ಸಂಪಾದಕೀಯ

ಮತದಾರಳಾಗಿ ಒಂದಷ್ಟು ಪ್ರಶ್ನೆಗಳು

Published On :

ಚುನಾವಣೆಗೆ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಏನೆಲ್ಲಾ ಕಸರತ್ತು ಮಾಡಿದ್ದಾರೆ ಎಂಬುದು ಜನರ ಕಣ್ಣ ಮುಂದಿದೆ. ಟಿಕೆಟ್ ಗಿಟ್ಟಿಸಿದವರಂತೂ ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ. ಎಲ್ಲ ಪಕ್ಷಗಳೂ ಸಹ ಭರವಸೆಯ ಮಳೆಯನ್ನೇ ಸುರಿಸುತ್ತಿವೆ. ಅಭ್ಯರ್ಥಿಗಳು ತಮ್ಮ ಸಾಧನೆಗಳನ್ನು ಕರಪತ್ರಗಳಲ್ಲಿ ಮುದ್ರಿಸಿ ಹಂಚುತ್ತಿದ್ದಾರೆ. ನಾವು ಮಾಧ್ಯಮಗಳ ಮೂಲಕ ಈ ಜನನಾಯಕರ ಮೇಲಿರುವ ವಿವಿಧ ರೀತಿಯ ಆರೋಪಗಳ ಕುರಿತಾಗಿ ತಿಳಿಯುತ್ತಿದ್ದೇವೆ. ಈಗ ಈ ಎಲ್ಲ ನಾಯಕರು ಓಟಿಗಾಗಿ ನೇರವಾಗಿ ಜನರ ಮುಂದೆ ಕೈ ಜೋಡಿಸಿ ನಿಂತಿದ್ದಾರೆ. ಹಾಗಾಗಿ ಇವರು ತಮ್ಮ ಮೇಲೆ ಎಷ್ಟು ಕೇಸುಗಳು ಇವೆ, ತಾವು ಎಷ್ಟು ಕೇಸುಗಳಲ್ಲಿ ಜಾಮೀನು ಪಡೆದಿದ್ದಾರೆ, ಇನ್ನು ಎಷ್ಟು ಕೇಸುಗಳಲ್ಲಿ ಜಾಮೀನು ಪಡೆಯಬೇಕಾಗುತ್ತದೆ, ತಮ್ಮ ಮೇಲೆ ಈ ರೀತಿ ಕೇಸುಗಳಾಗಲು ಕಾರಣಗಳೇನು, ತಾವು ಎಷ್ಟು ಬಾರಿ ಯಾವ ಕಾರಣಕ್ಕಾಗಿ ಪಕ್ಷ ಬದಲಿಸಿದ್ದಾರೆ, ತಮ್ಮ ಹೆಂಡತಿ ಮಕ್ಕಳ ಹತ್ತಿರ ಇರುವ ಕಾರುಗಳ ಬೆಲೆ ಏನು ಎಂಬುದನ್ನೆಲ್ಲಾ ಕರಪತ್ರದಲ್ಲಿ ಮುದ್ರಿಸಿ ಮನೆಮನೆಗೆ ಹಂಚಬೇಕಲ್ಲವೇ? ಕೇವಲ ಸಾಧನೆಗಳನ್ನು ಸಾರಿದರೆ ಸಾಕೆ? ಜನರಿಗೆ ಇವರ ಮೇಲೆ ನಂಬಿಕೆ ಬರಬೇಕೆಂದರೆ ಇವೆಲ್ಲವನ್ನೂ ತಿಳಿಸಿ ಓಟು ಕೇಳಬೇಕಲ್ಲವೇ? ಎಲ್ಲಾ ಪಕ್ಷದವರು ಸಹ ತಮ್ಮ ಚುನಾವಣಾ ಪ್ರಣಾಳಿಕೆಯ ಜೊತೆ ಚುನಾವಣೆಗೆ ನಿಂತ ತಮ್ಮ ಪಕ್ಷದ ಅಭ್ಯರ್ಥಿಗಳ ಮೇಲಿರುವ ಎಲ್ಲ ವಿವರಗಳನ್ನು ನೀಡಿ ಪ್ರಾಮಾಣಿಕತೆಯನ್ನು ಮೆರೆಯಬೇಕಲ್ಲವೇ? ಯಾಕೆಂದರೆ ಒಮ್ಮೆ ಚುನಾವಣೆ ಮುಗಿದರೆ ಇವರಾರೂ ಜನಸಾಮಾನ್ಯರ ಕೈಗೆ ಸಿಗುವುದಿಲ್ಲ. ಹಾಗಾಗಿ ದಯಮಾಡಿ ಈ ಎಲ್ಲ ವಿವರಗಳನ್ನು ಸ್ವಯಂಸ್ಫೂರ್ತಿಯಿಂದ ಆಯಾ ಕ್ಷೇತ್ರದ ಜನರಿಗೆ ಆಯಾ ಕ್ಷೇತ್ರದ ಅಭ್ಯರ್ಥಿಗಳು ನೀಡಲಿ. ಓಟಿಗಾಗಿ ನೋಟು ಕೊಡಲಿ ಬಿಡಿ, ಏಕೆಂದರೆ ಇದು ನಮ್ಮ ದುಡ್ಡಲ್ಲವೇ? ಕಷ್ಟಪಟ್ಟು ದುಡಿದಿದ್ದರೆ ಅವರು ಕೊಡುತ್ತಿದ್ದರೇನು ಎಂದು ಜನರು ನಗುತ್ತಿರುವುದು ಸಹ ಈ ಜನನಾಯಕರಿಗೆ ತಿಳಿದಿರಲಿ.
- ಪದ್ಮಾ ಕೃಷ್ಣಮೂರ್ತಿ, ಹನುಮಂತಪುರ ತುಮಕೂರು

ಹೊಸ ವಿಮಾನ ನಿಲ್ದಾಣಗಳು ಬೇಕೆ?

ನಾವಿಂದು ಜಗತ್ತಿನ ಆಧುನಿಕತೆ, ಸುಖ ಸೌಲಭ್ಯಗಳೊಂದಿಗೆ, ದಿನನಿತ್ಯದಲ್ಲಿ ವಿಜ್ಞಾನದ ಆವಿಷ್ಕರಣೆಯಿಂದ ಹೊಸ ಸೌಲಭ್ಯಗಳನ್ನು ಕಂಡು ಹಿಡಿದು ಜೀವನ ನಡೆಸುತ್ತಿದ್ದೇವೆ. ದೇಶದಿಂದ ದೇಶಕ್ಕೆ ಶೀಘ್ರ ಪ್ರಯಾಣಕ್ಕೆ ವಿಮಾನದ ಸೌಲಭ್ಯಗಳು ಹೆಚ್ಚಿದಂತೆಲ್ಲಾ ವಿಮಾನ ನಿಲ್ದಾಣಗಳ ಅವಶ್ಯಕತೆ, ವಿಸ್ತರಣೆ, ಹೊಸ ಹೊಸ ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿವೆ.
ಆದರೆ ನಮ್ಮ ರಾಜ್ಯದಲ್ಲಿ ಹೊಸ ಹೊಸ ಮಂತ್ರಿ ಮಹೋದಯರು ಅವರವರ ಜಿಲ್ಲೆಗೊಂದು ವಿಮಾನ ನಿಲ್ದಾಣ ಮಾಡಲು ಶುರು ಮಾಡಿದರೆ, ನಮ್ಮ ರಾಜ್ಯದಲ್ಲಿ ಲಭ್ಯವಿರುವ ಜನಸಂಖ್ಯೆಯ ಪ್ರಮಾಣ, ಅರಣ್ಯ, ಕೃಷಿ ಭೂಮಿಯ ಅನುಪಾತಕ್ಕೆ ಹೋಲಿಸಿದರೆ ವಿಮಾನ ನಿಲ್ದಾಣಗಳ ನಿರ್ಮಾಣ ಬಹು ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ. ಉದಾಹರಣೆ- ಶಿವಮೊಗ್ಗೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದಿಂದ ಸುಮಾರು 100-200 ಎಕರೆಯಷ್ಟು ಅರಣ್ಯನಾಶ, ಕೃಷಿ ಭೂಮಿಯ ನಾಶ, ಕೃಷಿ ಭೂಮಿ ಕಾಂಕ್ರಿಟ್ ನೆಲವಾಗಿ ಪರಿವರ್ತನೆಗೊಂಡಿದೆ. ವಿಮಾನ ನಿಲ್ದಾಣಗಳ ಜೊತೆ ಜೊತೆಗೆ, ಅಂಗ ಸಂಸ್ಥೆಗಳು, ಸಹಾಯಕ ಕಚೇರಿಗಳು, ಹೋಟೆಲ್ ಮುಂತಾದವುಗಳಿಂದ ಮತ್ತಷ್ಟು ಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗುತ್ತದೆ. ಈಗಾಗಲೇ ಮಳೆಯ ಪ್ರಮಾಣ ಕಡಿಮೆಯಾಗಿ ಬಯಲು ಪ್ರದೇಶವಾಗುತ್ತಲಿದೆ. ಬೇಸಿಗೆ ಕಾಲವಂತೂ ಬಳ್ಳಾರಿ ಜಿಲ್ಲೆಯಷ್ಟೆ ಬಿಸಿಲಿನ ತಾಪಮಾನವಿದ್ದು, ಬೇಸಿಗೆಕಾಲ ಯಾತನಾಮಯವಾಗಿದೆ. ನಮ್ಮ ದೇಶದ ದುರಂತವೆಂದರೆ, ನಮ್ಮ ನಾಯಕರುಗಳಿಗೆ ಸಾಮಾನ್ಯ ಜನರ ಜೀವನ ಅವರ ಬವಣೆಗಳು ಅವರ ಹತ್ತಿರವೂ ಸುಳಿಯುವುದಿಲ್ಲ.
ಪ್ರತಿಯೊಬ್ಬ ಮಂತ್ರಿಯೂ ಅವರವರ ಪ್ರತಿಷ್ಠೆಗೆ ಅವರವರ ಜಿಲ್ಲೆಗೆ ವಿಮಾನ ನಿಲ್ದಾಣ ಮಾಡಲು ಹೊರಟರೆ, ಎಲ್ಲಾ ಜಿಲ್ಲೆಗಳ ನಿರ್ಮಾಣಕ್ಕೂ ಸಾವಿರಾರು ಎಕರೆ ಕೃಷಿ ಭೂಮಿ, ಅರಣ್ಯ ನಾಶಗಳು ಶುರುವಾಗುತ್ತವೆ. ಕೃಷಿ ಹೈನುಗಾರಿಕೆಯಿಂದ ಜೀವನ ನಡೆಸುತ್ತಿರುವ ಜನಸಾಮಾನ್ಯರು ನಗರಗಳತ್ತ ವಲಸೆ ಹೋಗುತ್ತಾರೆ.
ಇದೇ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಸೋಗಾನೆ ಊರಿನಕೆರೆ ಭಾಗಶಃ ಒತ್ತವರಿಯಾಗಿ, ಉಳಿದ ಕೆರೆಯಲ್ಲಿ ಜೊಂಡು ಬೆಳೆದು ಕಸದಿಂದ ತುಂಬಿ ಕೆರೆ ಮಾಯವಾಗಿ ನಿರರ್ಥಕವಾಗಿ ಉಪಯೋಗಕ್ಕೆ ಬಾರದೆ, ಕೃಷಿಗೆ ಹಳ್ಳಿಯಲ್ಲಿ ಸಿಗುತ್ತಿದ್ದ ನೀರೂ ಸಹ ಇಲ್ಲವಾಗಿದೆ. ನಮ್ಮ ಜೀವನದ ಮೂಲಭೂತ ಅವಶ್ಯಕತೆಯಾದ ನೀರಿಗೆ ಬರಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಮೊದಲು ಜನಸಾಮಾನ್ಯರು ನಾಯಕರುಗಳ ಚಿಂತನೆ ಪುನರ್ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
- ಕಳಸಾಪುರ ಕೃಷ್ಣಮೂರ್ತಿ, ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.