ಉಡುಪಿ

ಕೊಳೆರೋಗ ಪರಿಹಾರ ತಕ್ಷಣ ವಿತರಿಸಿ: ಸೊರಕೆ

Published On :

ಉಡುಪಿ: ಅಡಕೆ ಕೊಳೆರೋಗ ನಷ್ಟ ಪರಿಹಾರ ಬಿಡುಗಡೆಯಾಗಿದ್ದು, ನಷ್ಟಕ್ಕೊಳಗಾಗಿರುವ ಅಡಕೆ ಬೆಳೆಗಾರರಿಗೆ ತಕ್ಷಣ ಈ ಪರಿಹಾರಧನವನ್ನು ವಿತರಿಸುವಂತೆ ರಾಜ್ಯ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
 ಅವರು ಸೋಮವಾರ ತಾ.ಪಂ. ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯನ್ನು ನಡೆಸಿದರು.
ಈಗಾಗಲೇ ಉಡುಪಿ ಜಿಲ್ಲೆಗೆ ಕೊಳೆರೋಗ ಪರಿಹಾರ ರು. 3.25 ಕೋಟಿ ಬಿಡುಗಡೆಯಾಗಿದೆ. ಪ್ರತಿ ಹೆಕ್ಟೇರಿಗೆ 12 ಸಾವಿರ ಪರಿಹಾರ ನೀಡಲಾಗುತ್ತಿದೆ. ಕಂದಾಯ - ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ, ಒಂದು ವಾರದೊಳಗೆ ಪರಿಹಾರ ಚೆಕ್ ರೈತರ ಕೈಸೇರಬೇಕು ಎಂದು ಸಚಿವರು ಅಧಿಕಾರಿಗಳಿಗೆ ಆದೇಶಿಸಿದರು.
ಗ್ರಾಮ ಮಟ್ಟಕ್ಕೆ ತೆರಳಿ: ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ಯಬೇಕು, ಆದ್ದರಿಂದ ಅಧಿಕಾರಿಗಳು ಗ್ರಾಮ ಮಟ್ಟಕ್ಕೆ ತೆರಳಿ ಜನರ ಅಹವಾಲುಗಳಿಗೆ ಸ್ಪಂದಿಸಬೇಕು. ಗ್ರಾಮ ಸಭೆಯಲ್ಲಿ ಅಧಿಕಾರಿಗಳು ತಪ್ಪದೇ ಭಾಗವಹಿಸಬೇಕು, ಆಗ ಮಾತ್ರ ಜನರಿಗೆ ವ್ಯವಸ್ಥೆಯ ಮೇಲೆ ಭರವಸೆ ಮೂಡಲಿದೆ ಎಂದರು.
ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳ ವಿತರಣೆ ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿದೆ. ಇದರಿಂದ ಜನರಲ್ಲಿಯೂ ಭರವಸೆ ಮೂಡಿದೆ ಎಂದು ಸಚಿವರು ಹೇಳಿದರು.  ಹಾಸ್ಟೆಲ್‌ಗಳಲ್ಲಿ ಸಕಾಲದಲ್ಲಿ ಅಡುಗೆ ಅನಿಲ ಸರಬರಾಜು ಮತ್ತು ಅಲ್ಲಿನ ವಿದ್ಯಾರ್ಥಿಗಳಿಗೆ ಕುಚ್ಚಲಕ್ಕಿ ಅನ್ನ ಪೂರೈಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು, ತೀವ್ರ ಮಳೆಯಿಂದ ಹೊಂಡಗುಂಡಿಯಾದ ರಸ್ತೆಗಳ ದುರಸ್ತಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಜನಸ್ಪಂದನ ಸಭೆ ಮತ್ತು ಪಿಂಚಣಿ ಅದಾಲತ್ ನಿರಂತರವಾಗಿ ನಡೆಸಿಕೊಂಡು ಬರಬೇಕು ಎಂದವರು ಅಧಿಕಾರಿಗಳಿಗೆ ಸೂಚಿಸಿದರು. ಕಟಪಾಡಿ - ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಪದೇ ಪದೇ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿದ್ದು, ಈ ಬಗ್ಗೆ ವರದಿ ನೀಡುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಸಚಿವರು ಆದೇಶಿಸಿದರು.   
 ಆರೋಗ್ಯ ಇಲಾಖೆಯಿಂದ ಕಾಪುವಿನಲ್ಲಿ ಟ್ರಾಮಾ ಸೆಂಟರ್ ಹಾಗೂ ಶಿರ್ವ ದಲ್ಲಿ ಶವಾಗಾರ ಸ್ಥಾಪನೆಯಾಗಲಿದೆ ಎಂದು ಸಚಿವರು ಪ್ರಕಟಿಸಿದರು. ಸಭೆಯಲ್ಲಿ ತಾಪಂ ಅಧ್ಯಕ್ಷೆ ಗೌರಿ ಪೂಜಾರಿ, ಉಪಾಧ್ಯಕ್ಷ ರಾಮ ಕುಲಾಲ್, ತಹಸೀಲ್ದಾರ್ ಗುರುಪ್ರಸಾದ್, ತಾಪಂ ಕಾ.ನಿ. ಅಧಿಕಾರಿ ಮಂಜುನಾಥ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ಯಾಸ್ ಸಬ್ಸಿಡಿ ಖಾತ್ರಿ: ಜಯಪ್ರಕಾಶ್ ಹೆಗ್ಡೆ
ಗೃಹ ಬಳಕೆಯ ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿ ನೇರವಾಗಿ ಗ್ರಾಹಕ ಖಾತೆಗೆ ವರ್ಗಾವಣೆ ಆಗುತ್ತದೆ, ಇದರಲ್ಲಿ ಯಾವುದೇ ಆತಂಕ ಬೇಡ. ಆದರೆ ಖಾತೆಗೆ ವರ್ಗಾವಣೆ ಆಗುವ ಸಬ್ಸಿಡಿ ಮೊತ್ತವು ಅಂತಾರಾಷ್ಟ್ರೀಯ ತೈಲದ ದರದ ಪ್ರಕಾರ ಪ್ರತಿ ತಿಂಗಳು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಸಂಸದ ಜಯಪ್ರಕಾಶ ಹೆಗ್ಡೆ ತಿಳಿಸಿದ್ದಾರೆ. ಗೃಹ ಬಳಕೆಯ ಅನಿಲ ಜಾಡಿಗೆ ನೀಡುವ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಯೋಜನೆಯಡಿ 435 ರು. ಗಳನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಮುಂಗಡವಾಗಿ ಜಮಾ ಮಾಡಲಾಗುವುದು. ಹೊಸ ಅನಿಲ ಜಾಡಿಯನ್ನು ಪಡೆಯುವಾಗ ಜನರು ಉಡುಪಿಯಲ್ಲಿ ರು. 997ಗಳನ್ನು ಪಾವತಿಸಬೇಕಾಗುತ್ತದೆ. ಅವರಿಗೆ ಹಣ ಪಾವತಿಸಿದ ಒಂದು ವಾರದೊಳಗೆ ಸಬ್ಸಿಡಿ ಹಣ ರು. 571.53 ಅವರು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಅನಿಲ ಜಾಡಿಯ ಮೇಲೆ ಒಂದು ಶೇಕಡಾ ತೆರಿಗೆಯನ್ನು ವಿಧಿಸಲಾಗುವುದು. ಈ ಬಗ್ಗೆ ತಾನು ರಾಜ್ಯದ ವಾಣಿಜ್ಯ ತೆರಿಗೆ ಅಧಿಕಾರಿಗಳು ಹಾಗೂ ಇಂಡಿಯನ್  ಆಯಿಲ್ ಕಾರ್ಪೋರೇಷನ್ ಲಿವಿಟೆಡ್ ಅಧಿಕಾರಿಗಳಾದ ಎ.ಎಸ್. ಜೋಶಿ ಅವರಲ್ಲಿ ಮಾತುಕತೆ ನಡೆಸಿರುವುದಾಗಿ ಸಂಸದರು ತಮ್ಮ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.