ಉಡುಪಿ

ಅಂಡರ್ ಪಾಸ್ ಬೇಡ, ಫ್ಲೈ ಓವರ್ ಬೇಕು

Published On :

ಬ್ರಹ್ಮಾವರ: ಬ್ರಹ್ಮಾವರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿಯಲ್ಲಿ ಮೇಲ್ಸೇತುವೆ (ಫ್ಲೈಓವರ್) ನಿರ್ಮಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಸಮಿತಿಯು ಸೆ.19ರಂದು ಬ್ರಹ್ಮಾವರ ಸಂಪೂರ್ಣ ಬಂದ್ ಮತ್ತು ಸೆ.27ರಂದು ಜನಪ್ರತಿನಿಧಿಗಳ 'ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ' ಸಾರ್ವಜನಿಕರ ಮುಖಾಮುಖಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಸಮಿತಿ ಸಂಚಾಲಕ ಬಿ. ಗೋವಿಂದರಾಜ ಹೆಗ್ಡೆ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದರು.
2010ರಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಆರಂಭವಾದಾಗ ಬ್ರಹ್ಮಾವರ ಬಸ್ಸು ನಿಲ್ದಾಣದ ಸ್ವಲ್ಪ ಮುಂದೆ ಅಂಡರ್ ಪಾಸ್ ಯೋಜನೆ ಹಾಕಿಕೊಳ್ಳಲಾಗಿತ್ತು. ಇದರ ಕಾಮಗಾರಿ ಆರಂಭವಾದಾಗ ಸ್ಥಳೀಯರು ಇದನ್ನು ವಿರೋಧಿಸಿ, ಬ್ರಹ್ಮಾವರ ಬಸ್ಸು ನಿಲ್ದಾಣದಿಂದ ಬೈಪಾಸ್ವರೆಗೆ ಫ್ಲೆ ೈ ಓವರ್ ರಚಿಸುವಂತೆ ಆಗಿನ ಭೂಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಆದರೆ ಫ್ಲೈಓವರ್ ಬದಲು ರಾ.ಹೆ. ಪ್ರಾಧಿಕಾರದವರು ಪ್ರಸ್ತಾವಿತ ಅಂಡರ್ ಪಾಸನ್ನು ಸ್ಥಳಾಂತರಿಸಿದರು. ಇದರಿಂದ ಬ್ರಹ್ಮಾವರದಿಂದ ಕುಂಜಾಲು- ಪೇತ್ರಿಗೆ, ಉಡುಪಿಯಿಂದ ಬಾರ್ಕೂರು - ಮಂದಾರ್ತಿಗೆ, ಕುಂದಾಪುರದಿಂದ ಬ್ರಹ್ಮಾವರ ಬಸ್ಸು ನಿಲ್ದಾಣಕ್ಕೆ ಹೋಗುವ ಬಗ್ಗೆ ಭಾರೀ ಗೊಂದಲ ಉಂಟಾಗಿದೆ. ಈ ರಸ್ತೆಗಳ ಮೂಲಕ ಹೆದ್ದಾರಿ ಪ್ರವೇಶ ಭಾರಿ ಅಪಾಯಕಾರಿಯಾಗಿ ಪರಿಣಮಿಸಲಿದೆ. ಒಟ್ಟಾರೆ ಯಾವುದೇ ಮುಂದಾಲೋಚನೆ ಇಲ್ಲದೇ, ಸಾರ್ವಜನಿಕ ಜೀವನದಲ್ಲಿ ಚೆಲ್ಲಾಟವಾಡುವ ರೀತಿಯಲ್ಲಿ ಅಂಡರ್ ಪಾಸ್ ಕಾಮಗಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ನೂರಾರು ಬಾರಿ ಮಂತ್ರಿ, ಸಂಸದರು, ಶಾಸಕರರ, ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಲಾಗಿದೆ. ಪ್ರಯೋಜನವಾಗಿಲ್ಲ. ಈಗ ಇದು ಬ್ರಹ್ಮಾವರದ ಜನರ ಜೀವನದ ಪ್ರಶ್ನೆಯಾಗಿದೆ. ಆದ್ದರಿಂದ ಅಂಡರ್ ಪಾಸ್ ರಚನೆ ಸ್ಥಳೀಯ ಜನರ, ಸಂಘ ಸಂಸ್ಥೆಗಳ ತೀವ್ರ ವಿರೋಧ ಇದೆ ಎಂದವರು ಹೇಳಿದರು.
ಬ್ರಹ್ಮಾವರದಲ್ಲಿ ಅಂಡರ್ ಪಾಸ್ ಬದಲು ಓವರ್ ಫ್ಲೈ ರಚಿಸುವ ಬಗ್ಗೆ ಸೆ.17ರೊಳಗೆ ಆದೇಶ ಹೊರಡಿಸಬೇಕು, ಇಲ್ಲದಿದ್ದಲ್ಲಿ 19ರಂದು ಬ್ರಹ್ಮಾವರ ವ್ಯಾಪ್ತಿಯ ವಾರಂಬಳ್ಳಿ, ಹಂದಾಡಿ, ಚಾಂತಾರು, ಹಾರಾಡಿ ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪಾರ ವ್ಯವಹಾರಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ, ರಾಹೆ ತಡೆ ನಡೆಸಿ ಪ್ರತಿಭಟಿಸಲಾಗುವುದು, 27ರಂದು ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಂದ್ಗೆ ಬೆಂಬಲ ನೀಡುತ್ತಿರುವ ಹೇರೂರು ನಾಗರಿಕ ಸಮಿತಿ ಸದಾಶಿವ ಶೆಟ್ಟಿ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಚಂದ್ರಶೇಖರ ಶೆಟ್ಟಿ, ಗೂಡಂಗಡಿ ಮಾಲಕರ ಸಂಘದ ರತ್ನಾಕರ ಶೆಟ್ಟಿ, ರಿಕ್ಷಾ ಚಾಲಕರ ಸಂಘದ ರಾಜು ಪೂಜಾರಿ, ಗೂಡ್ಸ್ ರಿಕ್ಷಾ ಚಾಲಕರ ಸಂಘದ ಮಂಜುನಾಥ ಪೂಜಾರಿ, ಟೆಂಪೋ ಚಾಲಕರ ಸಂಘದ ಸಂತೋಷ್ ಬರ್ತಿ, ಟ್ಯಾಕ್ಸಿ ಚಾಲಕರ ಸಂಘದ ಗೋಪಾಲ ಶೆಟ್ಟಿ, ಸಿಐಟಿಯುನ ವಿಠಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.