ಹೊಸ ದಾಖಲೆ ನಿರ್ಮಿಸಿದ ತೆಂಡೂಲ್ ಕಾರ್ ಟೂನ್ಸ್
ಉಡುಪಿ: ಕಳೆದ ನವೆಂಬರ್ 17ರಂದು ನಮ್ಮ ದೇಶದ ಎಲ್ಲ ರಾಜ್ಯಗಳ ಎಲ್ಲ ಭಾಷೆಯ ಬಹುತೇಕ ಎಲ್ಲ ಪತ್ರಿಕೆಗಳು ಒಂದೇ ವಿಷಯದ ಬಗ್ಗೆ 'ಕ್ಯಾರಿಕೇಚರ್ ಕಾರ್ಟೂನ್'ಗಳನ್ನು ಪ್ರಕಟಿಸಿದ್ದವು. ಬಹುಶಃ ನಮ್ಮ ದೇಶದ ಇತಿಹಾಸದಲ್ಲಿ ಇಂಥ ದಾಖಲೆ ಬೇರೊಂದು ಇರಲಿಕ್ಕಿಲ್ಲವೇನೋ...
ಹೌದು, ಅಂದು ಪ್ರಕಟವಾಗಿದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಕುರಿತಾದ ಕಾರ್ಟೂನುಗಳು, 'ದಾಖಲೆ' ಎಂಬ ಶಬ್ದದ ಇನ್ನೊಂದು ಅರ್ಥವೇ ತೆಂಡೂಲ್ಕರ್. ನ.16ರಂದು ಸಚಿನ್ ನಿವೃತ್ತರಾಗಿದ್ದರು. ನಮ್ಮ ದೇಶದಾದ್ಯಂತ ಮಾತ್ರವಲ್ಲ ವಿಶ್ವದಾದ್ಯಂತದ ಅನೇಕ ಪತ್ರಿಕೆಗಳಲ್ಲಿ ಮರುದಿನ ತೆಂಡೂಲ್ಕರ್ ಬಗೆಗೆ ಒಂದಲ್ಲ ಒಂದು ರೀತಿಯ ಕಾರ್ಟೂನುಗಳು ಪ್ರಕಟವಾಗಿ ದಾಖಲೆ ಸೃಷ್ಟಿಯಾಗಿತ್ತು.
ಇಂತಹ ದಾಖಲೆಯೊಂದು ಅಂದು ಸೃಷ್ಟಿಯಾದದ್ದು ಬಹುತೇಕರ ಗಮನಕ್ಕೆ ಬಂದಿರಲಿಕ್ಕಿಲ್ಲ, ಆದರೆ ಇದನ್ನು ಗಮನಿಸಿದ ಉಡುಪಿಯ ಕಾರ್ಟೂನಿಸ್ಟ್ ಜೀವನ್ ಶೆಟ್ಟಿ ಅಂದೇ ಒಂದು ಯೋಜನೆ ಹಾಕಿಕೊಂಡಿದ್ದರು, ಏನೆಂದರೇ ಒಂದಷ್ಟು ಕಾರ್ಟೂನಿಸ್ಟ್ಗಳನ್ನು ಸಂಪರ್ಕಿಸಿ ಅವರಿಂದ ಮತ್ತೆ ತೆಂಡೂಲ್ಕರ್ ಕುರಿತಾದ ಕಾರ್ಟೂನ್ಗಳನ್ನು ಬರೆಯಿಸಿ ಅವುಗಳನ್ನು ಒಂದೇ ಕಡೆ ಪ್ರದರ್ಶನಕ್ಕಿಡುವುದು.
ತಕ್ಷಣ ಫೇಸ್ಬುಕ್ನಲ್ಲಿ ತಮ್ಮ ಈ ಹೊಸ ಯೋಜನೆ ಪ್ರಕಟಿಸಿದರು. ಇದಕ್ಕೆ ವ್ಯಂಗ್ಯಚಿತ್ರಕಾರರಿಂದ ಬಂದ ಪ್ರತಿಕ್ರಿಯೆ ಅದ್ಭುತ. ಮಾತ್ರವಲ್ಲ ಅವರೆಲ್ಲ ಒಂದೋ ಎರಡೋ ಕಾರ್ಟೂನ್ಗಳನ್ನು ಕೂಡ ಕಳುಹಿಸಿಕೊಟ್ಟರು.
26ರವರೆಗೆ ಪ್ರದರ್ಶನ: ಅವುಗಳನ್ನು ಜೀವನ್ ಶೆಟ್ಟಿ ಅವರು ತಮ್ಮ 'ಗೆರೆಬರೆ' ಚಿತ್ರಕಲಾ ಶಾಲೆಯಲ್ಲಿ 'ತೆಂಡೂಲ್ ಕಾರ್ ಟೂನ್ಸ್' ಎಂಬ ಹೆಸರಿನಲ್ಲಿ ಜ.19ರಿಂದ 26ರವರೆಗೆ ಪ್ರದರ್ಶನಕ್ಕಿಟ್ಟಿದ್ದಾರೆ. ನಿತ್ಯ ಸಾಕಷ್ಟು ಮಂದಿ ತೆಂಡೂಲ್ಕರ್ ಮತ್ತು ಕಾರ್ಟೂನ್ ಪ್ರೇಮಿಗಳು ಬಂದು ಈ ಪ್ರದರ್ಶನವನ್ನು ನೋಡಿ ಖುಷಿಪಡುತ್ತಿದ್ದಾರೆ.
ನಮ್ಮ ರಾಜ್ಯದ 34 ಮಂದಿ ಹಾಗೂ ಹೈದರಾಬಾದಿನ 6 ಮಂದಿ ಕಾರ್ಟೂನಿಸ್ಟ್ಗಳ ಒಟ್ಟು 66 ಕಾರ್ಟೂನ್ಗಳು ಈ 'ತೆಂಡೂಲ್ ಕಾರ್ ಟೂನ್ಸ್'ನಲ್ಲಿ ಪ್ರದರ್ಶನಕ್ಕಿವೆ. ತೆಂಡೂಲ್ಕರ್ ಅವರ ವಿಭಿನ್ನ ಶೈಲಿಯ ಸೊಗಸಾದ ಆಟದಂತೆ ಈ ಕಾರ್ಟೂನ್ಗಳೂ ಸೊಗಸಾಗಿ ಭಿನ್ನ ವಿಭಿನ್ನವಾಗಿವೆ.
ಅಂದ ಹಾಗೆ ಈ ಪ್ರದರ್ಶನ ಕೂಡ ಒಂದು ದಾಖಲೆಯೇ ಆಗಿದೆ. ಬಹುಶಃ ಒಬ್ಬ ವ್ಯಕ್ತಿಯ ಬಗ್ಗೆ ಇಷ್ಟು ಮಂದಿ ಕಾರ್ಟೂನಿಸ್ಟ್ಗಳು ಬರೆದ ವ್ಯಂಗ್ಯಚಿತ್ರಗು ಒಂದೇ ಕಡೆ ಪ್ರದರ್ಶನಗೊಂಡ ಉದಾಹರಣೆ ಬೇರೊಂದಿಲ್ಲವೇನೋ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

