ಉಡುಪಿ

ಸಾಫ್ಟ್ವೇರ್, ಯಕ್ಷಗಾನ ದಿಗ್ಗಜರಿಗೆ ರಾಜ್ಯ ಪ್ರಶಸ್ತಿ

Published On :

ಉಡುಪಿ: ಈ ಬಾರಿಯ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಇಬ್ಬರು ಸಾಧಕರು ಪಾತ್ರರಾಗಿದ್ದಾರೆ ಒಬ್ಬರು ಸಾಫ್ವೇರ್ ತಂತ್ರಜ್ಞ ಪ್ರೊ.ಕೆ.ಪಿ.ರಾವ್ ಮತ್ತು ಯಕ್ಷಗಾನ ವಿದ್ವಾಂಸ ಡಾ.ಕೆ.ಎಂ. ರಾಘವ ನಂಬಿಯಾರ್.
ಇವರಿಬ್ಬರೂ ಮಣಿಪಾಲದಲ್ಲಿ ವೃತ್ತಿ ನಿರತರಾಗಿದ್ದವರು, ಜಿಲ್ಲೆಯ ಸಾಂಸ್ಕೃತಿಕ ಕೇಂದ್ರಬಿಂದುವಾಗಿರುವ ಎಂ.ಜಿ.ಎಂ. ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ - ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವವರು. ಇಬ್ಬರೂ ಅವರವರ ಕ್ಷೇತ್ರದಲ್ಲಿ ವಿದ್ವಾಂಸರು ಮತ್ತು ಇತರ ಕ್ಷೇತ್ರಗಳ ಸಮಾನಾಸಕ್ತರು.
ತಡವಾದ್ರೂ ಖುಷಿಯಾಗಿದೆ-ರಾವ್: ಪ್ರಶಸ್ತಿಗೆ ಯಾವುದೇ ವಶೀಲಿ ಬಾಜಿ ಮಾಡಲಿಲ್ಲ. ತಾನು ಸಾಫ್ಟ್ವೇರ್ ಅಭಿವೃದ್ಧಿ ಮಾಡಿ ಸುಮಾರು ವರ್ಷಗಳೇ ಆಗಿವೆ. ಆಗ ಗುರುತಿಸಿದ್ದರೆ ಚೆನ್ನಾಗಿತ್ತು.
ಈಗಿನವರು ಕೆ.ಪಿ. ರಾವ್ ಏನು ಮಾಡಿದ್ದಾರೆ? ಎಂದು ಕೇಳುವ ಪರಿಸ್ಥಿತಿ ಇದೆ. ಆದರೂ ಈಗ ತಡವಾಗಿಯಾದರೂ ಸರ್ಕಾರ ಅಧಿಕೃತವಾಗಿ ತನ್ನ ಸಾಧನೆ ಗುರುತಿಸಿದೆ ಎಂದು ಪ್ರೊ.ರಾವ್ ಸಂತಸ ವ್ಯಕ್ತಪಡಿಸಿದ್ದಾರೆ.
ರಾವ್ ಕುರಿತು...: 1940 ಫೆ. 29ರಂದು ಜನಿಸಿದ ಕಿನ್ನಿಕಂಬಳ ಪದ್ಮನಾಭ ರಾವ್, 80 ದಶಕದಲ್ಲಿ ಮಾಡಿರುವ ಮಹತ್ವದ ಸಾಧನೆಗೆ ಈಗ, ಸಾಕಷ್ಟು ತಡವಾಗಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಆಗಿನ್ನೂ ಕಂಪ್ಯೂಟರ್ ಯುಗ ಆರಂಭವಾಗುತ್ತಿತ್ತು. ಇಂಗ್ಲಿಷ್ ಬಲ್ಲವರಿಗೆ ಮಾತ್ರ ಕಂಪ್ಯೂಟರ್ ಎಂಬ ಭಾವನೆ ಎಲ್ಲರಲ್ಲೂ ಇತ್ತು. ಆದರೆ ಕಂಪ್ಯೂಟರಿಗೂ ಕನ್ನಡ ಭಾಷೆ ಒಗ್ಗಿಸಿಕೊಳ್ಳಬಹುದು ಎಂಬುದನ್ನು ರಾವ್ ತೋರಿಸಿಕೊಟ್ಟರು.
ಅವರು ವಿನ್ಯಾಸಗೊಳಿಸಿದ ಇಂಗ್ಲಿಷ್ ಕೀಬೋರ್ಡ್ಗೆ ಪೂರಕವಾದ ಕನ್ನಡ ಸಾಫ್ಟ್ವೇರ್ ಇಂದಿಗೂ ಚಾಲ್ತಿಯಲ್ಲಿದೆ. ಅವರ ಈ ಸಾಧನೆ ಕನ್ನಡ ಭಾಷೆ, ಸಾಹಿತ್ಯ ಮತ್ತು ವ್ಯವಹಾರಗಳಲ್ಲಿ ಕ್ರಾಂತಿಯನ್ನೇ ಮಾಡಿತು. ಅವರ ಈ ಸಾಧನೆಗೆ ಈಗಾಗಲೇ ನಾಡೋಜ ಪ್ರಶಸ್ತಿ ದಕ್ಕಿದೆ.
ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್, ಟಾಟಾ ಪ್ರೆಸ್ ್ಗಳಲ್ಲಿ ಉದ್ಯೋಗ ನಡೆಸಿದ ರಾವ್, ಮಣಿಪಾಲ ವಿ.ವಿ.ಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ಅರ್ಜಿ ಹಾಕದೇ ಸಿಕ್ಕಿದೆ: ನಂಬಿಯಾರ್
ಪ್ರಶಸ್ತಿಗೆ ಅರ್ಜಿ ಹಾಕದೆ, ಯಾರಿಂದಲೂ ಶಿಫಾರಸು ಮಾಡಿಸಿಕೊಳ್ಳದೆ ಈ ಪ್ರಶಸ್ತಿ ತಾನಾಗಿಯೇ ಬಂದಿದೆ. ಇದು ನಿಜವಾದ ಗೌರವ ಎಂದು ಡಾ. ನಂಬಿಯಾರ್ ಪ್ರತಿಕ್ರಿಯಿಸಿದ್ದಾರೆ.
ಯಕ್ಷಗಾನ ರಂಗದಲ್ಲಿ ಅನೇಕ ತಲೆಮಾರುಗಳಿಂದ ದುಡಿದ ಕೊಡುಗೆ ನೀಡಿದ ಹಿರಿಯರಿಗೆ ಈ ಪ್ರಶಸ್ತಿ ಸಲ್ಲುತ್ತದೆ ಎಂದಿದ್ದಾರೆ.
ನಂಬಿಯಾರ್ ಬದುಕು...: 1946ರ ಡಿ.7ರಂದು ಜನಿಸಿದ ಡಾ. ಕೆ. ಎಂ. ರಾಘವ ನಂಬಿಯಾರ್ ಸುದೀರ್ಘಕಾಲ 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದವರು. ಯಕ್ಷಗಾನ, ಸಾಹಿತ್ಯ, ಅಧ್ಯಯನ, ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಅಪರೂಪದ ಪತ್ರಕರ್ತ. 'ಕರಾವಳಿಯ ಯಕ್ಷಗಾನ ಹಿಮ್ಮೇಳ-ಒಂದು ಅಧ್ಯಯನ' ಸಂಶೋಧನಾ ಪ್ರಬಂಧಕ್ಕೆ ಅವರಿಗೆ ಮಂಗಳೂರು ವಿ.ವಿ. ಡಾಕ್ಟರೇಟ್ ಪದವಿ ನೀಡಿದೆ.
ಯಕ್ಷಗಾನ ರಂಗದ ಸಮಗ್ರ ಅಧ್ಯಯನದ ಜೊತೆಗೆ ಅರ್ಥಗಾರಿಕೆ, ವೇಷಗಾರಿಕೆ, ಹಿಮ್ಮೇಳ, ಹಾಡುಗಾರಿಕೆಗಳನ್ನು ಕಲಿತು ಪ್ರದರ್ಶಿಸಿದವರು ನಂಬಿಯಾರ್.
ಉಡುಪಿಯಲ್ಲಿ 'ಯಕ್ಷಕೌಮುದಿ' ಸಂಘಟನೆ ಕಟ್ಟಿ ತೆಂಕು-ಬಡಗು ಯಕ್ಷಗಾನ, ದೀವಟಿಕೆ ಯಕ್ಷಗಾನ ಪ್ರಯೋಗಗಳನ್ನು ಮಾಡಿದವರು.
ಅವರು ರಚಿಸಿದ ಬಣ್ಣ ಚಕ್ರೇಶ್ವರ ಪರೀಕ್ಷಿತ, ಉತ್ತಮ ಸೌದಾಮಿನಿ, ರಘುವಂಶ, ವಜ್ರಧರ ವಿಲಾಸ ಇತ್ಯಾದಿ ಪ್ರಸಂಗಗಳು ಕೂಡ ಪ್ರಸಿದ್ಧವಾಗಿವೆ.
ಅವರು ಬರೆದ ದೀವಟಿಗೆ, ಚಿನ್ನದ ತಾಳ, ಹಿಮ್ಮೇಳ, ಮುಂದಲೆ, ಆಶಿವೈಖರಿ, ಮದ್ದಳೆಯ ಮಾಯಾಲೋಕ ಯಕ್ಷಗಾನ ಕ್ಷೇತ್ರದ ಬಗ್ಗೆ ಅವರಿಗಿರುವ ಪ್ರೀತಿಯನ್ನು ಸಾರುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.