ಹುತಾತ್ಮ ಯೋಧನ ಕುಟುಂಬಕ್ಕೆ ಸಲಾಂ
'ಪರಿಹಾರ ಬೇಡವೆಂದ ಯೋಧನ ಕುಟುಂಬ' ಆಗಸ್ಟ್ 8ರ ಕ.ಪ್ರ.ದಲ್ಲಿ ಬಾಕ್ಸ್ನಲ್ಲಿ ಪ್ರಕಟಗೊಂಡಿರುವ ವರದಿಯನ್ನೋದಿದಾಗ, ಎಂಥಹ ನಿರಭಿಮಾನಿಗೂ ದೇಶದ ಬಗ್ಗೆ ಪ್ರೇಮ ಮೂಡಬಹುದು. ಕೇವಲ ಹಣವೇ ಎಲ್ಲವೂ ಎಂಬಂಥ ಕಾಲದಲ್ಲಿ ದೇಶಕ್ಕಾಗಿ, ಪಾಕ್ಸೈನಿಕರ ಗುಂಡಿಗೆ ಬಲಿಯಾದ ಬಿಹಾರದ ವಿಜಯಕುಮಾರ್ರೈ ಕುಟುಂಬ ಸರ್ಕಾರದ 10 ಲಕ್ಷ ಹಣವನ್ನು (ಪರಿಹಾರದ ಹಣ) ವಾಪಸ್ ಮಾಡಿದ್ದಲ್ಲದೇ, ನಮಗೆ ಹಣ ಬೇಡ, ಆದರೆ ಪಾಕಿಸ್ತಾನದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ! ನಮ್ಮ ದೇಶದಲ್ಲಿ ಇಂತಹ ದೇಶಪ್ರೇಮಿಗಳಿರುವುದರಿಂದಲೇ ಶತ್ರುಗಳಿಂದ ಯಾವುದೇ ರೀತಿಯ ಅಪಾಯ ಬಂದರೂ ತಡೆದುಕೊಳ್ಳುವ ಶಕ್ತಿಯಿದೆ. ಇಂತಹ ವೀರ ಯೋಧನೊಬ್ಬನನ್ನು ದೇಶಕ್ಕೆ ಸಮರ್ಪಣೆ ಮಾಡಿದ ಆ ಕುಟುಂಬಕ್ಕೆ ಈ ದೇಶದ ಪ್ರಜೆಗಳೆಲ್ಲರೂ ಒಂದು ದೊಡ್ಡ ಸೆಲ್ಯೂಟ್ ಹೊಡೆಯಲೇಬೇಕು. ನಮ್ಮನ್ನಾಳುವ ದೊರೆಗಳು, ಅಂದರೆ ಈ ದೇಶದ ಸಂಸದರು, ತಮ್ಮ ಸಂಬಳ, ವೇತನ ಭತ್ಯೆ, ಸಾರಿಗೆ ಸೌಲಭ್ಯ ಇನ್ನೂ ಮುಂತಾದವುಗಳನ್ನು ಹೆಚ್ಚು ಮಾಡಿಕೊಂಡಾಗ ಸಂಸತ್ತಿನಲ್ಲಿ ಯಾವುದೇ ಸದ್ದು ಗದ್ದಲವೇ ಇರುವುದಿಲ್ಲ. ಅಲ್ಲಿ ಅವರಿಗೆ ಹಣ ಪ್ರಾಮುಖ್ಯವಾಗಿರುತ್ತದೆ. ಆದರೆ ಇಲ್ಲಿ ಬದುಕಿ ಬಾಳಬೇಕಾದ ಒಂದು ಜೀವವೇ ಹೋದರೂ ಆ ಕುಟುಂಬಕ್ಕೆ ಹಣ ಪ್ರಾಧಾನ್ಯವಾಗದೇ 'ಶತ್ರುಗಳನ್ನು ಬಗ್ಗು ಬಡಿಯಿರಿ, ಈ ದೇಶವನ್ನು ಶತ್ರುಗಳಿಂದ ಕಾಪಾಡಿ' ಎಂಬುದೇ ಮುಖ್ಯವಾಗುತ್ತದೆ. ಈಗಲಾದಲೂ ನಮ್ಮನ್ನಾಳುತ್ತಿರುವ ದೊರೆಗಳೇ ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಿ. ಹುತಾತ್ಮ ಯೋಧನ ಕುಟುಂಬ ನಿಮಗೆ ಮಾದರಿಯಾಗಲಿ. ಪತ್ರಿಕೆ ಮೇಲೂ ಒಂದು ಮುನಿಸಿದೆ. ಮುಖಪುಟದಲ್ಲಿ ಬರಬೇಕಿದ್ದ ಈ ವಿಷಯ ಒಳಪುಟದಲ್ಲಿ ಪ್ರಕಟವಾಗಿದೆ. ಅದಕ್ಕಾಗಿ ಬೇಜಾರು.
- ಬ್ಯಾಂಕ್ ಶಿವಕುಮಾರ್, ಮೈಸೂರು
ಈ ಶಾಂತಿಪ್ರಿಯತೆ ಬೇಕೆ?
ದಿನಾಂಕ 07.08.2013ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಭಾರತ ಯೋಧರ ಹತ್ಯೆ ಎಂಬ ಸುದ್ದಿಯನ್ನು ಓದಿ ನಾವು ಭಾರತೀಯರು ಎಷ್ಟು ದಯಾಮಯರು ಎಂದು ತಿಳಿಯಿತು. ಹಿಂದೆ ಇದೇ ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರ ತಲೆ ಕಡಿದು ನಮ್ಮ ದೇಶಕ್ಕೆ ಎಸೆದು ಹೋಗಿರುತ್ತಾರೆ. ನಮ್ಮ ದೆಹಲಿ ನಾಯಕರು, ಮೇಲಿನ ಕೃತ್ಯವನ್ನು ಭಯೋತ್ಪಾದಕರು ಮಾಡಿದ್ದೆಂದೂ, ಪಾಕಿಸ್ತಾನಿಯ ಯೋಧರು ಮಾಡಿಲ್ಲವೆಂದು ಹೇಳಿಕೆಯನ್ನು ಕೊಟ್ಟಿದ್ದಾರೆ. ಅನೇಕ ದಶಕಗಳಿಂದ ಪಾಕಿಸ್ತಾನದ ಸೈನಿಕರಿಂದ ನಮ್ಮ ದೇಶದ ಗಡಿ ಉಲ್ಲಂಘನೆ ನಮ್ಮ ಸೈನಿಕರ ಹತ್ಯೆ ನಡೆಯುತ್ತಿದ್ದರೂ, ಪಾಕಿಸ್ತಾನದ ವಿಚಾರದಲ್ಲಿ ದಯಾಪರತೆಯನ್ನು ತೋರಿಸುತ್ತಿದ್ದಾರೆ. ನಮ್ಮ ದೇಶದ ಯುವಪೀಳಿಗೆ ಮತ್ತು ಸೈನಿಕರಿಗೆ, ಹಿಮಾಲಯದ ವಿಷಮ ಪರಿಸ್ಥಿತಿಯಲ್ಲಿ ನಮ್ಮ ದೇಶಕ್ಕಾಗಿ ಪ್ರಾಣ ಕೊಟ್ಟು ದೇಶವನ್ನು ಕಾಪಾಡುತ್ತಿರುವ ದೇಶದ ವಿವಿಧ ರಕ್ಷಣಾಧಿಕಾರಿಗಳಿಗೆ, ಆತ್ಮಸ್ಥೈರ್ಯ, ದೇಶಾಭಿಮಾನ ತುಂಬುವ ಬದಲು ಆವರ ಆತ್ಮಸ್ಥೈರ್ಯವನ್ನು ಮತ್ತು ನಮ್ಮ ರಕ್ಷಣಾ ವ್ಯವಸ್ಥೆಯ ಬಗ್ಗೆ ನಿರುತ್ಸಾಹವನ್ನು ನಿರಾಭಿಮಾನವನ್ನು ನಮ್ಮ ನಾಯಕರು ತುಂಬುತ್ತಿದ್ದಾರೆ. ನಮ್ಮ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೈನಿಕರಾಗಲೀ, ಅತ್ಯುನ್ನತ ಮಟ್ಟದ ಅಧಿಕಾರಿಗಳೂ ಸಹ ಅಧಿಕಾರಸ್ಥ ಮುಖಂಡರಿಗೆ ವ್ಯತಿರಿಕ್ತವಾಗಿ ಹೇಳಿಕೆಗಳನ್ನು ಕೊಟ್ಟರೆ, ಅವರ ಅಧಿಕಾರ ಮೊಟಕುಗೊಳಿಸುವ ಕಾರ್ಯ ನಮ್ಮ ದೇಶದಲ್ಲಿ ಚೆನ್ನಾಗಿ ನಡೆಯುತ್ತಿದೆ. ಈಶಾನ್ಯ ಭಾರತದಲ್ಲಿ ಗಡಿ ಉಲ್ಲಂಘನೆಯಾದರೆ ವಾಯವ್ಯದಲ್ಲಿ ಪಾಕಿಸ್ತಾನಿ ಯೋಧರ ಆಕ್ರಮಣದಿಂದ ನಮ್ಮ ಸೈನಿಕರ ಹತ್ಯೆಗೆ ಪ್ರತಿಯಾಗಿ ನಾವು ತೋರುತ್ತಿರುವ ದಯಾಪ್ರಿಯತೆ ಮತ್ತು ಶಾಂತಿಮಂತ್ರ ನಮ್ಮ ದುರ್ಬಲತೆಯಲ್ಲದೇ ಮತ್ತೇನು? ನಮ್ಮ ರಾಷ್ಟ್ರದ ಮೇಲೆ ಶತಮಾನಗಳಿಂದಲೂ ಆಕ್ರಮಣ ನಡೆದಿದೆ, ನಡೆಯುತ್ತಿದೆ. ಇನ್ನು ನಡೆಯುತ್ತದೆ ಅದಕ್ಕೆ ಕೊನೆಯಿಲ್ಲ.
- ಕೆ.ಎಸ್.ಕೃಷ್ಣಮೂರ್ತಿ, ವಿ.ವಿ. ಮೊಹಲ್ಲಾ, ಮೈಸೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

