ಉತ್ತರ ಕನ್ನಡ

ನಾನು ಬಿಜೆಪಿಯಲ್ಲೇ ಉಳಿಯುತ್ತೇನೆ

Published On :

ಕನ್ನಡಪ್ರಭ ವಾರ್ತೆ, ಶಿರಸಿ, ಮಾ. 16
ನಾನು ಕೆಜೆಪಿಗೆ ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಆದರೆ ಧರ್ಮ ಸಂಕಟದಲ್ಲಿದ್ದೇನೆ ಎಂದು ಹೇಳಿದ್ದೆ. ನಾನು ಕೆಜೆಪಿಗೆ ಹೋಗುವುದು ಕೇವಲ ಊಹಾಪೋಹ. ಆದರೆ ನಾನು ಬಿಜೆಪಿಯಲ್ಲಿ ಉಳಿದಿದ್ದೇನೆ. ಉಳಿಯುತ್ತೇನೆ ಎಂದು ಮುಂಡಗೋಡ-ಯಲ್ಲಾಪುರ ಶಾಸಕ ವಿ.ಎಸ್. ಪಾಟೀಲ ಸ್ಪಷ್ಟಪಡಿಸಿದರು.
ನಗರದ ಲೋಕೋಪಯೋಗಿ ಇಲಾಖೆ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ, ತಮ್ಮ 5 ವರ್ಷದ ಸಾಧನೆಯ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಧನಂಜಯ ಕುಮಾರ್ ಅವರು ಶಿರಸಿಗೆ ಬಂದಿದ್ದಾಗ ಕೆಜೆಪಿ ಬರುವವರಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಿದ್ದರು.
ಈಗ ಕೆಜೆಪಿಯಲ್ಲಿ ಧನಂಜಯಕುಮಾರ್ ಇದ್ದರೂ ಹಿಂದೊಮ್ಮೆ ಬಿಜೆಪಿಯಲ್ಲಿ ಇದ್ದವರೇ. ಒಂದೇ ಮನೆಯಿಂದ ಬಂದವರು. ಕರೆಯುವುದು ಅವರ ಕೆಲಸ. ಆದರೆ ನಿರ್ಧಾರ ನಮ್ಮದೇ ಅಲ್ಲವೇ ಎಂದು ಮಾರ್ಮಿಕವಾಗಿ ನುಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದೊಳಗಿನ ಒಳಜಗಳದ ಕಾರಣದಿಂದಲೇ ನಾವು ಸೋಲನ್ನು ಅನುಭವಿಸಿದ್ದೇವೆ. ಹೈಕಮಾಂಡಿನ ಒಳಜಗಳದ ಪರಿಣಾಮ ಇಂತಹ ಸೋಲು ಎದುರಾಗಿದೆ. ಇಂದಿನ ಸಮಯದಲ್ಲಿ ಮತದಾರರ ಭಾವನೆ ಅರಿಯುವಲ್ಲಿ ನಾವು ಕಷ್ಟಪಡುತ್ತಿದ್ದೇವೆ. ನಾವೆಷ್ಟೇ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ  ಸೋಲನ್ನು ಅನುಭವಿಸಿದ್ದೇವೆ ಎಂದು ವಿ.ಎಸ್. ಪಾಟೀಲ ಹೇಳಿದರು.
ಹೈಕಮಾಂಡ್‌ಗೆ ಬಿಟ್ಟ ವಿಷಯ: ಸಂಸದ ಅನಂತಕುಮಾರ ಹೆಗಡೆ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವುದು ಹೈಕಮಾಂಡಿಗೆ ಹಾಗೂ ಪಕ್ಷದ ಹಿರಿಯ ನಾಯಕರಿಗೆ ಬಿಟ್ಟ ವಿಷಯ. ಅವರು ಯಾವ ರೀತಿ ನಿರ್ಣಯ ಕೈಗೊಳ್ಳುತ್ತಾರೋ ಆ ರೀತಿಯೇ ನಡೆಯುತ್ತದೆ. ನನ್ನ ವಿಧಾನಸಭಾ ಕ್ಷೇತ್ರದಲ್ಲೂ ಹೈಕಮಾಂಡ್ ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಹಾಗೆಯೇ ಸಮಾಜಸೇವೆ ನಡೆಸುತ್ತೇನೆ. ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರ ಚುನಾವಣೆಗೆ ಸ್ಪರ್ಧಿಸುವ ವಿಚಾರ ಹೈಕಮಾಂಡಿಗೆ ಬಿಟ್ಟದ್ದು ಎಂದು ಶಾಸಕ ವಿ.ಎಸ್. ಪಾಟೀಲ ತಿಳಿಸಿದರು.
ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರವಾರ-ಇಳಕಲ್ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಶಿಡ್ಲಗುಂಡಿ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಶಿರಸಿ-ಯಲ್ಲಾಪುರ ನಡುವೆ ಬೇಡ್ತಿ ನದಿ ಸೇತುವೆಯಿದೆ. ಇದು ಶಿಥಿಲಾವಸ್ಥೆ ತಲುಪಿದೆ. ಟೆಂಡರ್ ಪ್ರಕ್ರಿಯೆ ನಡೆಯದ ಕಾರಣ ಹೊಸ ಸೇತುವೆ ನಿರ್ಮಾಣ ಆರಂಭಗೊಂಡಿಲ್ಲ. ಹಳೆ ಸೇತುವೆಯನ್ನು ರಿಪೇರಿ ಮಾಡಲು ರು. 30 ಲಕ್ಷ ವೆಚ್ಚದಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.
ಕೆಲ ಅಭಿವೃದ್ಧಿ ಕಾರ್ಯ: ಮುಂಡಗೋಡ, ಯಲ್ಲಾಪುರ ಹಾಗೂ ಬನವಾಸಿಗಳಿಗೆ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿದ್ದು ನನ್ನ ಆಡಳಿತ ಅವಧಿಯ ಕೆಲವು ಅಭಿವೃದ್ಧಿ ಕಾರ್ಯಗಳಲ್ಲೊಂದಾಗಿದೆ. ನೀರಿನ ಅಭಾವ ಇರುವಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ರು. 30 ಲಕ್ಷ ಮೀಸಲಿಡಲಾಗಿದೆ.
ಮುಂಡಗೋಡ, ಯಲ್ಲಾಪುರ ಹಾಗೂ ಬನವಾಸಿ ವ್ಯಾಪ್ತಿಯಲ್ಲಿ ಯಾವುದೇ ಪ್ರದೇಶವನ್ನೂ ಕಡೆಗಣನೆ ಮಾಡಿಲ್ಲ. ಈಗಾಗಲೇ ಅನೇಕ ಆಶ್ರಯ ಯೋಜನೆ ಮನೆಗಳನ್ನು ಬಡವರಿಗೆ, ರೈತರಿಗೆ ನೀಡಲಾಗಿದೆ. ಇನ್ನು 8000 ಮನೆಗಳನ್ನು ನೀಡುವುದು ಬಾಕಿ ಇದೆ. ಇಲ್ಲಿನ ಹೆಚ್ಚಿನ ಗ್ರಾಮಗಳಿಗೆ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ತಮ್ಮ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಪಂ ಶಿರಸಿ ಅಧ್ಯಕ್ಷ ಗುರುಪಾದ ಹೆಗಡೆ ಬೊಮ್ನಳ್ಳಿ, ಉಪಾಧ್ಯಕ್ಷ ಸಂತೋಷ ಗೌಡರ್, ಜಿಪಂ ಸದಸ್ಯೆ ಉಷಾ ಹೆಗಡೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.