ಸರ್ವಿಸ್ ಬಸ್ ಚಾಲಕರ ದಿಢೀರ್ ಮುಷ್ಕರ
ಉಡುಪಿ: ಬಿಜೆಪಿ ನಾಯಕರೊಬ್ಬರು ಭಾನುವಾರ ರಾತ್ರಿ ಸರ್ವಿಸ್ ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ವಿರೋಧಿಸಿ ನಗರದ ಸರ್ವಿಸ್ ಬಸ್‌ಗಳ ಚಾಲಕರು ಸೋಮವಾರ ದಿಢೀರ್ ಮುಷ್ಕರ ನಡೆಸಿದರು. ಇದರಿಂದ ಈ ಬಸ್‌ಗಳನ್ನು ಅವಲಂಬಿಸಿದ್ದ ನೂರಾರು ಮಂದಿ ತೊಂದರೆ ಅನುಭವಿಸುವಂತಾಯಿತು.
ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ, ಉಡುಪಿ ನಗರಸಭೆ ಸದಸ್ಯ ಯಶಪಾಲ್ ಸುವರ್ಣ ಮತ್ತು ಇತರೆ 4 ಮಂದಿ ಸಹಚರರು ಭಾನುವಾರ ರಾತ್ರಿ 8.40ಕ್ಕೆ ಮಂಗಳೂರಿನಿಂದ ಬರುವಾಗ ತಮ್ಮ ಕಾರಿಗೆ ಮುಂದಕ್ಕೆ ಹೋಗಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಕಟಪಾಡಿಯಲ್ಲಿ ವಿಶಾಲ್ ಬಸ್ ಚಾಲಕ ಮಂಜುನಾಥ ಎಂಬವರನ್ನು ಥಳಿಸಿದ್ದರು. ಈ ಬಗ್ಗೆ ವಿಚಾರಿಸಿದ ಆಯಿರ ಎಂಬ ಬಸ್ ಚಾಲಕ ಶಂಶುದ್ದೀನ್ ಮತ್ತು ಪ್ರಯಾಣಿಕ ಲಕ್ಷ್ಣಣ್ ಎಂಬವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಮಂಜುನಾಥ ಆಸ್ಪತ್ರೆಗೆ ದಾಖಲಾಗಿದ್ದು, ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಪೋದ್ರಿಕ್ತರಾದ ಚಾಲಕರು: ಸೋಮವಾರ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಸರ್ವಿಸ್ ಬಸ್ ಸಿಬ್ಬಂದಿ ಬಂದ್‌ಗೆ ಕರೆ ನೀಡಿದರು. ಉಡುಪಿಯಿಂದ ಮಂಗಳೂರು ಮತ್ತು ಕುಂದಾಪುರ ಕಡೆಗೆ ಹೋಗುವ ಬಸ್ಸುಗಳ ಚಾಲಕರು ಮುಷ್ಕರ ನಡೆಸಿದರು. ಇದರಿಂದ ಕುಂದಾಪುರ ಮತ್ತು ಮಂಗಳೂರಿಗೆ ತೆರಳುವವರು ಪರದಾಡುವಂತಾಯಿತು.
ಬೆಳಗ್ಗೆ 10 ಗಂಟೆಗೆ ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಬಸ್ ಚಾಲಕರು ಜಗ್ಗಲಿಲ್ಲ. ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಮಧ್ಯೆ ಬಸ್ ಮಾಲೀಕರು- ಚಾಲಕರ ನಡುವೆಯೂ ಬಸ್ಸು ಓಡಾಟಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆಯಿತು. ಬೇರೆ ವಾಹನಗಳಲ್ಲಿ ಜನರನ್ನು ಸಾಗಿಸುತ್ತಿದ್ದಾಗ ಬಸ್ ಚಾಲಕರು ಅದಕ್ಕೂ ಅಡ್ಡಿಪಡಿಸಿದರು. ಈ ಸಂದರ್ಭ ಸರ್ವಿಸ್ ಬಸ್ ನಿಲ್ದಾಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ನಂತರ ಪೊಲೀಸರು ಹೆಚ್ಚುವರಿ ಸರ್ಕಾರಿ ಬಸ್ಸುಗಳನ್ನು ತರಿಸಿ ಜನರಿಗೆ ಓಡಾಡಲು ಅನುವು ಮಾಡಿ ಕೊಟ್ಟರು.
ಕೊನೆಗೆ ಆರೋಪಿ ಯಶಪಾಲ್ ಸುವರ್ಣ ಮತ್ತು ಇತರರು ಕಾಪು ಠಾಣೆಗೆ ಹಾಜರಾಗಿ ಕಾನೂನಿಗೆ ಶರಣಾದ ಮೇಲೆ ಮಧ್ಯಾಹ್ನದ ನಂತರ ಬಸ್‌ಗಳ ಸಂಚಾರ ಎಂದಿನಂತೆ ಆರಂಭವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

