ರಾಜ್ಯಪಾಲರ ಆಕ್ರೋಶ, ಪ್ರತಿಕ್ರಿಯೆ ಇಲ್ಲ
ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲಿ, ಅದರಲ್ಲೂ ಬೆಂಗಳೂರು ನಗರದಲ್ಲಿ ಈಗ ಕಂಡುಬರುತ್ತಿದೆ ಎನ್ನಲಾದ ಶೈಥಿಲ್ಯದ ಪರಿಸ್ಥಿತಿಯನ್ನು ಕುರಿತು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಒಂದು ಸಮಾರಂಭದಲ್ಲಿ ಬಹಿರಂಗವಾಗಿಯೇ ವ್ಯಕ್ತಪಡಿಸಿರುವ ಆಕ್ರೋಶಕ್ಕೆ ರಾಜ್ಯ ಸರ್ಕಾರ ತನ್ನ ಪ್ರತಿಕ್ರಿಯೆಯನ್ನು ನೀಡಿಲ್ಲ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯಪಾಲರ ಹೇಳಿಕೆಗಳ ಪತ್ರಿಕಾ ವರದಿಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಲು ನಿರಾಕರಿಸಿದ್ದಾರೆ. ರಾಜ್ಯಪಾಲರ ಆಕ್ರೋಶ ಈ ವಿಚಾರದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲ ಬಾರಿ ಏನೂ ಅಲ್ಲ.
ಹಿಂದೆಯೂ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಅವರು ಅಂತರಂಗದ ಕೂಟಗಳಲ್ಲಿ ತಮ್ಮ ಅತೃಪ್ತಿಯನ್ನು ಪ್ರಕಟಿಸಿದ್ದೂ ಉಂಟು. ನಿಜ. ಚುನಾವಣೆಯ ಅನಂತರ ಸರ್ಕಾರದಲ್ಲಿ ಆಡಳಿತ ಸೂತ್ರಗಳನ್ನು ಹಿಡಿದ ಪಕ್ಷದ ಬದಲಾವಣೆಯಾದಾಗ, ಅಧಿಕಾರಿಗಳೂ ಅದಲು-ಬದಲಾಗುವುದು ಸಹಜವೇ. ಆದರೆ ಈ ಪ್ರಕ್ರಿಯೆಗೆ ಸಾಮೂಹಿಕ ವರ್ಗಾ-ವರ್ಗಿಯ ಸ್ವರೂಪ ಕಂಡುಬಂದಾಗ, ಸಾಮಾನ್ಯ ಜನರಲ್ಲೂ ಆಕ್ರೋಶ ಮೂಡುವುದು ಸಹಜ. ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವರ್ಗಿಗೆ ಇರುವ ಮಂಡಳಿಯ ವ್ಯವಸ್ಥೆಯನ್ನು ಸರ್ಕಾರ ಕಡೆಗಾಣಿಸಬಾರದು. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಬಹಿರಂಗವಾಗಿ ತಮ್ಮ ಪ್ರತಿಕ್ರಿಯೆಯನ್ನು ಪ್ರಕಟಿಸದೇ ಹೋದರೂ, ಅಂತರಂಗದಲ್ಲಿ, ವರ್ಗಾವರ್ಗಿಯ ಪರಿಣಾಮವನ್ನು ಪರಿಶೀಲಿಸಿ, ಕಾಯಿದೆ ಪಾಲನೆ ವ್ಯವಸ್ಥೆಯನ್ನು ಭದ್ರಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

