆ ಬೈಕ್ನಲ್ಲಿ ಹೊರಟಿದ್ದರು. ದೇವರಕೊಲ್ಲಿ ಬಳಿ ಬೈಕ್ ಸ್ಕಿಡ್ ಆಗಿ ಶ್ರೀಧರ್ ರಸ್ತೆಗೆಸೆಯಲ್ಪಟ್ಟಿದ್ದರು. ತಲೆಗೆ ಗಂಭೀರ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯರ ಸಹಕಾರದಿಂದ ಸಂಪಾಜೆ ಆರೋಗ್ಯ ಕೇಂದ್ರಕ್ಕೆ ತರಲಾಯಿತು. ಅಲ್ಲಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರಿಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಯುವಕ ನಾಪತ್ತೆ
ಮಂಗಳೂರು: ಕೂಳೂರು ಬಳಿ ಕೆಲಸ ಮಾಡುತ್ತಿದ್ದ ಪಶ್ಚಿಮಬಂಗಾಲ ಚೋಟು ಕೋತ್ವಾಲ್ (18) ನಾಪತ್ತೆಯಾಗಿದ್ದಾನೆ. ಎತ್ತರ 5 ಅಡಿ, ಗೋಧಿ ಮೈಬಣ್ಣ, ಬಲಗೈಯಲ್ಲಿ ಹಚ್ಚೆ, ಎದೆ ಬಲಭಾಗದಲ್ಲಿ ಎಳ್ಳುಮಚ್ಚೆ, ಕುತ್ತಿಗೆಯಲ್ಲಿ ಮಹಾಕಾಳಿ ದೇವಿ ಲಾಕೆಟ್ ಇದೆ. ಮೇ 14ರಂದು ಸೋಮನ್ ಮುದಿ ಜತೆ ಕೂಳೂರು ಕುದುರೆಮುಖ ಜಂಕ್ಷನ್ ಬಳಿ ಕೆಲಸಕ್ಕೆ ಹೋಗಿದ್ದು, ವಿಶ್ರಾಂತಿ ಪಡೆಯುತ್ತಿರುವಾಗ ಮೂತ್ರ ವಿಸರ್ಜನೆಗೆ ಹೋದಾತ ಬಂದಿಲ್ಲ ಎಂದು ಪಣಂಬೂರು ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

