ಉಡುಪಿ

ಮುದ್ರಾಡಿ ಭಕ್ರೇಮಠ ಸುತ್ತು ಪೌಳಿಗೆ ಕಾಯಕಲ್ಪ

Published On :

ಹೆಬ್ರಿ: ಪರಿಸರದ ಕಬ್ಬಿನಾಲೆ, ಮುದ್ರಾಡಿ ಮತ್ತು ಶಿವಪುರ ಗ್ರಾಮಗಳ ಪುರಾತನ, ಕಾರಣಿಕದ ಆರಾಧ್ಯ ದೇವಿ ಮುದ್ರಾಡಿ ಭಕ್ರೇಮಠ ಭದ್ರಕಾಳಿ ದುರ್ಗಾಪರಮೇಶ್ವರೀ ಸನ್ನಿಧಿಯ ಸುತ್ತು ಪೌಳಿ ಕಾಮಗಾರಿಗೆ ಚಾಲನೆ ದೊರೆತಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ.
ಸುಮಾರು ರು. 75 ಲಕ್ಷ ವೆಚ್ಚದಲ್ಲಿ ದಾನಿಗಳ ಸಹಕಾರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಕಾಮಗಾರಿಗೆ ಕ್ಷೇತ್ರದ ಪರಮ ಭಕ್ತರಾಗಿರುವ ಕೇಂದ್ರ ಸರ್ಕಾರದ ಆರ್ಥಿಕ ಇಲಾಖಾ ಜಂಟಿ ಕಾರ್ಯದರ್ಶಿ ಹಾಗೂ ಈ ಹಿಂದೆ ಮಂಗಳೂರು ಜಿಲ್ಲಾಧಿಕಾರಿಯಾಗಿದ್ದ ಕೆ.ಪಿ.ಕೃಷ್ಣನ್ ಕಳೆದ ಜೂ.3ರಂದು ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಗರ್ಭಗುಡಿಯ ನಾಲ್ಕೂ ಬದಿಯ ಸುತ್ತು ಪೌಳಿಯ ಮೇಲ್ಛಾವಣಿ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು ಬರುವ ಮಾರ್ಚ್ ವೇಳೆಗೆ ಸಂಪೂರ್ಣ ಸಿದ್ಧವಾಗಲಿದೆ.
ಮಠದ ಭಕ್ತರ ನೆರವಿನಲ್ಲಿ ನಡೆಯುವ ಈ ಕಾಮಗಾರಿಗೆ ಊರ, ಪರವೂರ ದಾನಿಗಳಲ್ಲದೆ ದೂರದ ಬೆಂಗಳೂರು, ಮುಂಬೈ, ದೆಹಲಿಯ ಭಕ್ತರು ನೆರವು ನೀಡಲು ಮುಂದೆ ಬಂದಿದ್ದಾರೆ.
ಈ ಮೊದಲು 2007ರಲ್ಲಿ ಸಂಪನ್ನಗೊಂಡ ಮೊದಲ ಹಂತದ ಅಭಿವೃದ್ಧಿಯಲ್ಲಿ ದೇವಿಯ ಗರ್ಭಗುಡಿಯನ್ನು ರು. 60 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿತ್ತು.
ಇದೀಗ ಎರಡನೇ ಹಂತದ ಕಾಮಗಾರಿಯಲ್ಲಿ  ಮಠದ ಸುತ್ತುಪೌಳಿ ನವೀಕರಣಗೊಳ್ಳುತ್ತಿದೆ. ಮೂರನೇ ಹಂತದ ಕಾಮಗಾರಿಯಲ್ಲಿ ಪುಷ್ಕರಣಿ, ಅನ್ನಛತ್ರ ಮತ್ತು ಅಡುಗೆ ಶಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ.
  ಹೊಯ್ಸಳ ವಾಸ್ತು ಶೈಲಿಯೊಂದಿಗೆ ಪ್ರಾಚೀನ ಶೈಲಿಯನ್ನು ಉಳಿಸಿಕೊಂಡು ನವೀಕರಣ ಮಾಡುತ್ತಿರುವುದು ಇಲ್ಲಿಯ ವಿಶೇಷತೆ.
ಮಠದ ಆಡಳಿತಾಧಿಕಾರಿ ಡಾ. ವಾಸುದೇವ ಭಟ್ಟ, ಕಟ್ಟಡದ ಎಂಜಿನಿಯರ್ ಗಣೇಶ್, ಗುತ್ತಿಗೆದಾರ ರಾಘವೇಂದ್ರ ಭಟ್ ಮಠದ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದ್ದಾರೆ.
ಕಾರಣಿಕದ ಭದ್ರಕಾಳಿ ಕ್ಷೇತ್ರದಲ್ಲಿ ನಡೆಯುವ ಶರನ್ನವರಾತ್ರಿ ಮಹೋತ್ಸವ, ಕೆಂಡೋತ್ಸವಗಳಿಗೆ ಪರಿಸರದ ಗ್ರಾಮಗಳ ಭಕ್ತರಲ್ಲದೆ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.