ಉಡುಪಿ

ಶಿರಾಡಿ ಘಾಟ್; ಸದ್ಯಕ್ಕಿಲ್ಲ ಮುಕ್ತಿ

Published On :

ಬೆಂಗಳೂರು: ಹದಗೆಟ್ಟಿರುವ ಶಿರಾಡಿ ಘಾಟ್ ರಸ್ತೆಗೆ ಸದ್ಯಕ್ಕೆ ಮುಕ್ತಿ ಸಿಗುವ ಲಕ್ಷಣ ಕಾಣಿಸುತ್ತಿಲ್ಲ.
ಶಿರಾಡಿ ಘಾಟ್ ರಸ್ತೆ ಸಮಸ್ಯೆಗೆ ದೀರ್ಘಕಾಲಿಕ ಮತ್ತು ಶಾಶ್ವತ ಪರಿಹಾರ ರೂಪಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಸದ್ಯಕ್ಕೆ ಆ ರಸ್ತೆಯನ್ನು ವಾಹನಗಳ ಓಡಾಟಕ್ಕೆ ಸಿದ್ಧಪಡಿಸುವ ತಾತ್ಕಾಲಿಕ ವ್ಯವಸ್ಥೆ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಇದು ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ರಾಜ್ಯ ಸರ್ಕಾರವೂ ಯಾವುದೇ ಕ್ರಮ ಕೈಗೊಳ್ಳುವ ಮನಸ್ಸು ಮಾಡಿಲ್ಲ.
ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ ಕುರಿತಂತೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ರಸ್ತೆ ಅಭಿವೃದ್ಧಿ ಕುರಿತಂತೆ ದೀರ್ಘಕಾಲಿಕ ಮತ್ತು ಶಾಶ್ವತ ಪರಿಹಾರದ ಬಗ್ಗೆ ವಿವರಿಸಿದರೇ ಹೊರತು ತಾತ್ಕಾಲಿಕ ಪರಿಹಾರದ ಬಗ್ಗೆ ಪ್ರತಿಕ್ರಿಯಿಸಲೇ ಇಲ್ಲ.
ಶಿರಾಡಿ ಘಾಟ್ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಓಡಾಡಲು ಸಾಧ್ಯವಾಗದ ಸ್ಥಿತಿ ಇದೆ. ರಸ್ತೆ ಅಭಿವೃದ್ಧಿ ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ, ನಾವು ಸಮಸ್ಯೆಗೆ ದೀರ್ಘಕಾಲಿಕ ಮತ್ತು ಶಾಶ್ವತ ಪರಿಹಾರ ಕಲ್ಪಿಸುತ್ತೇವೆ.
ಶಿರಾಡಿ ಘಾಟ್ನಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತದೆ. ಜತೆಗೆ ಹಾಲಿ ರಸ್ತೆಯನ್ನು ಹೊಸ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸುತ್ತೇವೆ ಎಂದರು.
ಜಪಾನ್ಗೆ ರಾಜ್ಯದ ಅಧಿಕಾರಿಗಳು: ಶಿರಾಡಿ ಘಾಟ್ನಲ್ಲಿ ಸುರಂಗ ಮೂಲಕ ರಸ್ತೆ ನಿರ್ಮಿಸಲು ತಾಂತ್ರಿಕ ನೆರವು ನೀಡಲು ಜಪಾನ್ ಮುಂದೆ ಬಂದಿದೆ. ರಸ್ತೆ ನಿರ್ಮಾಣಕ್ಕೆ ಅಗತ್ಯ ಹಣಕಾಸು ನೆರವು ನೀಡಲೂ ಅದು ಸಿದ್ಧವಿದೆ.
ಟೆಂಡರ್ ಮೂಲಕ ಈ ಪ್ರಕ್ರಿಯೆ ಆರಂಭಿಸಬೇಕಾಗಿರುವುದರಿಂದ ಹಣಕಾಸು ನೆರವು ಪಡೆಯುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆದರೆ, ತಾಂತ್ರಿಕ ನೆರವು ಪಡೆಯುವ ನಿಟ್ಟಿನಲ್ಲಿ ರಾಜ್ಯದ ಮೂವರು ಅಧಿಕಾರಿಗಳನ್ನು ಜಪಾನ್ಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.
ಪ್ರಸ್ತುತ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಕೈಗೊಂಡರೆ ಯೋಜನೆಗೆ 3 ಸಾವಿರದಿಂದ 3,500 ಕೋಟಿ ವೆಚ್ಚವಾಗುತ್ತದೆ. ವಿಳಂಬವಾದರೆ ಇದು 4 ಸಾವಿರ ಕೋಟಿ ತಲುಪಲಿದೆ ಎಂದು ಹೇಳಿದ ಅವರು, ಜಪಾನ್ ಜತೆಗೆ ಜರ್ಮನಿ ತಂತ್ರಜ್ಞಾನದ ನೆರವು ಪಡೆದು ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.
ದೀರ್ಘಕಾಲಿಕ ಪರಿಹಾರ: ಶಿರಾಡಿ ಘಾಟ್ನಲ್ಲಿ ಹಾಲಿ ಇರುವ ರಸ್ತೆಯನ್ನು ಪ್ಲಾಸ್ಟಿಸೈಸ್ ಕಾಂಕ್ರೀಟ್ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಯೊಂದು ಮುಂದೆ ಬಂದಿದೆ. 20 ಕಿ.ಮೀ. ರಸ್ತೆಯನ್ನು ತನ್ನದೇ ಹಣದಲ್ಲಿ ಅಭಿವೃದ್ಧಿಪಡಿಸಿಕೊಡುವುದಾಗಿ ಹೇಳಿದೆ.
 ಪ್ರಸ್ತುತ ಈಶಾನ್ಯ ಭಾರತದ ಕೆಲವೆಡೆ ಮತ್ತು ಯೂರೋಪ್ನಲ್ಲಿ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಇದರ ಜತೆಗೆ ಕಾಮಗಾರಿ ಮುಗಿದ ಎಂಟು ಗಂಟೆಗಳಲ್ಲಿ ರಸ್ತೆಯಲ್ಲಿ ವಾಹನ ಓಡಾಡುವಂತಹ ಕಾಂಕ್ರಿಟ್ ರಸ್ತೆ ನಿರ್ಮಿಸಿಕೊಡಲು ಮತ್ತೊಂದು ಕಂಪನಿ ಮುಂದಾಗಿದೆ ಎಂದು ತಿಳಿಸಿದರು.
ಈ ಎರಡೂ ಕಂಪನಿಗಳು ಕೆಲವೆಡೆ ಪ್ರಾಯೋಗಿಕವಾಗಿ ಹೊಸ ತಂತ್ರಜ್ಞಾನದೊಂದಿಗೆ ರಸ್ತೆಗಳನ್ನು ನಿರ್ಮಿಸಿವೆ. ಈ ರಸ್ತೆಗಳನ್ನು ಪರಿಶೀಲಿಸಿದ ಬಳಿಕ ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿಗೆ ಅಗತ್ಯ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.