ಉಡುಪಿ

ಉಸಿರುಗಟ್ಟಿಸಿ ಒಂಟಿ ವೃದ್ಧನ ಕೊಲೆ

Published On :

ಸುಬ್ರಹ್ಮಣ್ಯ: ಬಾಳುಗೋಡು ಗ್ರಾಮದ ಉಪ್ಪುಕಳ ನಿವಾಸಿ, ವಯೋವೃದ್ಧ ಕೃಷಿಕ ಪರಮೇಶ್ವರ ಗೌಡ(70) ಅವರನ್ನು ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಮರಾಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
 ಮನೆಯ ಒಳಗೆ ಮೇಜಿನ ಡ್ರಾವರ್ ತೆರೆದಿದ್ದು ವಾಚ್, ಮೊಬೈಲ್ ಮತ್ತಿತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿ ಬಿದ್ದಿದ್ದು ಖೋವಿ ಕೂಡ ಪತ್ತೆಯಾಗಿದೆ. ಇದನ್ನು ಪರಮೇಶ್ವರ ಗೌಡರು ತಮ್ಮ ಭದ್ರತೆಗಾಗಿ ಇಟ್ಟು ಕೊಂಡಿದ್ದರು ಎಂದು ಹೇಳಲಾಗಿದೆ. ಹಣ, ಆಸ್ತಿಗಾಗಿಯೇ ಯಾರೋ ಪರಿಚಿತರೇ ಈ ಕೊಲೆ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಬಾಳುಗೋಡು ಗ್ರಾಮದ ಉಪ್ಪುಕಳದ ತೋಟದ ಮನೆಯಲ್ಲಿ ಒಬ್ಬಂಟಿಗರಾಗಿ ವಾಸಿಸುತ್ತಿದ್ದರು. ಇವರ ಪತ್ನಿ ಬಾಗೀರಥಿ 14 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.
 ದಂಪತಿಗೆ ಇಬ್ಬರು ಮಕ್ಕಳಿದ್ದು, ಪುತ್ರಿಯನ್ನು ಸುಳ್ಯ ತಾಲೂಕಿನ ಕಿರ್ಲಾಯಿ ಎಂಬಲ್ಲಿಗೆ ಮದುವೆ ಮಾಡಿಕೊಟ್ಟಿದ್ದು, ಪುತ್ರ ಸತೀಶ ಕೈಕಂಬದ ಬಳಿ ತೋಟದ ಜಾಗ ಖರೀದಿಸಿ ಆರೇಳು ವರ್ಷಗಳಿಂದ ತಮ್ಮ ಕುಟುಂಬದೊಂದಿಗೆ ಅಲ್ಲೇ ವಾಸಿಸುತ್ತಿದ್ದಾರೆ. ಹೀಗಾಗಿ ಉಪ್ಪುಕಳದಲ್ಲಿ ಪರಮೇಶ್ವರ ಗೌಡರು ಒಬ್ಬರೇ ನೆಲೆಸಿದ್ದರು.
ಘಟನೆ ಬೆಳಕಿಗೆ ಬಂದದ್ದು ಹೀಗೆ: ಪರಮೇಶ್ವರ ಗೌಡರ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ಸ್ಥಳೀಯನಾದ ಗಣಪಯ್ಯ ಎಂಬವರು ಭಾನುವಾರ ಮತ್ತು ಸೋಮವಾರ ರಜೆ ಮಾಡಿದ್ದು ಮಂಗಳವಾರ ಬೆಳಗ್ಗೆ ಕೆಲಸಕ್ಕೆಂದು ಬಂದಾಗ ಮನೆಯ ಬಾಗಿಲು ತೆರೆದಿದ್ದು ಒಳಗೆ ಪರಮೇಶ್ವರ ಗೌಡರು ಮಗುಚಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ. ಕೂಡಲೇ ಪಕ್ಕದ ಮನೆಯ ಲಕ್ಷ್ಮಣ ಎಂಬವರಿಗೆ ವಿಷಯ ತಿಳಿಸಿದಾಗ ಸ್ಥಳೀಯರೆಲ್ಲ ಸೇರಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ಮಾಹಿತಿ ನೀಡಿದರು.
ಪೊಲೀಸರಿಂದ ಪರಿಶೀಲನೆ : ಸ್ಥಳಕ್ಕಾಗಮಿಸಿದ ಪೊಲೀಸರು, ತನಿಖೆ ನಡೆಸಿದ್ದು ಮಂಗಳೂರಿನಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಶೋಧ ನಡೆಯುತ್ತಿದೆ. ಮಂಗಳೂರಿನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್, ಪುತ್ತೂರು ಪೊಲೀಸ್ ಅಧೀಕ್ಷಕ ಸದಾನಂದ ವರ್ಣೇಕರ್, ಸುಳ್ಯ ವೃತ್ತ ನಿರೀಕ್ಷಕ ಸುದರ್ಶನ್, ಸುಬ್ರಹ್ಮಣ್ಯ ಉಪಠಾಣಾಧಿಕಾರಿ ಕುಶಾಲಪ್ಪ ಗೌಡ ಕಲ್ಲುಗುಡ್ಡೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
 ಪರಮೇಶ್ವರ ಗೌಡರ ಶವದ ಬಳಿಯಿಂದ ಹೊರಟ ಶ್ವಾನ ಮನೆಗೆ ಒಂದು ಸುತ್ತು ಬಂದು ನಂತರ ಅಂಗಳದ ಬದಿಯಲ್ಲಿರುವ ತೆಂಗಿನ ಮರಕ್ಕೆ ಸುತ್ತು ಬಂದು ತೋಟದ ಮೂಲಕ ಮುಂದಕ್ಕೆ ಸಾಗಿ ನದಿಯ ಬಳಿ ನಿಂತುಕೊಂಡಿತು. ಆರೋಪಿಗಳು ತುಂಬಿದ ನದಿಯನ್ನು ದಾಟಿ ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ.
 ಪರಮೇಶ್ವರ ಗೌಡರನ್ನು ಕೈಕಾಲು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಕೊಲೆಗೈದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಗೌಡರ ಹಣೆ ಮತ್ತು ಮೊಣಕಾಲಿನಲ್ಲಿ ಗಾಯದ ಗುರುತು, ಮೈಮೇಲೆ ತರಚಿದ ಗಾಯ ಕಂಡು ಬಂದಿದೆ. ಪರಮೇಶ್ವರ ಗೌಡರು 2 ವರ್ಷಗಳ ಹಿಂದೆ ಜೀಪೊಂದನ್ನು ಖರೀದಿಸಿದ್ದು, ಹರಿಹರದ ತನಕ ಮಾತ್ರ ಜೀಪು ಚಲಾಯಿಸುತ್ತಿದ್ದರು. ದೂರದ ಊರಿಗೆ ಹೋಗುವಾಗ ಸ್ಥಳೀಯರಾದ ಉಪ್ಪುಕಳ ಕೆಂಚಪ್ಪ ಎಂಬವರನ್ನು ಚಾಲಕರಾಗಿ ಕರೆದುಕೊಂಡು ಹೋಗುತ್ತಿದ್ದರು.
ಸೋಮವಾರ ಜೀಪು ರಿಪೇರಿಗಾಗಿ ಸುಳ್ಯಕ್ಕೆ ಹೋಗಲಿರುವುದಾಗಿ ಚಾಲಕ ಕೆಂಚಪ್ಪರಿಗೆ ತಿಳಿಸಿದ್ದರು. ಭಾನುವಾರ ಉಪ್ಪುಕಳ ಮನೆಗೆ ಬಂದಿದ್ದ ಮಗ ಸತೀಶ ಜೀಪು ರಿಪೇರಿಗೆ ಸೋಮವಾರ ಬೇಡ ಮಂಗಳವಾರ ಹೋಗೋಣ ತಾನು ಕೂಡ ಬರುವುದಾಗಿ ತಂದೆ ಪರಮೇಶ್ವರ ಗೌಡರಲ್ಲಿ ತಿಳಿಸಿ ಕೈಕಂಬಕ್ಕೆ ತೆರಳಿದ್ದರು. ಬಳಿಕ ಗೌಡರು ಕೆಂಚಪ್ಪನಿಗೆ ಮಂಗಳವಾರ ಹೋಗುವುದಾಗಿ ತಿಳಿಸಿದ್ದರು. ಕೆಲಸದಾಳು ಗಣಪಯ್ಯ ಭಾನುವಾರ ಮತ್ತು ಸೋಮವಾರ ರಜೆ ಹಾಕಿದ್ದ. ಜೀಪು ರಿಪೇರಿಗಾಗಿ ಗೌಡರು ಹಣ ತಂದಿರಿಸಿದ ಬಗ್ಗೆ ಚಾಲಕ ಕೆಂಚಪ್ಪ, ಕೂಲಿಯಾಳು ಗಣಪಯ್ಯ ಹಾಗೂ ಮಗ ಸತೀಶ ಈ ಮೂರು ಮಂದಿಗೆ ಮಾತ್ರ ತಿಳಿದಿದ್ದು ಈ ಬಗ್ಗೆಯೂ ಶಂಕೆ ಇದೆ.
ಕತ್ತಿ ಪತ್ತೆ: ತೋಟದಲ್ಲಿ ಕತ್ತಿಯೊಂದು ಸಿಕ್ಕಿದೆ. ಆದರೆ ಈ ಕತ್ತಿಯು ಪರಮೇಶ್ವರ ಗೌಡರ ಮನೆಯ ಕತ್ತಿ ಅಲ್ಲವೆಂದು ಕೆಲಸದಾಳು ಗಣಪಯ್ಯ ತಿಳಿಸಿದ್ದಾನೆ. ಆದರೆ ಈ ಕತ್ತಿಯನ್ನು ಉಪ್ಪುಕಳ ಪರಿಸರದಲ್ಲೇ ತಯಾರು ಮಾಡಲಾಗಿದೆ ಎಂಬ ಗುಮಾನಿ ಹಬ್ಬಿದೆ.
ಪರಿಚಿತರಿಂದಲೇ ಕೃತ್ಯ?: ಪರಮೇಶ್ವರ ಗೌಡರ ಮನೆ ದಟ್ಟವಾದ ಕಾಡಿನ ಮಧ್ಯೆ ಇದ್ದು, ಈ ಮನೆಗೆ ಸ್ಥಳೀಯರಲ್ಲದೇ ಹೊರಗಿನ ಅಪರಿಚಿತರು ಬರುವ ಸಂಭವ ತುಂಬಾ ಕಡಿಮೆ. ಹಾಗೆ ಯಾರಾದರೂ ಗೌಡರ ಮನೆಗೆ ಬಂದು ನೀರು ಬೇಕು ಎಂದು ಕೇಳಿದಾಗ ಕಿಟಕಿಯಲ್ಲೇ ವ್ಯಕ್ತಿಯನ್ನು ನೋಡಿ ಪರಿಚಯಸ್ಥರಾಗಿದ್ದರೆ ಮಾತ್ರವೇ ಬಾಗಿಲು ತೆಗೆದು ಬಿಂದಿಗೆಯಲ್ಲಿ ನೀರು ತಂದು ಕೊಡುತ್ತಿದ್ದರು. ಮಂಗಳವಾರದಂದು ಮನೆಯ ಜಗಲಿಯಲ್ಲಿ ನೀರಿನ ಬಿಂದಿಗೆ ಕಂಡು ಬಂದಿದ್ದು ನೀರು ಕೇಳುವ ನೆಪದಲ್ಲಿ ಬಂದವರೇ ಈ ಕೃತ್ಯ ನಡೆಸಿರುವರೇ ಅಥವಾ ಆಸ್ತಿಗಾಗಿ ಕೊಲೆ ನಡೆಸಿರುವ ಸಂಶಯ ಕೂಡ ಪೊಲೀಸರಿಗೆ ಮೂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.