ಉಡುಪಿ

ಗ್ರಾ.ಪಂ.ನಲ್ಲಿ ರಾಷ್ಟ್ರಧ್ವಜ ಹಾರಾಟ ಕಡ್ಡಾಯ ಸುತ್ತೋಲೆ ಹಿಂಪಡೆಯಲು ಆಗ್ರಹ

Published On :

ಉಡುಪಿ: ಗ್ರಾ.ಪಂ. ಕಚೇರಿ ಮುಂದೆ ಕಡ್ಡಾಯವಾಗಿ ರಾಷ್ಟ್ರಧ್ವಜ ಹಾರಾಡಿಸುವಂತೆ ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಉಡುಪಿ ಗ್ರಾ.ಪಂ. ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟೆ ಗ್ರಾ.ಪಂ.ನಲ್ಲಿ ಧ್ವಜವನ್ನು ಪ್ರತಿದಿನ ಹಾರಾಡಿಸಲಾಗುತ್ತಿದೆ. ಆದರೆ ಸಿಬ್ಬಂದಿ ಅಚಾತುರ್ಯದಿಂದ ಭಾನುವಾರ ಸಂಜೆ ಕೆಳಗಿಳಿಸದೆ ಅಚಾತುರ್ಯವಾಗಿದೆ. ಇದನ್ನು ಪರಿಶೀಲಿಸಲು ಬಂದ ಗ್ರಾ.ಪಂ. ಅಧ್ಯಕ್ಷರ ಮೇಲೆ ಪೊಲೀಸ್ ವೃತ್ತ ನಿರೀಕ್ಷಕ ಹಲ್ಲೆ ನಡೆಸಿದ್ದಾರೆ. ಮುಂದೆಯೂ ಇಂತಹ ಘಟನೆಗಳಿಗೆ ಸರ್ಕಾರ ಕಡ್ಡಾಯ ಸುತ್ತೋಲೆ ಕಾರಣವಾಗಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ಸ್ವಾತಂತ್ರೋತ್ಸವದಂತಹ ಪವಿತ್ರ ದಿನಗಳಲ್ಲಿ ಮಾತ್ರ ಧ್ವಜಾರೋಹಣ ಮಾಡುವುದು ಸೂಕ್ತವಾಗಿದೆ. ಅಲ್ಲದೆ ಭಾನುವಾರ ಮತ್ತು ರಜಾ ದಿನಗಳಲ್ಲಿಯೂ ಧ್ವಜಾರೋಹಣ ನಡೆಸಿದರೆ ಕಚೇರಿಯು ಮುಚ್ಚಿರುವುದರಿಂದ ಕಿಡಿಗೇಡಿಗಳು ಕೂಡ ಧ್ವಜಕ್ಕೆ ಅವಮಾನ ಮಾಡುವ ಸಾಧ್ಯತೆಗಳೂ ಇವೆ. ಆದ್ದರಿಂದ ಈ ಸುತ್ತೋಲೆ ರದ್ದುಗೊಳಿಸಬೇಕು ಎಂದು ಒಕ್ಕೂಟದ ಪರವಾಗಿ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆಯುವುದಾಗಿ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಒಕ್ಕೂಟದ ಪದಾದಿಕಾರಿಗಳಾದ ಹರೀಶ್ ಕಿಣಿ, ವಿನಯ ಬಲ್ಲಾಳ್ ಇದ್ದರು.

ಚಾಲಕಗೆ ಹಲ್ಲೆ ಖಂಡಿಸಿ ಬಸ್ ಬಂದ್ ಕರೆ: ಮಿಶ್ರ ಪ್ರತಿಕ್ರಿಯೆ
ಉಡುಪಿ: ಉಡುಪಿ-ಭಟ್ಕಳ ಖಾಸಗಿ ಬಸ್ ಚಾಲಕನ ಮೇಲೆ ಭಟ್ಕಳದಲ್ಲಿ ಸೋಮವಾರ ನಡೆದ ಹಲ್ಲೆ ಖಂಡಿಸಿ ಮಂಗಳವಾರ ಖಾಸಗಿ ಬಸ್ ಚಾಲಕರು ಕರೆ ನೀಡಿದ ಕುಂದಾಪುರ ಬಸ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಬಸ್‌ಗಳು ಓಡಾಟ ಸ್ಥಗಿತಗೊಳಿಸಿರಲಿಲ್ಲ. ಉಡುಪಿಯಿಂದ ಹೋದ ಬಸ್‌ಗಳು ಕುಂದಾಪು ಪೇಟೆಗೆ ಹೋಗದೆ ಕೋಟೇಶ್ವರದಿಂದ  ಹಿಂದಕ್ಕೆ ಬರುತ್ತಿದ್ದವು. ಬಂದ್‌ನಿಂದ ಜನರಿಗೆ ತೊಂದರೆಯಾಗಬಾರದು ಎನ್ನುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕುಂದಾಪುರದಿಂದ ಉಡುಪಿಗೆ ಹೆಚ್ಚುವರಿ ಬಸ್ ನಿಯೋಜಿಸಿತ್ತು. ಸಂಜೆ ನಂತರ ಖಾಸಗಿ ಬಸ್ ಓಡಾಟ ಆರಂಭವಾಗಿತ್ತು.
ಸಿಐಟಿಯು ಖಂಡನೆ: ಹಲ್ಲೆಯನ್ನು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಖಂಡಿಸಿ, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದೆ. ಕೆಲವು ಶಕ್ತಿಗಳು ಅಮಾಯಕ ಚಾಲಕನ ಮೇಲೆ ನಡೆದ ಹಲ್ಲೆಯನ್ನು ಕೋಮು ಪ್ರಚೋದನೆಗೆ ಬಳಸುತ್ತಿರುವುದನ್ನು ಸಿಐಟಿಯು ಖಂಡಿಸಿದೆ. ಸುಳ್ಳು ಸುದ್ದಿಗಳನ್ನು ಜನರು ನಂಬಬಾರದೆಂದು ಸಿಐಟಿಯು ಪರವಾಗಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.