ಉಡುಪಿ

ರಂಗ ಶಿಬಿರದಿಂದ ಮಕ್ಕಳ ಪ್ರತಿಭೆ ಅನಾವರಣ; ಬಿ.ವಿ.ರಾಜಾರಾಂ

Published On :

ಉಡುಪಿ:  ಹಿಂದೆ ನಾಟಕ ತಂಡಕ್ಕೆ ಹೋಗುತ್ತೇವೆ ಎಂದಾಗ ಹಿರಿಯರು, ಪೋಲಿಯಾಗುತ್ತಾನೆ ಎಂದು ಬೇಡ ಎನ್ನುತ್ತಿದ್ದರು. ಆದರೆ ಈಗ ತಂದೆ ತಾಯಿಗಳು ಮಕ್ಕಳನ್ನು ರಂಗ ಶಿಬಿರಗಳಿಗೆ ಕಳುಹಿಸುತ್ತಾರೆ. ಮಕ್ಕಳರಂಗಪ್ರತಿಭೆ ಅನಾವರಣಕ್ಕಾಗಿ ಅವರನ್ನು ರಂಗ ಶಿಬಿರಕ್ಕೆ ಕಳುಹಿಸಬೇಕು ಎಂದು ಮೈಸೂರು ರಂಗಾಯಣ ನಿರ್ದೇಶಕ ಬಿ.ವಿ ರಾಜಾರಾಂ ಹೇಳಿದ್ದಾರೆ.
ಕೊಡವೂರಿನ ಸುಮನಸಾ ಸಾಂಸ್ಕೃತಿಕ ಸಂಸ್ಥೆಯ ದಶಮಾನೋತ್ಸವ ಪ್ರಯುಕ್ತ ಅಜ್ಜರಕಾಡಿನ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಇತ್ತೀಚಿಗೆ ನಡೆದ ಬಹುಭಾಷಾ ನಾಟಕೋತ್ಸವ ರಾಷ್ಟ್ರೀಯ ರಂಗ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳು ರಂಗ ಪ್ರತಿಭೆಯನ್ನು ಬೆಳೆಸಿಕೊಂಡರೆ ಸ್ವತಂತ್ರ ಯೋಜನೆಯನ್ನು ಮಾಡುವ ಉತ್ತಮ ನಾಗರಿಕರಾಗುತ್ತಾರೆ. ನಮ್ಮ ಬದುಕು ಅನೇಕ ಸಂಬಂಧಗಳು, ಭಾವನೆಗಳಿಂದ ಕೂಡಿದೆ. ರಂಗಭೂಮಿ ಈ ಭಾವನೆಗಳ ಮೇಲೆ ನಿಂತಿದೆ. ಈ ನಾಟಕಗಳ ಪ್ರಯೋಗ ಪರಿಣಾಮಕಾರಿಯಾಗಿ ಆಗಬೇಕು ಎಂದರು.
ಮೈಸೂರಿನ ರಂಗಚಿಂತಕ ಎಚ್.ಎಸ್. ಉಮೇಶ ಮಾತನಾಡಿ ಇವತ್ತಿನ ಜಗತ್ತಿನಲ್ಲಿ ಯಾರೂ ಏಕ ಭಾಷಿಕರಾಗಿ ಉಳಿದಿಲ್ಲ. ಉಡುಪಿಯ ಜನತೆ ಬಹುಭಾಷಿಕರಾಗುವಾಗ ಅವುಗಳ ಅನನ್ಯ ಲಕ್ಷಣಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ನಾಟಕಗಳಿಗೆ ಕನ್ನಡ, ತುಳು, ಕೊಂಕಣಿ ಭಾಷೆಗಳು ಮುಖ್ಯವಾಗುವುದಿಲ್ಲ. ನಾಟಕಗಳಿಗೆ ಭಾವನೆಯ ಭಾಷೆ ಮಾತ್ರ ಮುಖ್ಯವಾಗಿರುತ್ತದೆ ಎಂದರು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ಈಶ್ವರಯ್ಯ ಅವರು ಮಾಧ್ಯಮಗಳು ಕಲೆಗಳನ್ನು ಮರೆತುಬಿಟ್ಟಿವೆ. ಪತ್ರಿಕೆಗಳು, ವಾಹಿನಿಗಳು ಕಲೆಯನ್ನು ಎಷ್ಟರಮಟ್ಟಿಗೆ, ಯಾವ ರೀತಿ ದುಡಿಸಿಕೊಳ್ಳುತ್ತಿವೆ ಎಂದು ಪ್ರಶ್ನಿಸಿ, ಕಲೆಯ ಬಗ್ಗೆ ಸಾರ್ವಜನಿಕವಾಗಿ ಚಿಂತನ ಮಂಥನ ನಡೆಯಬೇಕು ಎಂದು ತಿಳಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅವರು ವಹಿಸಿದ್ದರು. ತುಳುಕೂಟ ಉಡುಪಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ರಂಗಕಲಾವಿದ ಶ್ರೀಕಂಠ ಗುಂಡಪ್ಪ, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ದಶಮಾನೋತ್ಸವ ಸಮಿತಿ ಅಧ್ಯಕ್ಷ ಭಾಸ್ಕರ ಬಾಚನಬೈಲು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಂಗಕಲಾವಿದ ಮೋಹನ್ ಸೋನಾ ಮತ್ತು ಕರಾವಳಿ ಕಲಾವಿದ ಮಲ್ಪೆ ತಂಡದ ಶೇಖರ್ ಬೈಕಾಡಿ ಇವರನ್ನು ಸನ್ಮಾನಿಸಲಾಯಿತು.
ಸಮನಸಾ ಪ್ರಧಾನ ಕಾರ್ಯದರ್ಶಿ ಬಾಸುಮ ಕೊಡಗು ಮತ್ತು ಸುಜಾತ ಶೆಟ್ಟಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.