ಅರರೇ ಇನ್ನೂ ಮುಗಿದಿಲ್ಲ ಚುನಾವಣೆ?
ಬಂಟ್ವಾಳ: ಆ ಶಾಲೆಯಲ್ಲಿ ಮಂಗಳವಾರ ನಡೆಯಿತು ಚುನಾವಣಾ ಸಮರ.. ಮತಯಂತ್ರದ ಮೂಲಕ ಮತ ಚಲಾಯಿಸಿದ ಮಕ್ಕಳು ತಮ್ಮ ಶಾಲಾ ನಾಯಕನನ್ನು ತಾವೇ ಆಯ್ಕೆ ಮಾಡಿಕೊಂಡರು. ಗೆದ್ದವರು ಸಂಭ್ರಮಪಟ್ಟರು, ಸೋತವರು ಪರಿತಪಿಸಿದರು.. ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಪಾಠವನ್ನು ಅರ್ಥಪೂರ್ಣವಾಗಿ ನಡೆಸುವ ಮೂಲಕ ಗಮನ ಸೆಳೆದಿರುವುದು ಬಂಟ್ವಾಳ ತಾಲೂಕಿನ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ.
ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆದ ಶಾಲೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 2013- 14ನೇ ಸಾಲಿನ ಶಾಲಾ ನಾಯಕನಾಗಿ 10ನೇ ತರಗತಿಯ ಕುಮಾರ್ ಗಣೇಶ್ ಪ್ರಭು ಆಯ್ಕೆಯಾದರೆ, ಉಪನಾಯಕನಾಗಿ 9ನೇ ತರಗತಿಯ ವಿದಿಷ್ಕೃಷ್ಣ ವೈ. ಅವಿರೋಧವಾಗಿ ಆಯ್ಕೆಯಾದರು.
ಗೆದ್ದ ಸೂರ್ಯ, ಸೋತ ಸೈಕಲ್, ಕೊಡೆ: ಮೂರನೇ ತರಗತಿಯಿಂದ 10ನೇ ತರಗತಿ ವರೆಗಿನ 455 ವಿದ್ಯಾರ್ಥಿಗಳನ್ನು ಮತದಾರರೆಂದು ಗುರುತಿಸಲಾಗಿತ್ತು. ಆದರೆ ಈ ಪೈಕಿ ಮಂಗಳವಾರ ತರಗತಿಗೆ ಹಾಜರಾದ 439 ವಿದ್ಯಾರ್ಥಿಗಳು ಮಾತ್ರ ಮತ ಚಲಾಯಿಸಿದ್ದು, ಶೇ. 96.5 ಮತದಾನವಾಗಿದೆ. ಸೂರ್ಯ ಚಿಹ್ನೆಯಿಂದ ಸ್ಪರ್ಧಿಸಿದ್ದ ಕುಮಾರ್ ಗಣೇಶ್ ಪ್ರಭು 273 ಮತ ಪಡೆದು ವಿಜಯಿಯಾದರೆ, ಸೈಕಲ್ ಚಿಹ್ನೆಯಿಂದ ಸ್ಪರ್ಧಿಸಿದ್ದ ಪ್ರಣೀತ್ 150 ಹಾಗೂ ಕೊಡೆ ಚಿಹ್ನೆಯ ಅಭ್ಯರ್ಥಿ ಅಹ್ಮದ್ ಅನೀಶ್ ಕೇವಲ 16 ಮತಗಳನ್ನು ಪಡೆದರು.
ಇದು ಪ್ರಜಾಪ್ರಭುತ್ವದ ಪಾಠ...: ಶಾಲಾ ಜನನಾಯಕನನ್ನು ಸಾಮಾನ್ಯವಾಗಿ ಶಾಲಾ ಮುಖ್ಯಸ್ಥರು ತಮ್ಮಿಚ್ಚೆಯಂತೆ ನಡೆಸುತ್ತಾರೆ. ಆದರೆ ಮಕ್ಕಳಿಗೆ ಚುನಾವಣಾ ಮಾಹಿತಿಯ ಜತೆಗೆ ಪ್ರಜಾಪ್ರಭುತ್ವದ ಪಾಠವನ್ನು ನಡೆಸುವ ಉದ್ದೇಶದಿಂದ ಶಾಲೆಗಳಲ್ಲಿಯೂ ಚುನಾವಣೆಗಳು ನಡೆಯುತ್ತಿದ್ದು, ಇದನ್ನು ಮಾದರಿಯಾಗಿ ನಡೆಸಿದ ಕೀರ್ತಿ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯದ್ದು.
ರಾಜ್ಯ ಚುನಾವಣಾ ಆಯೋಗ ರಾಜ್ಯದಲ್ಲಿ ನಡೆಸುವ ವಿವಿಧ ಚುನಾವಣಾ ಸಂದರ್ಭದಲ್ಲಿ ಅನುಸರಿಸುವ ನೀತಿ ನಿಯಮಗಳನ್ನೇ ಈ ಶಾಲಾ ಚುನಾವಣೆಯಲ್ಲಿ ಪಾಲಿಸಲಾಗಿದೆ. ಚುನಾವಣಾ ನೀತಿಸಂಹಿತೆಯಿಂದ ತೊಡಗಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚಿಹ್ನೆ ನೀಡಿಕೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ, ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕೆ ಅವಕಾಶ, ಮತಯಂತ್ರದ ಮೂಲಕ ಮತಚಲಾವಣೆ, ಎಡಗೈ ತೋರು ಬೆರಳಿಗೆ ಶಾಯಿ, ಮತ ಎಣಿಕೆ, ವಿಜೇತ ಅಭ್ಯರ್ಥಿಗಳ ಘೋಷಣೆ ಹೀಗೆ ಎಲ್ಲವೂ ಇಲ್ಲಿ ನಡೆದಿದೆ.
ಜೂನ್ 7 ರಂದು ನಾಮಪತ್ರ ಸಲ್ಲಿಕೆ, ಪರಿಶೀಲನೆ, ಜೂ.8 ರಂದು, ಹಿಂತೆಗೆತಕ್ಕೆ ಅವಕಾಶ, ಜೂ.10 ರಂದು ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಿಕೆ ಹಾಗೂ ಜೂನ್ 11ರಂದೇ ಮತದಾನ ಹಾಗೂ ಮತಎಣಿಕೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
ಶಿಕ್ಷಕರು ಅಧಿಕಾರಿಗಳಾದರು.. : ಮೂರನೇ ತರಗತಿಯಿಂದ ಮೇಲ್ಪಟ್ಟ ಮಕ್ಕಳಿಗೆ ಮತದಾನಕ್ಕೆ ಅವಕಾಶ ನೀಡಲಾಗಿರುವುದು ಇಲ್ಲಿನ ವಿಶೇಷ. ಶಾಲೆಯ 439 ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ಮತಚಲಾಯಿಸಿದರೆ, ಪಾಠ ಹೇಳುವ ಶಿಕ್ಷಕರು ಚುನಾವಣಾ ಅಧಿಕಾರಿಗಳಂತೆ ಗರಂ ಆಗಿ ಕುಳಿತು ಚುನಾವಣೆಯನ್ನು ಶಾಂತ ರೀತಿಯಲ್ಲಿ ನಡೆಸಿಕೊಟ್ಟರು.
ಶಾಲಾ ಆಡಳಿತಾಧಿಕಾರಿ ಸಿ. ಶ್ರೀಧರ್ ಚುನಾವಣಾಧಿಕಾರಿಯಾಗಿದ್ದರೆ, ಪ್ರೌಢಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ವಿ. ಶೆಟ್ಟಿ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗ್ರೇಸ್ ಸಲ್ಡಾನಾ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಮತಗಟ್ಟೆ ಸಿಬ್ಬಂದಿಯನ್ನು ಕೂಡ ಮೂರು ಹಂತಗಳಲ್ಲಿ ಹೆಸರಿಸಲಾಗಿದ್ದು, ಶಿಕ್ಷಕಿಯರಾದ ಮೋಹಿನಿ, ಅಕ್ಷತಾ, ಮಂಜುಳಾ, ಹರಿಣಾಕ್ಷಿ, ಯಜ್ಞೇಶ್ವರಿ, ಸುಜಯ ಶ್ರೀ, ಮತಗಟ್ಟೆ ಸಿಬ್ಬಂದಿಯಾಗಿದ್ದರು. ಸುಧಾ ಹಾಗೂ ಸುಮಿಯಾ ಭದ್ರತಾ ಸಿಬ್ಬಂದಿಯಾಗಿದ್ದು, ರಾಮಚಂದ್ರ, ಪ್ರಸಾದ್ ನೀತಿಸಂಹಿತೆ ಅಧಿಕಾರಿಗಳಾಗಿದ್ದರು. ದಿನಕರ್ ಹಾಗೂ ರಾಜಾರಾಮ ನೆಲ್ಲಿತ್ತಾಯ ಚುನಾವಣೆಯ ಮೇಲುಸ್ತುವಾರಿ ವಹಿಸಿದ್ದರು. ಶಾಲೆಯ ಎಲ್ಲ ಶಿಕ್ಷಕ- ಶಿಕ್ಷಕಿಯರು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.
ಕಳೆದ ನಾಲ್ಕೈದು ವರ್ಷಗಳಿಂದ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ತನ್ನ ಶಾಲಾ ನಾಯಕನನ್ನು ಚುನಾವಣೆಯ ಮೂಲಕ ಆಯ್ಕೆ ಮಾಡುತ್ತಿದ್ದು. ಶಾಲಾ ಸಂಚಾಲಕ ಪ್ರಹ್ಲಾದ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಸಲಾಗುತ್ತಿದೆ ಎಂದು ಪ್ರೌಢಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ತಿಳಿಸಿದ್ದಾರೆ.
ಬಿಇಓ ಶ್ಲಾಘನೆ
ಶಾಲಾ ನಾಯಕನ ಆಯ್ಕೆ ಹಾಗೂ ಮಂತ್ರಿಮಂಡಲ ರಚನೆಗೆ ಚುನಾವಣೆ ನಡೆಸುವುದು ಒಂದು ಒಳ್ಳೆಯ ಪ್ರಕ್ರಿಯೆ. ಇದು ಪ್ರಜಾಪ್ರಭುತ್ವದ ಪ್ರ್ಯಾಕ್ಟಿಕಲ್ ಪಾಠ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಅಭಿಪ್ರಾಯಿಸಿದ್ದಾರೆ. ಮಾಣಿ ಶಾಲೆಯಲ್ಲಿ ಮತಯಂತ್ರ ಬಳಸಿ ಚುನಾವಣೆ ಮೂಲಕ ಶಾಲಾನಾಯಕನ ಆಯ್ಕೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು ಪ್ರಜಾಪ್ರಭುತ್ವದ ಥಿಯರಿ ಹೇಳುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಇಂತಹ ಪ್ರಕ್ರಿಯೆಗಳು ಮಕ್ಕಳಿಗೆ ಕಲಿಕೆಯ ಜತೆಗೆ ಮನಸ್ಸಿಗೆ ಮುದಕೊಡುತ್ತದೆ ಎಂದರು.
-ಮೌನೇಶ ವಿಶ್ವಕರ್ಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

