ಮಲೇರಿಯಾ, ಡೆಂಘೀ ನಿರ್ಲಕ್ಷ್ಯ ಬೇಡ: ಡಾ. ಬಾಯರಿ
ಉಡುಪಿ: ಮಳೆಗಾಲ ಆರಂಭವಾಗಿದೆ. ಅಲ್ಲಲ್ಲಿ ಜ್ವರ ಕಾಣಿಸಿಕೊಳ್ಳಲಿದೆ, ಆದ್ದರಿಂದ ಯಾವುದೇ ಜ್ವರವಾಗಿರಲಿ, ನಿರ್ಲಕ್ಷ್ಯ ಮಾಡದೇ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಕೊಂಡು, ಸೂಕ್ತ ಔಷಧ ಪಡೆಯಬೇಕು ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ವಿನಂತಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಮಲೇರಿಯಾ, ಡೆಂಘೀ ಇತ್ಯಾದಿ ಸೊಳ್ಳೆಗಳಿಂದ ಹರಡುವ ಕಾಯಿಲೆ ಜಾಸ್ತಿ. ಇದಕ್ಕೆ ಸೊಳ್ಳೆಗಳನ್ನು ನಿಯಂತ್ರಿಸುವುದೊಂದೇ ಪರಿಹಾರ. ಆದ್ದರಿಂದ ಮನೆಯ ಸುತ್ತಮುತ್ತ ಯಾವುದೇ ರೀತಿಯಲ್ಲಿ ಸ್ವಲ್ಪವೂ ನೀರು ನಿಲ್ಲದಂತೆ ಮಾಡಬೇಕು. ಜೊತೆಗೆ ಸೊಳ್ಳೆಗಳಿಂದ ರಕ್ಷಣೆ ಪಡೆದುಕೊಂಡು ಈ ಕಾಯಿಲೆಗಳಿಂದ ದೂರ ಇರಬಹುದು. ಅದಕ್ಕಾಗಿ ಸೊಳ್ಳೆ ಪರದೆಯನ್ನು ಉಪಯೋಗಿಸುವಂತೆ ಅವರು ತಿಳಿಸಿದರು.
ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದ ಉದ್ಯೋಗಕ್ಕಾಗಿ ಇಲ್ಲಿಗೆ ಬರುತ್ತಿರುವ ವಲಸೆ ಕಾರ್ಮಿಕರಲ್ಲಿ ಈ ಕಾಯಿಲೆಗಳು ಗಣನೀಯವಾಗಿ ಪತ್ತೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿರುವ ಎಲ್ಲಾ ಕಟ್ಟಡ ನಿರ್ಮಾಣಕಾರರಿಗೆ (ಬಿಲ್ಡರ್ಸ್) ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರ ಪಟ್ಟಿಯನ್ನು ತಯಾರಿಸಿ ಜಿಲ್ಲಾ ಆರೋಗ್ಯ ಇಲಾಖೆಗೆ ನೀಡುವಂತೆ ತಿಳಿಸಲಾಗಿದೆ.
ಈ ಕಾರ್ಮಿಕರನ್ನು ನಿಯಮಿತವಾಗಿ ಪರೀಕ್ಷೆಗೊಳಪಡಿಸಿ, ಈ ಸಾಂಕ್ರಮಿಕ ಕಾಯಿಲೆಗಳ ನಿಯಂತ್ರಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಶನಿವಾರದಿಂದ 1 ತಿಂಗಳು ಮಲೇರಿಯಾ ನಿಯಂತ್ರಣ ಮಾಸಾಚರಣೆ ನಡೆಸಲಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಈ ಕಾಯಿಲೆಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಅದಕ್ಕಾಗಿ ತಂಡ ರಚಿಸಲಾಗಿದೆ ಎಂದು ಹೇಳಿದರು.
ಹೊರ ಜಿಲ್ಲೆ - ರಾಜ್ಯದ ಕಾರ್ಮಿಕರಿಂದ ಉಡುಪಿಗೆ ಕಳಂಕ: ಡಾ ಅಶೋಕ್
ಆರೋಗ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲಿರುವ ಮಲೇರಿಯಾ ರೋಗಿಗಳ ಸಂಖ್ಯೆ ನೋಡಿದರೆ ಗಾಬರಿಯಾಗುತ್ತದೆ. ಆದರೆ, ವಾಸ್ತವ ಹಾಗಿಲ್ಲ. 2012ರಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 2,217 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದವು. 2013ರಲ್ಲಿ ಈಗಾಗಲೇ 537 ಪ್ರಕರಣಗಳು ಪತ್ತೆಯಾಗಿವೆ. 2012ರಲ್ಲಿ ಪತ್ತೆಯಾದ 2,217 ಮಲೇರಿಯಾ ಪ್ರಕರಣಗಳಲ್ಲಿ 1,465 ಮಂದಿ ಹೊರಗಿವರು (628 ಮಂದಿ ಹೊರ ಜಿಲ್ಲೆಯವರು ಮತ್ತು 837 ಮಂದಿ ಹೊರ ರಾಜ್ಯದ ವಲಸೆ ಕಾರ್ಮಿಕರು ), ಕೇವಲ 752 ಮಂದಿ ಮಾತ್ರ ಉಡುಪಿ ಜಿಲ್ಲೆಯವರು. ಈ ವರ್ಷ ಪತ್ತೆಯಾದ 537 ಮಲೇರಿಯಾ ಪ್ರಕರಣದಲ್ಲಿಯೂ ಮಂದಿ ಹೊರಗಿನವರು (128 ಮಂದಿ ಹೊರ ಜಿಲ್ಲೆಯವರು, 162 ಮಂದಿ ಹೊರರಾಜ್ಯದವರು), ಕೇವಲ 153 ಮಂದಿ ಮಾತ್ರ ಉಡುಪಿ ಜಿಲ್ಲೆಯವರು. ಹೊರ ಜಿಲ್ಲೆ- ರಾಜ್ಯದಿಂದ ಬರುವ ವಲಸೆ ಕಾರ್ಮಿಕರನ್ನು ಸೂಕ್ತ ಪರೀಕ್ಷೆಗೊಳಪಡಿಸಿ ಈ ಕಾಯಿಲೆಯನ್ನು ನಿಯಂತ್ರಿಸಿ, ಉಡುಪಿ ಜಿಲ್ಲೆಗೆ ತಗಲಿರುವ ಸುಳ್ಳು ಕಳಂಕವನ್ನು ತೊಲಗಿಸುವುದಕ್ಕೆ ಪೂರ್ಣ ಪ್ರಯತ್ನಗಳು ನಡೆಯುತ್ತಿವೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅಶೋಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

