ತೃತೀಯ ರಂಗ ಸಂಘಟನೆಗೆ ದೇವೇಗೌಡ ನಿರಾಸಕ್ತಿ
ಉಡುಪಿ: ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗವನ್ನು ಪುನಃ ಸಂಘಟಿಸುವ ವಿಷಯದಲ್ಲಿ ದೇವೇಗೌಡರು ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಘಟಿಸುವ ಕಾರ್ಯವನ್ನು ಉಡುಪಿಯಲ್ಲಿ ಆರಂಭಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತೃತೀಯ ರಂಗವನ್ನು ಪುನಃ ಸಂಘಟಿಸುವಲ್ಲಿ ನಮ್ಮ ಇತಿಮಿತಿಗಳ ಅರಿವು ನನಗಿದೆ. ರಾಜ್ಯದಲ್ಲಿ ಜೆಡಿಎಸ್ ಉಳಿಸುವ ಹೊಣೆಗಾರಿಕೆ ನನ್ನ ಮೇಲಿದೆ. ಆದ್ದರಿಂದ ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದೇನೆ ಎಂದು ಹೇಳಿದರು.
ರಾಜ್ಯ ಮಟ್ಟದ ಪಕ್ಷಗಳೇ ನಿರ್ಣಾಯಕ: ಕೇಂದ್ರದಲ್ಲಿ ಬಿಜೆಪಿಯಾಗಲೀ, ಕಾಂಗ್ರೆಸ್ ಪಕ್ಷವಾಗಲೀ ಅಧಿಕಾರಕ್ಕೆ ಬರುವುದು ಸುಲಭವಿಲ್ಲ. ಯಾಕೆಂದರೆ, ಎಲ್ಲ ರಾಜ್ಯಗಳಲ್ಲಿ ಈ ಪಕ್ಷಗಳು ಅಧಿಕಾರದಲ್ಲಿಲ್ಲ. ಕೆಲವು ರಾಜ್ಯಗಳಲ್ಲಿ ರಾಜ್ಯ ಮಟ್ಟದ ಪಕ್ಷಗಳು ಅಧಿಕಾರದಲ್ಲಿವೆ. ಈ ಪಕ್ಷಗಳಿಗೆ ಅಲ್ಲಿನ ಮತದಾರರು ಆಶೀರ್ವದಿಸಿದ್ದಾರೆ, ಆದ್ದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಮಟ್ಟದ ಈ ಪಕ್ಷಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ದೇವೇಗೌಡ ಹೇಳಿದರು.
ಸಾಮೂಹಿಕ ನಾಯಕತ್ವದಲ್ಲಿ ಜೆಡಿಎಸ್ ಸಂಘಟನೆ: ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಾಗಿಟ್ಟುಕೊಂಡು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸಾಮೂಹಿಕ ನಾಯಕತ್ವದಲ್ಲಿ ಸಂಘಟಿಸಲಾಗುತ್ತದೆ. 4 ಹಂತದಲ್ಲಿ ಈ ಕಾರ್ಯ ನಡೆಯಲಿದ್ದು, ಮೊದಲ ಹಂತವನ್ನು ಉಡುಪಿಯಲ್ಲಿ ಆರಂಭಿಸಲಾಗಿದ್ದು, ದ.ಕ, ಉ.ಕ., ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸಲಾಗುವುದು. 2ನೇ ಹಂತದಲ್ಲಿ ಮುಂಬೈ ಕರ್ನಾಟಕ, 3ನೇ ಹಂತದಲ್ಲಿ ಹೈದರಾಬಾದ್ ಕರ್ನಾಟಕ ಮತ್ತು ಕೊನೆಯ ಹಂತದಲ್ಲಿ ಹಳೆ ಮೈಸೂರು ಪ್ರದೇಶದಲ್ಲಿ ಪಕ್ಷ ಸಂಘಟನೆ ನಡೆಸಲಾಗುವುದು ಎಂದವರು ಹೇಳಿದರು.
ನಾನು ಸಾಮಾನ್ಯ ಕಾರ್ಯಕರ್ತ: ಪಕ್ಷದಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಮಾತ್ರ. ಆರೋಗ್ಯ, ಆಯಸ್ಸು ಇರುವರೆಗೆ ಪಕ್ಷಕ್ಕಾಗಿ ದುಡಿಯುತ್ತೇನೆ, ನನ್ನೊಬ್ಬನ ನಾಯಕತ್ವದಲ್ಲಿ ಪಕ್ಷದ ಸಂಘಟನೆ ನಡೆಯುತ್ತದೆ ಎಂದು ನಾನು ಭಾವಿಸಿಲ್ಲ. ಪಕ್ಷದ ಎಲ್ಲ ನಾಯಕರು ಈ ಸಂಘಟನಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಾಧ್ಯಕ್ಷ ಕೃಷ್ಣಪ್ಪ, ಸಿಂಧ್ಯಾ ಮುಂತಾದ ನಾಯಕರು ಸಂಘಟನಾ ಕಾರ್ಯಕ್ರಮಗಳಿಗೆ ಬರುತ್ತಾರೆ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದು ದೇವೇಗೌಡ ಹೇಳಿದರು.
ಯಾರೂ ಪಕ್ಷ ಬಿಡುತ್ತಿಲ್ಲ: ಕೃಷ್ಣಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದರಿಂದ ಪಕ್ಷದಲ್ಲಿ ಕೆಲವು ನಾಯಕರಿಗೆ ಅಸಮಾಧಾನವಾಗಿದೆ, ಪಕ್ಷ ಬಿಡುತ್ತಾರೆ ಎನ್ನುವುದು ಕೇವಲ ಊಹಾಪೋಹ. ಯಾರೂ ಪಕ್ಷ ಬಿಡುತ್ತಿಲ್ಲ ಎಂದು ಗೌಡರು ಒತ್ತಿ ಹೇಳಿದರು.
ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು, ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆಯ ಬಗ್ಗೆ ಕೂತು ವಿಚಾರ ವಿಮರ್ಶೆ ಮಾಡಲಾಗುವುದು ಎಂದರು.
'ನರೇಂದ್ರ ಮೋದಿ ಪಿಎಂ ಮಾಡುವ ಅಧಿಕಾರ ಜನರ ಕೈಯಲ್ಲಿ, ಬಿಜೆಪಿಗಿಲ್ಲ'
ಉಡುಪಿ: ನರೇಂದ್ರ ಮೋದಿ ಅವರನ್ನು ತಮ್ಮ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವುದಕ್ಕೆ ಬಿಜೆಪಿಗೆ ಸಂಪೂರ್ಣ ಅಧಿಕಾರ ಇದೆ, ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡುವ ಅಧಿಕಾರ ಮಾತ್ರ ಜನರ ಕೈಯಲ್ಲಿದೆ, ಬಿಜೆಪಿ ಕೈಯಲ್ಲಿ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ನಮ್ಮ ದೇಶದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಮತಗಳ ದ್ರುವೀಕರಣ ಆಗೋದಿಲ್ಲ, ಇದು ನನ್ನ ಅನುಭವದ ಮಾತು. ಆದ್ದರಿಂದ ಮೋದಿ ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರಿಂದ ಬಿಜೆಪಿಗೆ ಚುನಾವಣೆ ಗೆಲ್ಲುವುದಕ್ಕೆ ಸುಲಭವೇನೂ ಆಗುವುದಿಲ್ಲ ಎಂದವರು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

