ಕೊಲ್ಲೂರು ಸ್ವಾಮೀಜಿ ಸಮಾಧಿ ವಿವಾದ: ವಸ್ತುನಿಷ್ಠ ವರದಿಗೆ ಜಿಲ್ಲಾಧಿಕಾರಿ ಸೂಚನೆ
ಕೊಲ್ಲೂರು: ಇಲ್ಲಿನ ಮೂಕಾಂಬಿಕಾ ದೇವಾಲಯದ ಅನತಿ ದೂರದಲ್ಲಿರುವ ನಿತ್ಯಾನಂದಾಶ್ರಮದ ಸ್ವಾಮೀಜಿ ಸಮಾಧಿ ನಿರ್ಮಾಣದಿಂದ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಬುಧವಾರ ದೇವಾಲಯದ ವ್ಯವಸ್ಥಾಪನಾ ಸಮಿತಿ ಭಕ್ತರ ಸಭೆ ಆಯೋಜಿಸಿತ್ತು. ಈ ನಡುವೆ, ಮೂರು ದಿನಗಳಲ್ಲಿ ವಿವಾದ ಕುರಿತು ವಸ್ತುನಿಷ್ಠ ವರದಿಯನ್ನು ಸಲ್ಲಿಸುವಂತೆ ದೇವಾಲಯದ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಉಡುಪಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಶೀಘ್ರವೇ ಈ ಸಮಾಧಿಯನ್ನು ದೇವಳದ ಗಡಿಯ ಹೊರಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸೋಮವಾರ ನಿಧನರಾದ ನಿತ್ಯಾನಂದಾಶ್ರಮದ ಶ್ರೀವಿಮಲಾನಂದ ಸ್ವಾಮೀಜಿಗೆ ಸಮಾಧಿ ನಿರ್ಮಿಸಲಾಗಿದ್ದು, ಅದು ಮೂಕಾಂಬಿಕಾ ದೇವಾಲಯದ ಗಡಿಯೊಳಗೆ ಇದೆ ಎಂದು ದೇವಳದ ವ್ಯವಸ್ಥಾಪನ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಆಶ್ರಮದ ಟ್ರಸ್ಟ್, ಸಮಾಧಿಯನ್ನು ದೇವಳದ ಗಡಿಯ ಹೊರಗೆ ನಿರ್ಮಿಸಲು ಒಪ್ಪದೆ, ಅಲ್ಲಿಯೇ ಸಮಾಧಿ ನಿರ್ಮಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ದೇವಾಲಯದಲ್ಲಿ ಸಭೆ ನಡೆಸಿ ಸಮಾಧಿ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್, ವಿವಾದಿತ ಅಂತ್ಯಕ್ರಿಯೆ, ಕ್ಷೇತ್ರದ ಸಂಪ್ರದಾಯಗಳು ಹಾಗೂ ನಿರ್ಬಂಧಗಳ ಬಗ್ಗೆ, ದೇವಾಲಯದ ಆಡಳಿತ ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ 3 ದಿನಗಳಲ್ಲಿ ವಸ್ತುನಿಷ್ಠ ವರದಿ ಸಲ್ಲಿಸುವಂತೆ ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಆದೇಶಿಸಿದ್ದಾರೆ.
ಮಂಡ್ಯ ಮೂಲದ ಶಿಕ್ಷಕ ಹೃದಯಾಘಾತದಿಂದ ನಿಧನ
ಮೂಲ್ಕಿ: ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಮಂಡ್ಯ ಮೂಲದ ಎಚ್. ಚಂದ್ರಗಿರಿ(57) ಮೃತ ಶಿಕ್ಷಕರು. ಇವರು ಮೂಲ್ಕಿ ಕಾರ್ನಾಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ 18 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೂಲತಃ ಮಂಡ್ಯದವರಾದ ಇವರು ಪತ್ನಿ, ಮಕ್ಕಳನ್ನು ತಮ್ಮ ಊರಿನಲ್ಲೇ ಬಿಟ್ಟು ಕಿಲ್ಪಾಡಿಯ ವ್ಯಾಸ ಮಹರ್ಷಿ ಶಾಲೆ ಸಮೀಪ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ರಜೆ ಸಮಯದಲ್ಲಿ ಊರಿಗೆ ಹೋಗಿ ಬರುತ್ತಿದ್ದರು. ಬುಧವಾರ ಬೆಳಗ್ಗೆ ಅವರು ಶಾಲೆಗೆ ಬಾರದ್ದನ್ನು ತಿಳಿದು ಅವರು ವಾಸವಿದ್ದ ಬಾಡಿಗೆ ಮನೆಗೆ ಹೋಗಿ ನೋಡಿದಾಗ ಚಂದ್ರಗಿರಿ ಅವರು ಮೃತಪಟ್ಟಿದ್ದು ತಿಳಿದು ಬಂದಿದೆ. ಮೃತರ ಗೌರವಾರ್ಥ ಶಾಲೆಗೆ ಬುಧವಾರ ರಜೆ ನೀಡಲಾಗಿತ್ತು. ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ಯಲಾಗಿದೆ.
ಲೋಕಾಯುಕ್ತ ರಿಜಿಸ್ಟ್ರಾರ್, ಎಸ್ಪಿ ಪುತ್ತೂರಿಗೆ ಭೇಟಿ
ಪುತ್ತೂರು: ಉಪಲೋಕಾಯುಕ್ತ ಶುಕ್ರವಾರ ಪುತ್ತೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಲೋಕಾಯುಕ್ತ ರಿಜಿಸ್ಟ್ರಾರ್ ಸುರೇಶ್ ತುರಾಮಣಿ ಮತ್ತು ಲೋಕಾಯುಕ್ತ ಎಸ್ಪಿ ವೇದಮೂರ್ತಿ ಬುಧವಾರ ಪುತ್ತೂರಿಗೆ ಭೇಟಿ ನೀಡಿದರು.
ಬೆಳಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ, ಬಳಿಕ ಅದಾಲತ್ ಕಾರ್ಯಕ್ರಮ ನಡೆಯಲಿರುವ ಪುರಭವನಕ್ಕೆ ಭೇಟಿ ನೀಡಿದರು.
ಸಹಾಯಕ ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿಜತೆ ಕಾರ್ಯಕ್ರಮ ಕುರಿತು ಚರ್ಚೆ ನಡೆಸಿದರು. ಅದಾಲತ್ ಬಗ್ಗೆ ಮಾರ್ಗದರ್ಶನ ನೀಡಿದರು. ಬಳಿಕ ನ್ಯಾಯಾಲಯ ವೀಕ್ಷಿಸಿ, ಮಂಗಳೂರಿಗೆ ಹಿಂತಿರುಗಿದರು.
ದರ್ಬೆ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ನಡೆಯಿತು. ಇಂದು ಕೂಡ ಅಹವಾಲು ಸ್ವೀಕಾರ ನಡೆಯಲಿದೆ. ಲೋಕಾಯುಕ್ತ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಕೆ.ಎಚ್. ಅಹವಾಲು ಸ್ವೀಕರಿಸಿದರು. ಸ್ವೀಕರಿಸಿದ ಅಹವಾಲುಗಳನ್ನು ಅಧಿಕಾರಿಗಳ ಗಮನಕ್ಕೆ ತಂದು, ಶುಕ್ರವಾರ ಉಪಲೋಕಾಯುಕ್ತರ ಸಮಕ್ಷಮ ವಿಚಾರಣೆ ನಡೆಯಲಿದೆ. ಶುಕ್ರವಾರವೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ವಿಚಾರಣೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

