ಉಡುಪಿ

ಮಾಧ್ಯಮ, ತಂತ್ರಜ್ಞಾನ ಬಳಸಿಕೊಳ್ಳಲು ವಿಫಲವಾದ್ದರಿಂದ ಕಾಂಗ್ರೆಸ್‌ಗೆ ಸೋಲು, ಕಾರ್ಯಕರ್ತರು ಧೃತಿಗೆಡಬೇಡಿ: ಹೆಗ್ಡೆ

Published On :

ಉಡುಪಿ: ಬಿಜೆಪಿ ಮೋದಿ ಅವರ ವ್ಯಕ್ತಿಗತ ಪ್ರಚಾರದಿಂದ ಮತಗಳಿಸಿದೆ, ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ- ಮಾಧ್ಯಮಗಳನ್ನು ಬಳಸಿಕೊಳ್ಳಲು ವಿಫಲವಾಗಿ ಸೋತಿದೆ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಅವರು ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಜರುಗಿದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತೆ ಸಮರ್ಪಣಾ ಸಭೆಯಲ್ಲಿ ಮಾತನಾಡಿದರು.
ಈ ಸೋಲಿನಿಂದ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಯುವಕರು ಮುಂಚೂಣಿಗೆ ಬರಲು ಕಾಂಗ್ರೆಸ್ ಅವಕಾಶ ನೀಡಬೇಕು ಎಂದ ಅವರು ಸಂಸದರಾಗಿ ತಾವು ಉಡುಪಿ ಮತ್ತು ಚಿಕ್ಕಮಗಳೂರಿಗೆ ಮಾಡಿರುವ ಸೇವೆಯಿಂದ ತೃಪ್ತಿ ಇದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು. ಸಭೆಯಲ್ಲಿ ಪಕ್ಷದ ಮುಖಂಡರಾದ ಬಿ. ನರಸಿಂಹಮೂರ್ತಿ, ಜನಾರ್ದನ ತೋನ್ಸೆ, ದಿನೇಶ್ ಪುತ್ರನ್, ಕೇಶವ ಕೋಟ್ಯಾನ್, ಪ್ರಕಾಶ್ ಕೊಡವೂರು, ಅಶೋಕ್ ಕುಮಾರ್ ಕೊಡವೂರು, ಉದ್ಯಾವರ ನಾಗೇಶ್, ನಗರಸಭಾ ಅಧ್ಯಕ್ಷ  ಯುವರಾಜ್, ಉಪಾಧ್ಯಕ್ಷ ಅಮೃತಾ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನ್ ಕರ್ಕಡ, ಮೀನಾಕ್ಷಿ ಮಾಧವ ಬನ್ನಂಜೆ, ಮನೋಜ್ ಕರ್ಕೇರಾ, ಅಬ್ದುಲ್ ರಹಿಮಾನ್, ಶಿವಪಾಲನ್, ಗಣಪತಿ ಶೆಟ್ಟಿಗಾರ್, ಸದಾಶಿವ ಕೋಟ್ಯಾನ್, ವಿಕಾಸ್ ಶೆಟ್ಟಿ, ಅಮೃತ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಶಾಂತರಾಮ ಸಾಲ್ವಾಂಕರ್, ವಿಜಯ ಪೂಜಾರಿ, ಕುಶಲ್ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಜನಾರ್ದನ ಭಂಡಾರ್ಕರ್, ಭಾಸ್ಕರ್ ರಾವ್ ಕಿದಿಯೂರು ಇದ್ದರು.

ಬಿಜೆಪಿ ಹೇಳುವುದೊಂದು, ಮಾಡುವುದೊಂದು...
ಒಳ್ಳೆಯ ದಿನಗಳು ಬರಲಿವೆ ಎಂದು ಚುನಾವಣೆಗೆ ಮೊದಲೇ ಘೋಷಣೆ ಮಾಡಿದ್ದ ಬಿಜೆಪಿ ಅಧಿಕಾರ ಬಂದ ಕೇವಲ ಒಂದು ವಾರದಲ್ಲಿ, ಡಿಸೇಲ್ ಬೆಲೆ ಏರಿಸಿದೆ, ರೇಲ್ವೆ ಪ್ರಯಾಣ ದರವನ್ನು ಏರಿಸುವುದಾಗಿ ಹೇಳಿದೆ. ಪ್ರತಿಪಕ್ಷದಲ್ಲಿದ್ದಾಗ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಿದ್ದ ಬಿಜೆಪಿ ಸರ್ಕಾರ ದೇಶ ಅಭಿವೃದ್ಧಿಯಾಗಬೇಕಾದರೆ ಬೆಲೆಯೇರಿಕೆ ಅನಿವಾರ್ಯ ಎನ್ನುತ್ತಿದೆ. ರಕ್ಷಣಾ ಇಲಾಖೆಯ ಮೇಲೆ ಶೇ. 100 ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಯ ಕೇಂದ್ರ ಸರ್ಕಾರದ ಪ್ರಸ್ತಾವನೆ ಆತಂಕಕಾರಿಯಾಗಿದೆ. ಬಿಜೆಪಿ ಹೇಳುವುದೊಂದು ಮಾಡುವುದೊಂದು ಎಂಬುದು ವಾರದೊಳಗೆ ಸಾಬೀತಾಗಿದೆ.
    
ಹೆಬ್ರಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ
ಹೆಬ್ರಿ: ಬಿಜೆಪಿಯವರ ರಾಷ್ಟ್ರಮಟ್ಟದ ವ್ಯಾಪಕ ಸುಳ್ಳು ಪ್ರಚಾರ ಮತ್ತು ವ್ಯಕ್ತಿ ಬಿಂಬಿತ ಪ್ರಚಾರದಿಂದ ಕಾಂಗ್ರೆಸ್‌ಗೆ ಸೋಲಾಗಿದೆ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
ಅವರು ಹೆಬ್ರಿಯಲ್ಲಿ ಮಂಗಳವಾರ ಬಂಟರ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.
ಸೋಲು- ಗೆಲವನ್ನು ಸಮಾನಾಗಿ ಸ್ವೀಕಾರ ಮಾಡಿದ್ದೇನೆ. ಜನರ ಮಧ್ಯೆ ನಿಂತು ಕೆಲಸ ಮಾಡುತ್ತೇನೆ, ಕಾರ್ಯಕರ್ತರು ಎಂದೂ ಭಯ ಪಡುವ ಅಗತ್ಯವಿಲ್ಲ ಸೋಲಿಗೆ ಅಂಜುವುದಿಲ್ಲ ಎಂದು ಮಾಜಿ ಸಂಸದರು ಹೇಳಿದರು.
ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರು ಭಯಪಡುವ ಪ್ರಮೇಯವೇ ಇಲ್ಲ. ಕಾರ್ಯಕರ್ತರ ರಕ್ಷಣೆ ಮತ್ತು ಜನರ ಸೇವೆಗೆ ಸದಾಬದ್ಧರಾಗಿ ಸಿದ್ಧರಿದ್ದೇವೆ ಎಂದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪೂಜಾರಿ, ಹೆಬ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ ಆಚಾರ್ಯ, ಜಿಲ್ಲಾ ಕಾಂಗ್ರೆಸ್‌ನ ರಾಘವ ದೇವಾಡಿಗ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.