ಸಂಪಾದಕೀಯ

ಔಷಧಿಗಳ ಪೇಟೆಂಟ್ ಮಹತ್ವದ ತೀರ್ಪು

Published On :

ದೇಶದ ಆರ್ಥಿಕ ವ್ಯವಸ್ಥೆಯ ಜಾಗತೀಕರಣದಲ್ಲಿ ಅಂತಾರಾಷ್ಟ್ರೀಯ ಪೇಟೆಂಟ್ ಒಡಂಬಡಿಕೆಯ ಸಿದ್ಧಾಂತವನ್ನು ಪ್ರತಿಪಾದಿಸುವ ಕಾಯಿದೆಯನ್ನು ಸಂಸತ್ತು ಒಪ್ಪಿದಾಗಲೇ ಅನೇಕರು ಎಚ್ಚರಿಕೆ ನೀಡಿ, ಬಹುರಾಷ್ಟ್ರೀಯ ಸಂಸ್ಥೆಗಳು ಅದನ್ನು ದುರುಪಯೋಗ ಪಡಿಸಿಕೊಳ್ಳಬಹುದಾದ ಅಪಾಯವನ್ನು ಮುಂದಿಟ್ಟಿದ್ದರು.
ಆದರೆ ಆಗ ಸಂಸತ್ತಿನ ಹಲವು ಹಿರಿಯರು ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ಉದ್ಯಮರಂಗ ಅಂತಹ ಅನಾಹುತವನ್ನು ತಪ್ಪಿಸುವ ಸಾಮರ್ಥ್ಯವನ್ನು ಪಡೆದಿದೆ ಎನ್ನುವ ಧೈರ್ಯ ನೀಡಿದ್ದು ಈಗ ನಿಜವಾದಂತೆ ಆಗಿದೆ. ಕಳೆದ ಆರು ವರ್ಷಗಳಿಂದಲೂ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದ್ದ ಸ್ವಿಸ್ ಸಂಸ್ಥೆ ನೊವಾರ್ಟಿಸ್‌ನ ಕ್ಯಾನ್ಸರ್ ಔಷಧಿ ಗ್ಲಿವೆಕ್ಸ್ ಪೇಟೆಂಟ್ ವಿಸ್ತರಣೆಯ ಮನವಿಯನ್ನು ಸುಪ್ರೀಮ್ ಕೋರ್ಟ್ ತಿರಸ್ಕರಿಸಿದೆ. ಪ್ರಾಮುಖ್ಯವಿಲ್ಲದ ಅಲ್ಪಸ್ವಲ್ಪ ಬದಲಾವಣೆ ಮಾಡಿ, ಹಳೆಯ ಔಷಧವನ್ನೇ ಹೊಸ ಆವಿಷ್ಕಾರವೆಂದು ಪರಿಗಣಿಸಬೇಕೆನ್ನುವ ನೊವಾರ್ಟಿಸ್ ಸಂಸ್ಥೆಯ ಅರ್ಜಿ ತಿರಸ್ಕೃತವಾದದ್ದು ಒಂದು ರೀತಿಯಲ್ಲಿ ಭಾರತೀಯ ಔಷಧಗಳ ಉದ್ಯಮಕ್ಕೂ ಸವಾಲನ್ನು ಎಸೆದು ನಿಂತಂತೆಯೇ ಆಗಿರುವುದೂ ನಿಜ.
ಜಾಗತಿಕ ದೈತ್ಯ ಹಾಗೂ ಆಧುನಿಕ ಕಂಪೆನಿಗಳು ಇನ್ನು ಮುಂದೆ ಭಾರತದಲ್ಲಿ ಸಂಶೋಧನೆ ನಡೆಸುವುದು ಕಷ್ಟವೆನ್ನುವ ಎಚ್ಚರಿಕೆಯನ್ನು ನೀಡಿರುವ ನೊವಾರ್ಟಿಸ್, ಭಾರತೀಯ ಕಂಪೆನಿಗಳ ಶಕ್ತಿಗೇ ಸವಾಲನ್ನು ಎಸೆದಿದೆ. ಈಗ ಸದ್ಯಕ್ಕೆ ಮೂಲ ತಳಿಯ ಗುಣದಿಂದಲೇ ಭಾರತೀಯ ಕಂಪೆನಿಗಳು ಇಮೊಟಿಲೆಬ್ ಮೆಸಿಲೇಬ್ ಔಷಧಿಗಳನ್ನು ತಯಾರಿಸಿ ಅದನ್ನು ತಮ್ಮದೇ ಆದ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡಬಹುದು (ಅದೇ ಗ್ಲಿವೆಸ್). ಆ ಔಷಧಿಯನ್ನು ರಫ್ತೂ ಮಾಡಬಹುದು. ಅದರ ಜೊತೆ ನೊವಾರ್ಟಿಸ್‌ನ ಗ್ಲಿವೆಕ್ಸ್ ಒಂದಂಶ ಅಷ್ಟೇ.
ಈಗ ಪ್ರಕಟವಾಗಿರುವ ಸುಪ್ರೀಮ್ ಕೋರ್ಟಿನ ತೀರ್ಪು ಸಹಜವಾಗಿಯೇ ಇನ್ನೂ ವಿಚಾರಣೆಯ ಹಂತದಲ್ಲಿರುವ ಹಲವು ವಿವಾದಗ್ರಸ್ತ ದಾವೆಗಳ ಮೇಲೂ ಪರಿಣಾಮ ಬೀರುವುದು ಖಚಿತ. ಇದರಿಂದ ಔಷಧಿಗಳ ವಲಯದಲ್ಲಿ ವಿದೇಶೀ ಸಂಶೋಧನೆಗಳ ಫಲವನ್ನು ದುಬಾರಿ ಹಣ ಕೊಟ್ಟು ಪಡೆಯುವುದಕ್ಕೆ ಬದಲಾಗಿ ಭಾರತೀಯ ಉದ್ಯಮ ತನ್ನ ಸಂಶೋಧನಾ ಚಟುವಟಿಕೆಯನ್ನು ವಿಸ್ತರಿಸಬೇಕಾಗುತ್ತದೆ. ಅದಕ್ಕೆ ಹೆಚ್ಚು ಹಣವನ್ನು ತೊಡಗಿಸಬೇಕು. ಅದೇ ಸಮಯದಲ್ಲೇ ವಿದೇಶೀ ದೈತ್ಯ ಸಂಸ್ಥೆಗಳು ತಮ್ಮ ಸಂಶೋಧನೆಗೆ ಹೆಚ್ಚು ಹಣ ತೊಡಗಿಸುವುದರ ಜತೆಯಲ್ಲೇ ಭಾರತದಂತಹ ದೊಡ್ಡ ಪೇಟೆಯನ್ನು ಕಳೆದುಕೊಳ್ಳುವ ಪ್ರಶ್ನೆಯೂ ಮುಖ್ಯವಾಗುತ್ತದೆ. ಮುಂದಿನ ದಶಕದ ವೇಳೆಗೆ ವಾರ್ಷಿಕ ವ್ಯವಹಾರ ಸುಮಾರು 50 ಲಕ್ಷ ಕೋಟಿ ರುಪಾಯಿಗಳನ್ನು ಮೀರುವ ಸಂಭವವಿರುವ ಭಾರತೀಯ ಔಷಧಿಪೇಟೆ ಸಾಮಾನ್ಯವಲ್ಲ.
ಈಗಾಗಲೇ ಭಾರತೀಯ ಕಂಪೆನಿಗಳನ್ನು ವಿದೇಶೀ ದೈತ್ಯ ಸಂಸ್ಥೆಗಳು ಕಬಳಿಸುವ ಪ್ರವೃತ್ತಿ ಕಂಡುಬಂದಿದೆ. ರ್ಯಾನ್‌ಬ್ಯಾಕ್ಸಿ ಈಗ ಜಪಾನಿ ಕಂಪೆನಿ. ಇಂತಹ ಅನೇಕ ಬೆಳವಣಿಗೆಗಳಾಗಿವೆ. ಈ ವಲಯದಲ್ಲಿ ಕೇಂದ್ರ ಸರ್ಕಾರ ಎಚ್ಚರದಿಂದಿರಬೇಕು. ಅಗತ್ಯ ಬಿದ್ದಾಗ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತೀಯ ಔಷಧಿಗಳ ಉದ್ಯಮಕ್ಕೆ ಬೆಂಬಲ ನೀಡಬೇಕು. ಸರ್ಕಾರವೂ ಔಷಧಿಗಳ ವಲಯದಲ್ಲಿ ಸಂಶೋಧನೆಗೆ ಹೆಚ್ಚು ಹಣವನ್ನು ಹೂಡಲೇ ಬೇಕಾದ ಸಮಯವಿದು. ಸಂಶೋಧಕರಿಗೇನೂ ಬರವಿಲ್ಲ. ಔಷಧಿಗಳ ವಲಯದಲ್ಲಿನ ಸಂಶೋಧನೆ ಭಾರತೀಯ ವಿಜ್ಞಾನಿಗಳಿಗೂ ಹೊಸದಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.