ಆಯತಪ್ಪಿ ಬಿದ್ದು ವ್ಯಕ್ತಿ ಸಾವು
ಮಣಿಪಾಲ: ಅಲೆವೂರು ಗ್ರಾಮದ ವಿಠಲ ಸಭಾ ಭವನದ ಬಳಿಯ ವಾಣಿಜ್ಯ ಸಂಕೀರ್ಣವೊಂದರ ಮೆಟ್ಟಿಲುಗಳನ್ನು ಹತ್ತುವಾಗ ವ್ಯಕ್ತಿ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಎಂ. ಸುಬ್ರಹ್ಮಣ್ಯ ರಾವ್ (48) ಮೃತರು. ಇವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟವುಳ್ಳವರಾಗಿದ್ದು, ಕುಡಿದ ಅಮಲಿನಲ್ಲಿ ಮಾಳಿಗೆಯ ಮೆಟ್ಟಿಲುಗಳನ್ನು ಏರುವಾಗ ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದು, ಉಡುಪಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ಅವರ ಮಗ ಕೌಶಿಕ್ ಕುಮಾರ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ಜುಗಾರಿ: ಆರೋಪಿ ಸೆರೆ
ಕುಂದಾಪುರ: ಬಸ್ರೂರು ಗ್ರಾಮದ ಮಾರ್ಗೋಳಿ ನಾಗೇಶ್ ಶೇರಿಗಾರ ಎಂಬವರಿಗೆ ಸೇರಿದ ಮರದ ಮಿಲ್ಲಿನ ಬಳಿ ಇರುವ ಗೂಡಂಗಡಿಯ ಎದುರು ಮಟ್ಕಾ ಜುಗಾರಿ ಆಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಬುಧವಾರ ನಡೆದಿದೆ. ಆರೋಪಿ ಮಹಾಬಲ ಪೂಜಾರಿ ತನ್ನ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕರಿಂದ ಹಣ ಪಣವಾಗಿರಿಸಿಕೊಂಡು ಮಟ್ಕಾ-ಜುಗಾರಿ ಆಡುತ್ತಿದ್ದನೆಂಬ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ ನಗದು ರು. 820 ಹಾಗೂ ಇನ್ನಿತ್ತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರತ್ಯೇಕ ಪ್ರಕರಣ: ಇನ್ನೊಂದು ಪ್ರಕರಣದಲ್ಲಿ ಕುರ್ಕುಜೆ ಗ್ರಾಮದ ಬಾರ್ ಎದುರಿನ ಗೂಡಂಗಡಿಯ ಪಕ್ಕದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದಲ್ಲಿಗೆ ಕುಂದಾಪುರ ಪೊಲೀಸರು ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಉದಯ ಶೆಟ್ಟಿ ಎಂಬವನನ್ನು ದಸ್ತಗಿರಿ ಮಾಡಿರುವ ಪ್ರಕರಣ ಬುಧವಾರ ಸಂಭವಿಸಿದೆ. ಆರೋಪಿಯಿಂದ ಆಟಕ್ಕೆ ಬಳಸಿದ ನಗದು ರು. 670 ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ; ಮಹಿಳೆ ಗಾಯ
ಕುಂದಾಪುರ: ಕಸಬಾ ಗ್ರಾಮದ ಹಳೆಬಸ್ ನಿಲ್ದಾಣದ ಶ್ರೀಮಂಜುನಾಥ ಆಸ್ಪತ್ರೆಯ ಬಳಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಗಾಯಗೊಂಡವರನ್ನು ಶ್ಯಾಮಲಾ ಎಂದು ಗುರುತಿಸಲಾಗಿದೆ. ಆಪಾದಿತ ಬೈಕ್ ಸವಾರ ರಾಜು ಬೈಕನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
9ರಂದು ರೇಕಿ ಚಿಕಿತ್ಸಾ ಶಿಬಿರ
ಉಡುಪಿ: ಶೃಂಗೇರಿಯ ಡಿವೈನ್ ಹೀಲಿಂಗ್ ಫೌಂಡೇಶನ್ ವತಿಯಿಂದ ರೇಕಿ ಚಿಕಿತ್ಸಾ ಶಿಬಿರ 9ರಂದು ಅಂಬಲಪಾಡಿಯ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದಲ್ಲಿ ನಡೆಯಲಿದೆ. ಶಿವಮೊಗ್ಗದ ಆಯುರ್ವೇದ ವೈದ್ಯ ಡಾ. ಸತ್ಯನಾರಾಯಣ ಶಿಬಿರ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
8ರಿಂದ ಮಾಹಿತಿ ಆಂದೋಲನ
ಉಡುಪಿ: ಕೇಂದ್ರ ಸರ್ಕಾರದ ವಾರ್ತಾ ಇಲಾಖೆ ವತಿಯಿಂದ ಫೆ.8ರಿಂದ 10ರವರೆಗೆ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನ ಬ್ರಹ್ಮಾವರದ ಎಸ್ಎಂಎಸ್ ಸಮುದಾಯ ಭವನದಲ್ಲಿ ನಡೆಯಲಿದೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ 2006ರಿಂದ ಆರಂಭವಾಗಿರುವ ಈ ಅಭಿಯಾನ ದೇಶದ ವಿವಿಧ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ನಡೆದಿದ್ದು, ಇದೀಗ ಉಡುಪಿ ಜಿಲ್ಲೆಯನ್ನು ಆರಿಸಲಾಗಿದೆ. ಈ ಆಂದೋಲನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುಮಾರು 30 ಇಲಾಖೆಗಳ ಮಳಿಗೆಗಳಿರುತ್ತವೆ. ಜನರು ನೇರವಾಗಿ ಇಲಾಖೆ ಅಧಿಕಾರಿಗಳೊಂದಿಗೆ ಸಂವಾದ ನಡೆಸುವ ಮೂಲಕ ಮಾಹಿತಿ ಪಡೆದುಕೊಳ್ಳಲು ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ವಾರ್ತಾ ಇಲಾಖೆ ಹೆಚ್ಚುವರಿ ಮಹಾನಿರ್ದೇಶಕ ಎಸ್. ವೆಂಕಟೇಶ್ವರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಇದೇ ಸಂದರ್ಭ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಇದರಲ್ಲಿ ಉಡುಪಿ ಜಿಲ್ಲೆಯ 3500 ಮಂದಿ ಭಾರತ್ ನಿರ್ಮಾಣ್ ಅಭಿಯಾನದ ಸ್ವಯಂಸೇವಕರು, ವಿವಿಧ ಸ್ವಸಹಾಯದ ಸಂಘದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. 8ರಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರ ಭೂಸಾರಿಗೆ ಸಚಿವ ಆಸ್ಕರ್ ಫೆರ್ನಾಂಡಿಸ್ ಆಂದೋಲನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ವಿನಯಕುಮಾರ್ ಸೊರಕೆ, ಉಡುಪಿ- ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗ್ಡೆ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಮತ್ತು ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದೇ ಸಮಾರಂಭದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಬಾಕಿ ಪಾವತಿಗೆ ರಾಜ್ಯಸರ್ಕಾರ ಬಿಡುಗಡೆ ಮಾಡಿರುವ ರು. 20 ಕೋಟಿ ಪರಿಹಾರವನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಹೇಳಿದರು. ಇಲಾಖೆಯ ಸ್ಥಳೀಯಾಧಿಕಾರಿ ತುಕಾರಾಮ್ ಗೌಡ, ಜಿಪಂ ಉಪಕಾರ್ಯದರ್ಶಿ ಪ್ರಾಣೇಶ್ ರಾವ್ ಇದ್ದರು.
ಸಹಾಯಧನ ವಿತರಣೆ
ಬೈಂದೂರು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಕಿರುಸಾಲ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ 12 ಸ್ವಸಹಾಯ ಗುಂಪುಗಳ ಒಟ್ಟು 192 ಫಲಾನುಭವಿಗಳಿಗೆ ರು. 19.20 ಲಕ್ಷ, ಗಂಗಾಕಲ್ಯಾಣ ನೀರಾವರಿ ಸೌಲಭ್ಯ 10 ಫಲಾನುಭವಿಗಳಿಗೆ ರು. 15 ಲಕ್ಷ ಸೇರಿ ಒಟ್ಟು 292 ಫಲಾನುಭವಿಗಳಿಗೆ ಒಟ್ಟು ರು. 34.20 ಲಕ್ಷ ಸಾಲ ಸಹಾಯಧನ ಸೌಲಭ್ಯವನ್ನು ಶಾಸಕ ಗೋಪಾಲ ಪೂಜಾರಿ ಅವರು ವಿತರಿಸಿದರು. ಜಡ್ಕಲ್ ಗ್ರಾಪಂ ಉಪಾಧ್ಯಕ್ಷೆ ಕುಮಾರಿ ರಶ್ಮಿತಾ, ಮದೂರು ಸೈಂಟ್ ಮೇರಿಸ್ ಚರ್ಚ್ನ ಧರ್ಮಗುರು ರೆ.ಫಾ.ಸಬಾಸ್ಟಿನ್, ಯಡ್ತರೆ ಗ್ರಾಪಂ ಉಪಾಧ್ಯಕ್ಷೆ ಸುಶೀಲ ರಾಮಚಂದ್ರ, ಜಡ್ಕಲ್ ಗ್ರಾಪಂ ಸದಸ್ಯ ವಿ.ಜೆ. ದೇವದಾಸ್, ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ಜಡ್ಕಲ್ ಇದರ ಅಧ್ಯಕ್ಷ ಪಿ.ಎಲ್. ಜೋಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

