ಸಂಪಾದಕೀಯ

ಭಾಷಾ ಅಲ್ಪಸಂಖ್ಯಾತರ ಓಲೈಕೆ ನಿಲ್ಲಲಿ

Published On :

ಚುನಾವಣೆಯ ಪ್ರಚಾರದ ಅಬ್ಬರ ಹೆಚ್ಚುತ್ತಿರುವಂತೆ ಕಾಣುತ್ತಿರುವ ಒಂದು ಅಂಶವೆಂದರೆ ಕರ್ನಾಟಕದ ಗಡಿ ಭಾಗದಲ್ಲಿ ನೆಲೆಸಿ ಕನ್ನಡಿಗರೇ ಆಗಿರುವ ಭಾಷಾ ಅಲ್ಪಸಂಖ್ಯಾತರನ್ನು ಕನ್ನಡ ಮುಖ್ಯವಾಹಿನಿಯಿಂದ ಬೇರ್ಪಡಿಸುವ ಕೆಲಸ. ಅದಕ್ಕೆ ಉದಾಹರಣೆಯಾಗಿ, ಕರ್ನಾಟಕದಿಂದ ಆಯ್ಕೆಯಾಗಿ ಹತ್ತು ವರ್ಷ ಕಳೆದರೂ ಇಂದಿಗೂ ಒಂದು ಪದ ಕನ್ನಡ ಆಡದ ಬಿಜೆಪಿಯ ರಾಜ್ಯಸಭೆ ಸದಸ್ಯ ವೆಂಕಯ್ಯ ನಾಯ್ಡು ಇತ್ತೀಚೆಗೆ ಕರ್ನಾಟಕದೆಲ್ಲೆಡೆ ತೆಲುಗಿನಲ್ಲಿ ಪ್ರಚಾರ ಮಾಡಿಕೊಂಡು ತಿರುಗುತ್ತಿದ್ದಾರೆ. ಅಂತೆಯೇ ಕಾಂಗ್ರೆಸ್ ಪಕ್ಷ ತೆಲುಗು ನಟ ಚಿರಂಜೀವಿಯನ್ನು ಕರೆಸಿ ತೆಲುಗಿನಲ್ಲಿ ಪ್ರಚಾರ ಮಾಡುವ ಉದ್ದೇಶ ಹೊಂದಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಇದು ಎಷ್ಟು ಸರಿ? ಮನೆ ಮಾತು ಏನೇ ಆಗಿದ್ದರೂ ಕರ್ನಾಟಕದಲ್ಲಿ ನೆಲೆಸಿ ಕನ್ನಡ ಕಲಿತು ಇಲ್ಲಿಯವರೇ ಆಗಿರುವ ಭಾಷಾ ಅಲ್ಪಸಂಖ್ಯಾತರನ್ನು ಕನ್ನಡ ಕೈ ಬಿಟ್ಟು ಇನ್ನೊಂದು ಭಾಷೆಯಲ್ಲಿ ಓಲೈಸುವ ಮೂಲಕ ಯಾವ ಸಂದೇಶ ಕೊಡುತ್ತಿದ್ದಾರೆ? ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆತ ಇವರನ್ನು ಮತಕ್ಕಾಗಿ ಕನ್ನಡದಿಂದ ಬೇರ್ಪಡಿಸುವ ಕೆಲಸ ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತದ್ದಲ್ಲವೇ? ಈ ಮನಸ್ಥಿತಿಯ ಜನನಾಯಕರು ವಿಧಾನಸೌಧಕ್ಕೆ ಬಂದಾಗ ಕರ್ನಾಟಕದ ಆಡಳಿತ ನುಡಿ ಕನ್ನಡ ಮತ್ತು ಅದರ ಪರಿಣಾಮಕಾರಿ ಅನುಷ್ಠಾನವಾಗಬೇಕು ಅನ್ನುವ ವಾದಕ್ಕೆ ಯಾವ ಬೆಲೆ ನೀಡುತ್ತಾರೆ? ರಾಜಕೀಯ ಪಕ್ಷಗಳು ಹೊಣೆಗಾರಿಕೆಯಿಂದ ವರ್ತಿಸಲಿ.
-ವಸಂತ ಶೆಟ್ಟಿ, ಬೆಂಗಳೂರು

ಬಿಹಾರಕ್ಕೆ ವಿಶೇಷ ಪ್ಯಾಕೆಜ್ ರಾಜಕೀಯ

ಕೇಂದ್ರ ಸರ್ಕಾರವು ಬಿಹಾರಕ್ಕೆ 12,000 ಕೋಟಿ ರುಪಾಯಿ ವಿಶೇಷ ಪ್ಯಾಕೇಜನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಬಿಹಾರವು ಹಿಂದುಳಿದ ರಾಜ್ಯವೆಂದು ವಿಶೇಷ ಪ್ಯಾಕೇಜನ್ನು ಘೋಷಿಸಿದ್ದರೆ, ಅದಕ್ಕೆ ಯಾವ ಆಕ್ಷೇಪಣೆಯೂ ಇರುತ್ತಿರಲಿಲ್ಲ. ಇನ್ನೂ ಅನೇಕ ರಾಜ್ಯಗಳು ಹಿಂದುಳಿದ ಪಟ್ಟಿಗೆ ಸೇರುವಂತಹವುಗಳು ಇವೆ. ಮುಖ್ಯವಾಗಿ ಬಿಹಾರದ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದರ ವಿರುದ್ಧ ಸಿಡಿದೆದ್ದು, ಅಗತ್ಯವಾದರೆ ಎನ್‌ಡಿಎಯಿಂದ ಹೊರಬರುವುದಾಗಿ ಬೆದರಿಕೆ ಒಡ್ಡಿರುವುದನ್ನು ಕಾಂಗ್ರೆಸ್ ರಾಜಕೀಯ ಲಾಭ ಪಡೆಯುವುದಕ್ಕಾಗಿ ನೀಡುತ್ತಿರುವ ಬಳವಳಿಯೆಂದೇ ಭಾವಿಸಬಹುದು. ಜನತಾದಳ (ಸಂಯುಕ್ತ) ಇದನ್ನು ಯುಪಿಎ ಅಂಗ ಪಕ್ಷವನ್ನಾಗಿ ಮಾಡಿಕೊಳ್ಳುವ ಮೂಲಕ ಎನ್‌ಡಿಎಯನ್ನು ದುರ್ಬಲಗೊಳಿಸಿ ಯುಪಿಎಯನ್ನು ಬಲಶಾಲಿಯನ್ನಾಗಿ ಮಾಡಿಕೊಂಡಲ್ಲಿ, 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಆಲೋಚನೆ ಕಾಂಗ್ರೆಸ್ ಪಕ್ಷದ್ದಾಗಿದೆ. ಉತ್ತರಪ್ರದೇಶದ ಬಂದೇಲ್‌ಖಂಡ್ ಪ್ರಾಂತ್ಯಕ್ಕೂ 4400 ಕೋಟಿ ರುಪಾಯಿ ವಿಶೇಷ ಧನ ಸಹಾಯ ಮಾಡಿರುವುದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಸಮಾಜವಾದಿ ಪಕ್ಷದ ಸಂತೋಷಕ್ಕಾಗಿ ಎಂದು ಭಾವಿಸುವುದರಲ್ಲಿ ತಪ್ಪೇನೂ ಇಲ್ಲ. ಈ ರೀತಿ ಹಣವನ್ನು ವಿನಿಯೋಗಿಸುತ್ತಿರುವುದು ಸಾರ್ವಜನಿಕ ಹಣದ ದುರ್ಬಳಕೆ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಇಂತಹ ಕೆಲಸವನ್ನೇ ಮಾಡುತ್ತವೆ. ಅಧಿಕಾರವನ್ನು ಉಳಿಸಿಕೊಳ್ಳಲು ಅಥವಾ ಪುನಃ ಪಡೆಯಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಈಗಾಗಲೇ ಬಿಹಾರ ಮುಖ್ಯಮಂತ್ರಿಯವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಕೈ ಸೇರಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಹೇಳಿದಂತೆ ನಡೆಯುವವರು ಮತ್ತು ನಡೆದಂತೆ ಹೇಳುವವರು ಎಷ್ಟು ಜನ ಇದ್ದಾರೆ?
-ಕೆ.ವಿ. ಸೀತಾರಾಮಯ್ಯ, ಹಾಸನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.