ಕಲುಷಿತ ಕೊಲ್ಲೂರು ಪರಿಸರಕ್ಕೆ ಕಾಯಕಲ್ಪ ನೀಡಿ
ಕೊಲ್ಲೂರು: ರಾಜ್ಯ ಮಾತ್ರವಲ್ಲ ಅಕ್ಕಪಕ್ಕದ ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳ ಯಾತ್ರಾರ್ಥಿಗಳ ದೊಡ್ಡ ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿರುವ ಕೊಲ್ಲೂರು ಮುಕಾಂಬಿಕಾ ದೇವಾಲಯದ ಪಕ್ಕದಲ್ಲಿ ಹರಿಯುತ್ತಿರುವ ಪುಣ್ಯನದಿ ಸೌರ್ಪಣಿಕ ಮಲ- ಮೂತ್ರ, ಪ್ಲಾಸ್ಟಿಕ್, ಎಂಜಲುಗಳಿಂದ ಕಲುಷಿತಗೊಂಡು ಪರಿಸರದ ಆರೋಗ್ಯಕ್ಕೆ ಸವಾಲು ಹಾಕುತ್ತಿದೆ.
ರಾಜ್ಯ ಮುಜರಾಯಿ ಇಲಾಖೆಗೆ ವಾರ್ಷಿಕ ಹಲವು ಕೋಟಿ ರು. ಅದಾಯ ತಂದು ಕೊಡುವ ಈ ದೇವಾಲಯದ ಬಗ್ಗೆ ಸರ್ಕಾರ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗುತ್ತಿದೆ.
ಈ ಬಗ್ಗೆ ಹೋರಾಟ ಕೈಗೆತ್ತಿಕೊಂಡಿರುವ ಪರಸರವಾದಿ ಸಂತ ಕೇಮಾರು ಸಾಧಾನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಈ ಸೌಪರ್ಣಿಕೆಯ ಪಾವಿತ್ರ್ಯ ಕಾಪಾಡುವಂತೆ, ಪರಿಸರದ ಆರೋಗ್ಯ ಉಳಿಸುವಂತೆ ಆಗ್ರಹಿಸಿ ಬುಧವಾರ ದೇವಾಲಯದ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ನದಿ ಬಣ್ಣವೇ ಬದಲು: ದೇವಾಲಯದ ಸುತ್ತಮುತ್ತ ಸುಮಾರು 50 ಹೋಟೇಲು, ಲಾಡ್ಜು, ತ್ರಗಳಿವೆ, ನೂರಾರು ಅಂಗಡಿ ಮುಂಗಟ್ಟುಗಳಿವೆ. ಆದರೆ ಇಲ್ಲಿ ಒಳಚರಂಡಿಯೇ ಇಲ್ಲ, ಆದ್ದರಿಂದ ಅನಿವಾರ್ಯವಾಗಿ ನಿತ್ಯವೂ ಈ ಎಲ್ಲಾ ಹೊಟೇಲು, ಅಂಗಡಿಗಳ ಮಲ ಮೂತ್ರಾದಿ ಲೋಡುಗಟ್ಟಲೇ ತ್ಯಾಜ್ಯಗಳು ನೇರವಾಗಿ ಸೇರುವುದು ಈ ಸೌಪರ್ಣಿಕೆ ಒಡಲನ್ನು. ಇಲ್ಲಿಯೇ ಈ ನದಿಗೆ ಅಗ್ನಿತೀರ್ಥ ಎಂಬ ಉಪನದಿ ಇದೆ. ಇದಕ್ಕೂ ಇಲ್ಲಿನ ಲಾಡ್ಜುಗಳ ತ್ಯಾಜ್ಯ ಸೇರುತ್ತಿದೆ. ಈ ನದಿಗಳ ಬಣ್ಣವೇ ಬದಲಾಗಿದೆ ಎಂದರೇ ಅದರ ಕಲುಷಿತತೆ ಮಟ್ಟವನ್ನು ಊಹಿಸಬಹುದು.
ಈಗ ಬೇಸಿಗೆ ಕಾಲವಾದ್ದರಿಂದ ನದಿಯಲ್ಲಿ ನೀರು ಕಡಿಮೆಯಾಗುತ್ತಿದೆ, ಸ್ನಾನಘಟ್ಟದಲ್ಲಂತೂ ರಾಶಿರಾಶಿ ಕೆಟ್ಟ ಹುಳಗಳು ವಿಲಿವಿಲಿ ಹರಿದಾಡುತ್ತಿವೆ.
ಮುರಿದ ಸಂಪ್ರದಾಯ: ವರ್ಷಂಪ್ರತಿ ಮಾರ್ಚ್ ತಿಂಗಳಲ್ಲಿ ದೇವಾಲಯದ ಜಾತ್ರೆ ನಡೆಯುತ್ತದೆ. ಮರುದಿನ ದೇವರಿಗೆ ಅಗ್ನಿತೀರ್ಥ ನದಿಯಲ್ಲಿ ಅಭ್ಯಂಜನ ನಡೆಯುವುದು ಸಂಪ್ರದಾಯವಾಗಿದೆ. ಆದರೆ ಈ ನದಿಯ ಈ ಕೊಳಕು ನೀರಿನಲ್ಲಿ ದೇವರಿಗೆ ಅಭ್ಯಂಜನ, ಅಭಿಷೇಕ ಮಾಡಲಾಗದೇ ಕಳೆದ ವರ್ಷದಿಂದ ಈ ಸಂಪ್ರದಾಯವನ್ನು ಕೈಬಿಡಲಾಗಿದೆ. ಕನಿಷ್ಟ ಪಕ್ಷ ಈ ವರ್ಷವಾದರೂ ಆ ಸಂಪ್ರದಾಯ ಮುಂದುವರೆಸುವಂತಾಗಲಿ, ಭಕ್ತರರು ಯಾವುದೇ ರೋಗರುಜಿನಗಳು ಹತ್ತದಂತೆ ಇಲ್ಲಿ ಪವಿತ್ರ ಸ್ನಾನ ಮಾಡುವಂತಾಗಲಿ ಎಂದ ಕೇಮಾರು ಶ್ರೀಗಳು ಆಶಿಸಿದ್ದು, ಸರ್ಕಾರ ಆದಷ್ಟು ಶೀಘ್ರವಾಗಿ ಒಳಚರಂಡಿ ನಿರ್ಮಿಸಿ ಕಲುಷಿತ ನೀರನ್ನು ಶುದ್ಧಿಗೊಳಿಸಿ ಕೊಲ್ಲೂರು ಮತ್ತು ನೆರೆ ಗ್ರಾಮಗಳಿಗೆ ಕೃಷಿ ಉಪಯೋಗಕ್ಕೆ ನೀಡಬೇಕು ಮತ್ತು ಮುಕಾಂಬಿಕಾ ಅಭಯಾರಣ್ಯದೊಳಗಿನಿಂದ ಪ್ರಕೃತಿದತ್ತವಾಗಿ ಹರಿದು ಬರುವ ಈ ನದಿಯ ಪರಿಶುದ್ಧ ನೀರಿನ ಪಾವಿತ್ರ್ಯತೆ ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿದ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಲ್. ಎಸ್. ಮಾರುತಿ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ವಾಮೀಜಿ ಅವರೊಂದಿಗೆ ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟಿನ ಅಧ್ಯಕ್ಷ ಕೆ.ಕೆ. ಸಾಬು, ಕೊಲ್ಲೂರು ದೇವಸ್ಥಾನದ ಮಾಜಿ ಟ್ರಸ್ಟಿ ಗೌರಿ ದೇವಾಡಿಗ, ನವೀನ್ ಚಂದ್ರ ಉಪ್ಪುಂದ, ಬಜರಂಗ ದಳದ ತಾಲೂಕು ಸಂಚಾಲಕ ಹರೀಶ ತೋಳಾರ್, ಕೊಲ್ಲೂರು ಧರ್ಮಪೀಠದ ಶ್ರೀಸಮುದ್ಗಾನಂದ ಸ್ವಾಮೀಜಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

