ವರದಿಗೆ ವಿರೋಧವೇಕೆ?
ಸರ್ಕಾರಿ ಭೂ ಒತ್ತುವರಿ ಕುರಿತಂತೆ ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು ಎಂಬ ಉಭಯ ಸದನಗಳ ಕೆಲ ಶಾಸಕರ ಒತ್ತಾಯವು ತುಂಬಾ ಹಾಸ್ಯಾಸ್ಪದವೆನಿಸುತ್ತಿದೆ. ಮಾನ್ಯ ಶಾಸಕರೇ, ಕುಂಬಳಕಾಯಿ ಕಳ್ಳ ಎಂದರೆ ತಾವೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ ಎಂಬುದು ನಮಗರ್ಥವಾಯಿತು ಬಿಡಿ. ಇಷ್ಟಕ್ಕೂ ಸರ್ಕಾರಿ ಭೂಮಿ ಒತ್ತುವರಿಯಲ್ಲಿ ತಮ್ಮ ಕೈಚಳಕವಿರದಿದ್ದರೆ, ಪರರ ಚಿಂತೆ ತಮಗ್ಯಾಕೆ ಸ್ವಾಮಿ? ಸರ್ಕಾರಿ ಭೂಮಿ ಎಂಬುದು ಕೇವಲ ಸರ್ಕಾರದ ಸ್ವತ್ತಲ್ಲ, ಅದು ಸಾರ್ವಜನಿಕರ ಸ್ವತ್ತು. ಮತದಾರ ಪ್ರಭುವಿನ ಕೃಪಾಕಟಾಕ್ಷದಿಂದ ಚುನಾಯಿತರಾದ ತಾವುಗಳು, ಆತನ ಬೆನ್ನಿಗೇ ಚೂರಿ ಹಾಕುವುದು ತರವೇ? ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಯಿತು ಅಲ್ಲವೇ? ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳೇ ಪ್ರಭುಗಳು. ಅವರಿಗೆ ಎರಡು ಬಗದರೆ ದೇವರು ಮೆಚ್ಚುವನೇ? ಒತ್ತುವರಿ ಕುರಿತ ವರದಿಯನ್ನು ಬಾಲಸುಬ್ರಮಣಿಯನ್ ಸಲ್ಲಿಸಲಿ ಬಿಡಿ. ಅವರ ಕರ್ತವ್ಯವನ್ನು ಅವರು ಮಾಡುತ್ತಿದ್ದಾರೆ. ತಾವುಗಳು ಶುದ್ಧಹಸ್ತರಾಗಿದ್ದರೆ, ವರದಿಯೆಡೆಗೆ ಆತಂಕಗೊಳ್ಳದೇ ತಮ್ಮ ಕಾರ್ಯದಲ್ಲಿ ತಾವು ನಿರತರಾಗಿ. ತಾವುಗಳು ಬಾಲಸುಬ್ರಮಣಿಯನ್ ಸಲ್ಲಿಸಿರುವ ಸರ್ಕಾರಿ ಭೂ ಒತ್ತುವರಿ ವರದಿ ವಿರುದ್ಧ ಹಕ್ಕುಚ್ಯುತಿಯನ್ನು ಮಂಡಿಸಲು ಒತ್ತಾಯಿಸುತ್ತಿರುವಿರಿ?
-ಸಂಗೀತ ಯಡ್ರಾಮಿ, ಅರಕೇರಾ
ಮಾಹಿತಿ ಹಕ್ಕಿನ ಮೌಲ್ಯವನ್ನೇ ಕುಗ್ಗಿಸುವ ಯತ್ನ
ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಪಾರದರ್ಶಕ ಮಾಹಿತಿಯನ್ನು ನೀಡುವ "ಮಾಹಿತಿ ಹಕ್ಕು ಕಾಯ್ದೆ"ಯಿಂದ ರಾಜಕೀಯ ಪಕ್ಷಗಳು ನುಣುಚಿಕೊಳ್ಳುವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡು ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವುದು ಮಾಹಿತಿ ಹಕ್ಕಿನ ಮೌಲ್ಯವನ್ನೇ ಕ್ರಮೇಣವಾಗಿ ಕುಗ್ಗಿಸುವ ಯತ್ನವಾಗಿದೆ. ಈ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತೇವೆ, ಸುಭಿಕ್ಷವನ್ನಾಗಿಸುತ್ತೇವೆ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳ ಮಾಹಿತಿಯನ್ನು ಕೇಳುವ ಹಕ್ಕು ನಮ್ಮ ದೇಶದ ಪ್ರಜೆಗಳಿಗಿಲ್ಲವಾದರೆ ನಮ್ಮ ದೇಶದ ಪ್ರಜೆಗಳನ್ನಾಳುವ ಹಕ್ಕು ಈ ರಾಜಕೀಯ ಪಕ್ಷಗಳಿಗೆ ಹೇಗಿದೆ?
-ಆರ್.ಸಿ. ಪರಶುರಾಮ್, ಶಿಕಾರಿಪುರ
ಇನ್ನು ಮಾಹಿತಿ ನೀಡುವಂತಿಲ್ಲ!?
ಇನ್ನು ಮುಂದೆ ರಾಜಕೀಯ ಪಕ್ಷಗಳ ಮಾಹಿತಿಗಳನ್ನು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಕೇಳಿದರೆ ಸಿಗುವುದಿಲ್ಲವಂತೆ. ಇದು ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿನ ಮಹತ್ವದ ತೀರ್ಪಾಗಿದೆ. ತಾವು/ತಮ್ಮ ಪಕ್ಷ ಯಾವ ಯಾವ ರೀತಿಯಲ್ಲಿ ನುಣುಚಿಕೊಳ್ಳಲು ಸಾಧ್ಯವೋ ಅಲ್ಲಲ್ಲಿ ಇಂತಹ ತೀರ್ಪುಗಳು. ಜನಸಾಮಾನ್ಯರು ರಾಜಕೀಯ ಪಕ್ಷಗಳ ಮಾಹಿತಿ ಬಗ್ಗೆ ಇನ್ನು ಮುಂದೆ ಕೇಳುವಂತಿಲ್ಲ. ಕೇಳಿದರೂ ಮಾಹಿತಿ ನೀಡುವ ಬಗ್ಗೆ ಖಚಿತ ಉತ್ತರವಿಲ್ಲ. ಸಾರ್ವಜನಿಕರು ಯಾವುದೇ (ಕೆಲವೊಂದು ಹೊರತುಪಡಿಸಿ) ಮಾಹಿತಿಯನ್ನು ಆರ್ಟಿಐಯಿಂದ ಸುಲಭವಾಗಿ ಪಡೆಯಬಹುದು. ತಮ್ಮ ವೇತನ ಮತ್ತು ಮತ್ತಿತರ ಸೌಲಭ್ಯಗಳ ಬಗ್ಗೆ ಯಾವುದೇ ಪಕ್ಷಪಾತವಿಲ್ಲದೇ ಒಕ್ಕೊರಲಿನಿಂದ ಮೇಜು ತಟ್ಟಿ ಬಹುಮತ ಸೂಚಿಸುವ ಮಂತ್ರಿಗಳು/ಸಂಸದರು/ಶಾಸಕರು/ ಶ್ರೀಸಾಮಾನ್ಯರ ಜನಹಿತ ಕಾಳಜಿ ಬಗ್ಗೆ ಯಾರೊಬ್ಬರೂ ಇದುವರೆಗೂ ಮೇಜು ಕುಟ್ಟಿ ಬಹುಮತದಿಂದ ಶಾಸನ ಜಾರಿಗೊಳಿಸಿಲ್ಲ. ಈಗ ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಅಧಿನಿಯಮದಿಂದ ನುಣ್ಣಗೆ ನುಣುಚಿಕೊಂಡವು. ಇದರಿಂದ ಭ್ರಷ್ಟಾಚಾರ ಇನ್ನೂ ಹೆಚ್ಚಾದಂತಾಗುವುದಿಲ್ಲವೇ? ಒಟ್ಟಿನಲ್ಲಿ ತಮ್ಮ/ತಮ್ಮ ಪಕ್ಷಗಳ ಹಿತಕ್ಕಾಗಿ ಕಾನೂನನ್ನೇ ತಿರುಚಿ ಬಿಡುವಂತಹವರು ನಮ್ಮ ಜನಪ್ರತಿನಿಧಿಗಳು.
-ಜೆ.ಆರ್. ಆದಿನಾರಾಯಣಮುನಿ, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

