ಉಡುಪಿ

ಮಟ್ಟುಗುಳ್ಳ ಬೆಳೆಗಾರರಿಗೆ ಬೆಂಬಲ

Published On :

ಉಡುಪಿ: ನೂರಾರು ವರ್ಷಗಳ ಇತಿಹಾಸವಿರುವ ಮಟ್ಟು ಗುಳ್ಳ (ಉಡುಪಿ ತಾಲೂಕಿನ ಮಟ್ಟು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳೆಯುವ ಬದನೆಯ ವಿಶೇಷ ತಳಿ) ಬೆಳೆ ನಷ್ಟ ಹಾದಿಯಿಂದ ಮೇಲೆತ್ತುವುದಕ್ಕೆ ಜಿಲ್ಲಾ ತೋಟಗಾರಿಕಾ ಇಲಾಖೆ ಪ್ರಾಯೋಗಿಕ ಪ್ರಯತ್ನಕ್ಕೆ ಕೈಹಾಕಿದೆ.
 ಇದುವರೆಗೆ ಮಟ್ಟು ಮತ್ತು ಸುತ್ತಮತ್ತಲಿನ ಗ್ರಾಮಗಳಾದ ಕೈಪುಂಜಾಲು, ಪಾಂಗಾಳ ಗ್ರಾಮಗಳ ಸುಮಾರು 500 ಎಕ್ರೆ ಪ್ರದೇಶದಲ್ಲಿ ಸಾಂಪ್ರಾದಾಯಿಕ ಪದ್ಧತಿಯಲ್ಲಿಯೇ ಮಟ್ಟುಗುಳ್ಳ ಬೆಳೆಸಲಾಗುತ್ತಿತ್ತು. ಇದರಿಂದ ಕಳೆಯ ಸಮಸ್ಯೆ, ನೀರಿನ ಸಮಸ್ಯೆ ಆಗುತ್ತಿತ್ತು. ಅಲ್ಲದೆ, ಸಾಕಷ್ಟು ಗಿಡಗಳನ್ನು ನೆಡಲು ಸ್ಥಳದ ಅಭಾವ ಎದುರಾಗುತ್ತಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುತ್ತಿರಲಿಲ್ಲ, ಅಲ್ಲದೆ ಈ ಬೆಳೆಗಾರರ ನಡುವೆ ಒಗ್ಗಟ್ಟು ಇಲ್ಲದೆ ಮಾರುಕಟ್ಟೆ, ಬೆಲೆಯ ಸಮಸ್ಯೆ ಕೂಡ ಎದುರಾಗುತ್ತಿತ್ತು.
ಕಳೆಗಿಡ ಮತ್ತು ನೀರಿನ ಸಮಸ್ಯೆ ನೀಗಿಸಿದರೇ ಈ ಬೆಳೆಗಾರರ ಬಹಳ ದೊಡ್ಡ ತಲೆನೋವು ನೀಗುತ್ತದೆ. ದೊಡ್ಡ ಪ್ರಮಾಣದಲ್ಲಿ ಹಣದ ಉಳಿತಾಯವಾಗುತ್ತದೆ. ಇದನ್ನು ಮನಗಂಡ ತೋಟಗಾರಿಕಾ ಇಲಾಖೆ ಈ ಮಟ್ಟುಗುಳ್ಳವನ್ನು ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಸುವುದಕ್ಕೆ ಈ ಬೆಳೆಗಾರರಿಗೆ ಬೆಂಬಲ ನೀಡುತ್ತಿದೆ.
ಜರಿ ಹಾಳೆಯಲ್ಲಿ ಗಿಡ: ಗದ್ದೆಯಲ್ಲಿ ಜರಿ ಹಾಳೆ (ಪ್ಲಾಸ್ಟಿಕ್ ದಾರದಿಂದ ನೇಯ್ದ ಹಾಳೆ)ಗಳನ್ನು ಗದ್ದೆಯಲ್ಲಿ ಹಾಸಿ, ಅದರಲ್ಲಿ ನಿರ್ದಿಷ್ಟ ಅಂತರದಲ್ಲಿ ತೂತುಗಳನ್ನು ಮಾಡಿ ಅದರಲ್ಲಿ ಗುಳ್ಳದ ಗಿಡಗಳನ್ನು ನೆಡಲಾಗುತ್ತದೆ.
ಈ ಜರಿ ಹಾಳೆಯಿಂದಾಗಿ ಗುಳ್ಳದ ಗಿಡ ಬಿಟ್ಟು ಬೇರೆ ಯಾವುದೇ ಕಳೆ ಗಿಡ ಬೆಳೆಯುವುದಿಲ್ಲ, ಆದ್ದರಿಂದ ಕಳೆ ಕೀಳುವ, ಅದಕ್ಕಾಗಿ ಕೂಲಿಗಳನ್ನು ನೇಮಿಸುವ, ಅವರಿಗೆ ಸಂಬಳ ನೀಡುವ ಕೆಲಸಗಳಿಲ್ಲದೆ ಉಳಿತಾಯವಾಗುತ್ತದೆ. ಈ ಕಳೆ ಗಿಡಗಳೇ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ನೀರನ್ನು ತಿಂದು ಹಾಕುವುದರಿಂದ ಅದೂ ಉಳಿತಾಯವಾಗಿ, ಗೊಬ್ಬರ-ನೀರಿನ ಬಳಕೆ ಗಣನೀಯವಾಗಿ ಕಡಿಮೆಯಾಗಿ, ಇಲ್ಲಿಯೂ ಉಳಿತಾಯವಾಗುತ್ತದೆ.
ಪೈಪಿನ ಮೂಲಕ ನೀರು: ಇದಕ್ಕೂ ಮೊದಲು ಈ ಬದನೆ ಸಸಿಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಬೆಳೆಸಲಾಗುತ್ತದೆ. ನಂತರ ಬತ್ತದ ಕೊಯ್ಲು ಮಾಡಿದ ಗದ್ದೆಯಲ್ಲಿ 2-3 ಅಡಿ ಅಂತರದಲ್ಲಿ ಸಸಿ ನಾಟಿ ಮಾಡಲಾಗುತ್ತದೆ. ಇದರಿಂದ ಹೆಚ್ಚು ಸಂಖ್ಯೆಯಲ್ಲಿ ಗಿಡಗಳನ್ನು ನೆಡುವುದಕ್ಕೆ ಸಾಧ್ಯವಾಗುತ್ತದೆ. ಎರಡು ಸಾಲುಗಳ ನಡುವೆ ಕೊಳವೆ ಹಾಸಿ ಪ್ರತಿ 3 ಗಿಡಗಳ ಮಧ್ಯದಲ್ಲಿ ನೀರು ಬಿಡುವ ಮೂಲಕ ನೀರಿನ ಸದ್ಬಳಕೆ ಮಾಡಲಾಗುತ್ತಿದೆ. ಇದರಿಂದಲೂ ಬೆಳೆಗಾರರಿಗೆ ಉಳಿತಾಯವಾಗುತ್ತದೆ.
ರೈತರೂ ಒಪ್ಪಿದ್ದಾರೆ: ಆರಂಭದಲ್ಲಿ ಈ ಪದ್ಧತಿಗೆ ಬೆಳೆಗಾರರ ಸಂಶಯ, ವಿರೋಧವಿತ್ತು, ಕಳೆದ ವರ್ಷ ಕೇವಲ 26 ಜನ ರೈತರು 12.50 ಎಕರೆ ಪ್ರದೇಶದಲ್ಲಿ ಈ ವೈಜ್ಞಾನಿಕ ಕ್ರಮದಲ್ಲಿ ಮಟ್ಟುಗುಳ್ಳ ಬೆಳೆಸಿದ್ದಾರೆ. ಆದರೆ ಈ ಬಾರಿ 42 ಜನ ರೈತರು 25 ಎಕರೆ ಪ್ರದೇಶದಲ್ಲಿ ಹೊಸ ತಂತ್ರಜ್ಞಾನ ಬಳಸಿ ಗುಳ್ಳ ಬೇಸಾಯ ಮಾಡುತ್ತಿದ್ದಾರೆ. ಮುಂದಿನ ವರ್ಷ ಎಲ್ಲಾ ರೈತರು ಹೊಸ ಪದ್ಧತಿಯಲ್ಲಿಯೇ ಗುಳ್ಳ ಬೇಸಾಯ ಮಾಡುತ್ತಾರೆ ಎಂಬ ನೀರಿಕ್ಷೆಯಿದೆ ಎಂದು ತೋಟಗಾರಿಕಾ ಅಧಿಕಾರಿ ಸದಾಶಿವ ರಾವ್ ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.