ರಾಜ್ಯ ಬಜೆಟ್ ಕರಾವಳಿಗಿಲ್ಲ ಸಿಹಿ
ಕನ್ನಡಪ್ರಭ ವಾರ್ತೆ, ಕಾರವಾರ, ಫೆ. 8
ಬಿಜೆಪಿ ಸರ್ಕಾರದ ಕೊನೆಯ ಹಾಗೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಪ್ರಥಮ ಬಜೆಟ್ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹುಟ್ಟಿಸಿದ್ದ ನಿರೀಕ್ಷೆಗಳು ಹುಸಿಯಾಗಿವೆ. ಮೀನುಗಾರಿಕೆಗೆ ಅಲ್ಪಸ್ವಲ್ಪ ಕೊಡುಗೆ ನೀಡಿದ್ದನ್ನು ಬಿಟ್ಟರೆ ಜಿಲ್ಲೆಯ ಪ್ರವಾಸೋದ್ಯಮ ಸೇರಿದಂತೆ ಇತರ ಕ್ಷೇತ್ರಗಳಿಗೆ ವಿಶೇಷ ಕೊಡುಗೆಯನ್ನು ನೀಡಲಾಗಿಲ್ಲ.
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಈಚೆಗೆ ಎರಡು ಬಾರಿ ಜಿಲ್ಲೆಗೆ ಬಂದಾಗಲೂ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ನಲ್ಲಿ ವಿಶೇಷ ಪ್ಯಾಕೇಜ್ ನೀಡುವುದಾಗಿ ಭರವಸೆ ನೀಡಿದ್ದರು. ಬಜೆಟ್ ಕೃಷಿ ಹಾಗೂ ಮೀನುಗಾರಿಕೆ ಬಜೆಟ್ ಆಗಿರಲಿದೆ ಎಂಬ ಸುಳಿವನ್ನೂ ನೀಡಿದ್ದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಘೋಷಿಸಿದ್ದರು. ಮೀನುಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಸಹ ಬಜೆಟ್ ಮೀನುಗಾರಿಕೆ ಪರವಾಗಿರಲಿದೆ ಎಂದು ಮೇಲಿಂದ ಮೇಲೆ ಹೇಳುತ್ತಲೇ ಇದ್ದರು. ಆದರೆ ಆ ನಿರೀಕ್ಷೆಗಳು, ಭರವಸೆಗಳೆಲ್ಲ ಹುಸಿಯಾಗಿವೆ. ಮೀನುಗಾರಿಕೆಗೆ ಕಳೆದ ಬಜೆಟ್ನಲ್ಲಿ ಕೊಟ್ಟಿದ್ದಕ್ಕಿಂತ ಕಡಿಮೆ ಹಣ ನೀಡಲಾಗಿದೆ. ಪ್ರವಾಸೋದ್ಯಮ ಹಾಗೂ ವಿಶೇಷ ಪ್ಯಾಕೇಜ್ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾವನೆಯೇ ಇಲ್ಲದಿರುವ ಬಗ್ಗೆ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೊಟ್ಟಿದ್ದೇನು?: ಕಾರವಾರ ತಾಲೂಕಿನ ಮಾಜಾಳಿ ಹಾಗೂ ಅಂಕೋಲಾ ತಾಲೂಕಿನ ಗಾಬಿತಕೇಣಿಯಲ್ಲಿ ಮೀನುಗಾರಿಕೆ ಬಂದರುಗಳ ನಿರ್ಮಾಣ, ಯಾಂತ್ರೀಕೃತ ಮೀನುಗಾರಿಕೆಗೆ ನೀಡುವ ಸುಂಕರಹಿತ ಡೀಸೆಲ್ ಮಿತಿಯಲ್ಲಿ ಹೆಚ್ಚಳ, ಕರಾವಳಿ ಪ್ರದೇಶದಲ್ಲಿ ಒಳ ಸಮುದ್ರದ ಮೀನುಗಾರಿಕೆಗೆ ಟ್ರಾಲರ್ ಬೋಟ್ಗಳಿಗೆ ನೀಡುತಿದ್ದ ಸೌಲಭ್ಯವನ್ನು 340 ಅಶ್ವಶಕ್ತಿ ಯಂತ್ರದ ತನಕ ವಿಸ್ತರಣೆ, ರಾಜ್ಯದ ಕರಾವಳಿಯಲ್ಲಿ ತಲಾ ರು. 25 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ, ಸಾಂಪ್ರದಾಯಿಕ ಮೀನುಗಾರಿಕೆ ದೋಣಿಗಳಿಗೆ ಸ್ಥಳಾವಕಾಶ ಒದಗಿಸಲು ಭಟ್ಕಳ ಹಾಗೂ ಕಾರವಾರ ಮೀನುಗಾರಿಕೆ ಬಂದರುಗಳನ್ನು ತಲಾ ರು. 5 ಕೋಟಿ ವೆಚ್ಚದಲ್ಲಿ ವಿಸ್ತರಿಸುವುದು, ಒಟ್ಟೂ ರು. 231 ಕೋಟಿ ವೆಚ್ಚದಲ್ಲಿ ಭಟ್ಕಳ, ಮಾವಿನಕುರ್ವೆ, ಅಳ್ವೆಕೋಡಿ-ತೆಂಗಿನಗುಂಡಿ, ಬೆಳಂಬಾರ, ಬೇಲೆಕೇರಿ, ಗಂಗಾವಳಿ, ಮಂಜಗುಣಿ ಮತ್ತು ಕುಮಟಾ ತಾಲೂಕಿನ ವನ್ನಳ್ಳಿಯಲ್ಲಿ ತಡೆಗೋಡೆ ನಿರ್ಮಾಣ, ಅಂಕೋಲಾ ಪಟ್ಟಣಕ್ಕೆ 24 ಗಂಟೆ ಕುಡಿಯುವ ನೀರಿನ ಸೌಲಭ್ಯ, ಕರಾವಳಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸೌಭಾಗ್ಯ ಸಂಜೀವಿನಿ ಹಾಗೂ ಉಳಿದ ಕ್ಷೇತ್ರಕ್ಕೆ ನೀಡಿರುವ ಯೋಜನೆಗಳು ಇಲ್ಲೂ ಅನ್ವಯವಾಗುವುದರಿಂದ ಇವಿಷ್ಟೇ ಜಿಲ್ಲೆಯ ಕರಾವಳಿಗೆ ನೀಡಿರುವ ಪ್ರಮುಖ ಕೊಡುಗೆಗಳಾಗಿವೆ.
ಕರಾವಳಿಯಲ್ಲಿ ಮುರ್ಡೇಶ್ವರ, ಗೋಕರ್ಣ, ಇಡಗುಂಜಿ, ಅಪ್ಸರಕೊಂಡ ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಈ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯಾವ ಕೊಡುಗೆಯನ್ನೂ ನೀಡಲಾಗಿಲ್ಲ. ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಹಾಗೂ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವ ಭರವಸೆಯೂ ಹುಸಿಯಾಗಿದೆ. ಕನ್ನಡಪ್ರಭ ಈ ಕುರಿತು ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಅವರನ್ನು ಪ್ರಶ್ನಿಸಿದಾಗ, ಬಜೆಟ್ ಮೀನುಗಾರರ ಪರವಾಗಿರಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಉಳಿದ ಕ್ಷೇತ್ರಗಳಿಗೂ ಅಂತಹ ಗಮನಾರ್ಹ ಕೊಡುಗೆ ನೀಡಲಾಗಿಲ್ಲ. ಈ ಬಜೆಟ್ ಬಗ್ಗೆ ಎಲ್ಲ ಕ್ಷೇತ್ರಗಳ ಜನತೆ ನಿರಾಶರಾಗಿದ್ದಾರೆ ಎಂದು ಉತ್ತರಿಸಿದರು.
ಈ ಬಾರಿ ಬಜೆಟ್ ಅನ್ನು ಕರಾವಳಿ ಜನತೆ ಕಾತರದಿಂದ ನಿರೀಕ್ಷಿಸುತ್ತಿದ್ದರು. ಆದರೆ ಕರಾವಳಿ ಜನತೆಯ ನಿರೀಕ್ಷೆಗಳು ಬಜೆಟ್ ಮಂಡಿಸಿದ ಮೇಲೂ ಹಾಗೆ ಉಳಿದುಕೊಂಡಿವೆ.
-ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

