ಉಡುಪಿ

ಐದು ವರ್ಷದೊಳಗೆ ರಾಜ್ಯದಲ್ಲಿ ಕೊಳಚೆ ಪ್ರದೇಶ ನಿರ್ಮೂಲನೆ

Published On :

ಮಣಿಪಾಲ: ಕೊಳಚೆ ಪ್ರದೇಶಗಳಲ್ಲಿ ಸೊಳ್ಳೆ ಉತ್ಪಾದನೆಯಾಗಿ ಕಾಯಿಲೆಗಳು ಹರಡುವುದು ಹೆಚ್ಚಾಗುತ್ತಿರುವುದರಿಂದ ಮುಂದಿನ 5 ವರ್ಷಗಳಲ್ಲಿ ರಾಜ್ಯದ ಎಲ್ಲ ನಗರಗಳ ಕೊಳಚೆ ಪ್ರದೇಶಗಳನ್ನು ನಿರ್ಮೂಲನೆ ಮಾಡಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಮೆಡಿಕಲ್ ಕಾಲೇಜುಗಳು, ನರ್ಸಿಂಗ್ ಕಾಲೇಜು, ಆಸ್ಪತ್ರೆಗಳಿದ್ದರೂ ಮಳೆಗಾಲದಲ್ಲಿ ರೋಗಗಳನ್ನು ಉತ್ಪಾದನೆ ಮಾಡುವ ಕಾರ್ಖಾನೆಯಂತಾಗಿವೆ ನಮ್ಮ ಜಿಲ್ಲೆಗಳು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಜೊತೆಯಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಶೇ.60 ಮಲೇರಿಯಾ ಪ್ರಕರಣ ಅವಿಭಜಿತ ಜಿಲ್ಲೆಯಲ್ಲಿ: ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಅಧಿಕಾರಿ ಡಾ. ರಾಮಚಂದ್ರ ಬಾಯರಿ, ರಾಜ್ಯದ ಒಟ್ಟು ಮಲೇರಿಯಾ ಪ್ರಕರಣಗಳು ಶೇ.55ರಿಂದ 60ರಷ್ಟು ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಪತ್ತೆಯಾಗುತ್ತವೆ. ಇಲ್ಲಿ ಬೀಳುವ ಅತ್ಯಧಿಕ ಮಳೆ, ತೋಟ, ಗದ್ದೆಗಳಿಂದ ಕೂಡಿದ ಪ್ರದೇಶ ಸಹಿತ ಅನೇಕ ಕಾರಣಗಳಿಂದ ಇಲ್ಲಿ ಅತ್ಯಧಿಕ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದರಿಂದ ವಿವಿಧ ಸಾಂಕ್ರಾಮಿಕ ರೋಗಳು ಹರಡುತ್ತವೆ ಎಂದು ವಿವರಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಜಿಲ್ಲೆಯ ಕೆಳಾರ್ಕಳ ಬೆಟ್ಟು ಮತ್ತು ಕಬ್ಬಿನಾಲೆ ಪರಿಸರದಲ್ಲಿ ಡೆಂಘೀ ಹರಡಿದಾಗ ಜಾಗೃತರಾಗಿ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಆಶಾ ಕಾರ್ಯಕರ್ತೆ ಯಶೋಧಾ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಯಮುನಾ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್, ಉಪಾಧ್ಯಕ್ಷೆ ಮಮತಾ ಆರ್. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್, ಸದಸ್ಯ ದಿವಾಕರ ಕುಂದರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಸರ್ಜನ್ ಡಾ. ಆನಂದ ನಾಯ್ಕ್, ಮಣಿಪಾಲ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ರಾಮಚಂದ್ರ ಕಾಮತ್, ಉಡುಪಿ ನಗರಸಭೆ ಪೌರಾಯುಕ್ತ ಗೋಕುಲ್‌ದಾಸ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಲ್ಲಾ ಸಹಾಯಕ ಕೀಟ ಶಾಸ್ತ್ರಜ್ಞೆ ಜ್ಯೋತ್ಸ್ನಾ ಕೈರನ್ನಾ ಸ್ವಾಗತಿಸಿದರು. ಮಹಾಬಲೇಶ್ವರ ವಂದಿಸಿದರು. ಸುಮಲತಾ ಶೆಟ್ಟಿ ನಿರೂಪಿಸಿದರು.



ಜಿಲ್ಲೆಯಲ್ಲಿ ಮಲೇರಿಯಾ ಜಾಗೃತಿ ಅಭಿಯಾನ ಆಯೋಜಿಸಿದ್ದು, ಈಗಾಗಲೇ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಒಂದು ಸುತ್ತಿನ ಮನೆಮನೆ ಭೇಟಿ ಪೂರ್ಣಗೊಳಿಸಿದ್ದಾರೆ. ಜು.8ರಂದು 2ನೇ ಸುತ್ತು, ಆಗಸ್ಟ್ ತಿಂಗಳಲ್ಲಿ 3ನೇ ಸುತ್ತು ಹಾಗೂ ಅಗತ್ಯವಿದ್ದರೆ ಸಪ್ಟೆಂಬರ್‌ನಲ್ಲಿ 4ನೇ ಸುತ್ತು ನಡೆಸಲಾಗುತ್ತದೆ.
- ಡಾ. ರಾಮಚಂದ್ರ ಬಾಯರಿ, ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಅಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.