ಸಂಪಾದಕೀಯ

ಚುಕ್ಕಾಣಿ ಹಿಡಿದ ರಾಹುಲ್: ಕಾಂಗ್ರೆಸ್ ಚಹರೆ ಮಾರ್ಪಾಡು

Published On :

ಸಂಸತ್ತಿನ ಅಧಿವೇಶನವನ್ನು, ಲೋಕಪಾಲ ವಿಧೇಯಕ ಅಂಗೀಕೃತವಾದ ಕೂಡಲೇ ಮುಂದಕ್ಕೆ ಹಾಕುವುದರ ಹಿಂದೆ ಸ್ಪಷ್ಟವಾಗಿ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ "ಸರ್ವಶಕ್ತ ನಾಯಕ" ರಾಹುಲ ಗಾಂಧಿ ಅವರ ಮುದ್ರೆ ಕಾಣಿಸಿಕೊಂಡಿದೆ. ಇದರಲ್ಲಿ ಅನುಮಾನವೇ ಇಲ್ಲ.  ರಾಹುಲ ಗಾಂಧಿ ಅವರ ನಿರ್ಧಾರ ಕೇವಲ ಸಂಸತ್ತಿನ ಈಗಿನ ಅಧಿವೇಶನವನ್ನು ಮೊಟಕುಗೊಳಿಸುವುದಕ್ಕೇ ಸೀಮಿತವಲ್ಲ. ಅದರ ಮುಂದಿನ ಭಾಗವಾಗಿ ಜನವರಿಯಲ್ಲಿ ವಿಶೇಷ ಅಧಿವೇಶನವನ್ನೇ ನಡೆಸಿ ಕೆಲವು ಜನಪ್ರಿಯ ಕಾರ್ಯಕ್ರಮಗಳಿಗೆ ಶಾಸನದ ಅಧಿಕೃತ ಬೆಂಬಲ ನೀಡುವ ನಿರ್ಧಾರವೂ ಅಡಗಿದೆ.
  ರಾಜಕೀಯ ಚಲನ ವಲನಗಳನ್ನು ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡುವುದನ್ನೇ ಒಂದು ಪ್ರಮುಖ ಹವ್ಯಾಸವನ್ನಾಗಿ ಮಾಡಿಕೊಂಡಿರುವವರ ಪ್ರಕಾರ, ರಾಹುಲ ಗಾಂಧಿ ಅವರ ಈಗಿನ ಕ್ರಮ ನಿಸ್ಸಂದೇಹವಾಗಿ ಕಾಂಗ್ರೆಸ್ ಹಾಗೂ ಸರ್ಕಾರದ ಮೇಲಿನ ನಿಯಂತ್ರಣ ಸ್ಥಾಪಿಸುವುದನ್ನು ಜಾಹೀರು ಮಾಡುವಂತಹದ್ದೇ.
  ಕಳೆದ ಕೆಲವು ವಾರಗಳಿಂದಲೂ ಪ್ರಧಾನಿ ಮನಮೋಹನ ಸಿಂಗ್ ಅವರು ಪ್ರಮುಖ ಸನ್ನಿವೇಶಗಳಲ್ಲಿ ಸರ್ಕಾರದ ನಿಲವನ್ನು ವಿವರಿಸುವ ರೀತಿಯಲ್ಲಿ ಮಾತನಾಡಿರುವುದೇ ಕಡಿಮೆ. ಅದೇ ರೀತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಮೌನವ್ರತ ಹಿಡಿದಂತೆ ಕಂಡುಬರುತ್ತಿದೆ.
  ಉತ್ತರ ಭಾರತದ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಪರಾಭವ ಕುರಿತು ಸೋನಿಯಾ ಗಾಂಧಿ ನೀಡಿದ ಪ್ರತಿಕ್ರಿಯೆಯಲ್ಲಿ,  ಪಕ್ಷದ ಸಂದೇಶವನ್ನು ಜನರಿಗೆ ತಲುಪಿಸುವುದರಲ್ಲಿ ತಾವು (ಅಂದರೆ ಕಾರ್ಯಕರ್ತರು) ವಿಫಲರಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
  ಅದರ ನಿಜವಾದ ಸಂದೇಶ ಎಂದರೆ, ಮುಂದಿನ ಲೋಕಸಭೆ ಚುನಾವಣೆಯ ಪ್ರಚಾರ ಸಮರದಲ್ಲಿ ಕಾಂಗ್ರೆಸ್ಸಿಗೆ ಒಂದು ನೂತನ ಸಮರ್ಥ ಪ್ರಚಾರ ಪಡೆಯ ಅಗತ್ಯವಿದೆ ಎನ್ನುವುದು. ಸೋನಿಯಾ ಗಾಂಧಿ, ಆ ಮಾತನ್ನು ಹೇಳಿದ ನಂತರ ಸುಮ್ಮನಾಗಿದ್ದಾರೆ. ಪಕ್ಷದ ಉಪಾಧ್ಯಕ್ಷ ರಾಹುಲ ಗಾಂಧಿ ಕಾಂಗ್ರೆಸ್ಸಿನ ಪರವಾಗಿ ಹಾಗೂ ಸರ್ಕಾರದ ಪರವಾಗಿಯೂ ಮಾತನಾಡುತ್ತಿರುವುದು ಗಮನಾರ್ಹ.
  ಆದರೆ ಅವರು ಎಚ್ಚರಿಕೆಯಿಂದಲೇ ಮಾತನಾಡುತ್ತಿರುವುದೂ ನಿಜ. ಕೇಂದ್ರದಲ್ಲಿನ ಸಂಗಾತಿ ಪಕ್ಷಗಳ ಸಚಿವರ ಅಧೀನದ ಇಲಾಖೆಗಳ ವಿಚಾರ ಪ್ರಸ್ತಾಪ ಮಾಡುತ್ತಿಲ್ಲ. ಸರ್ವೇಸಾಮಾನ್ಯವಾಗಿ ಭ್ರಷ್ಟಾಚಾರ ದೇಶದ ರಕ್ತ ಹೀರುತ್ತಿದೆ ಎನ್ನುವ ಮಾತುಗಳನ್ನಷ್ಟೇ ಆಡುತ್ತಿರುವುದು.  ಆದರೆ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದಂತೆ ರಾಹುಲ ಗಾಂಧಿ ಅವರ ನಿರ್ಧಾರಗಳು ದಿಢೀರನೆ ಜಾರಿಗೆ ಬರುತ್ತಿವೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಪರಿಸರ ಹಾನಿಯ ವಿರುದ್ಧ ರಕ್ಷಣೆ ನೀಡಲು ಅನೇಕ ಕ್ರಮಗಳನ್ನು ಸೂಚಿಸಿರುವ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯ ವರದಿ, ಸರ್ಕಾರದ ಪರಿಶೀಲನೆಯಲ್ಲಿರುವಾಗಲೇ, ಸಹಾಯಕ ಸಚಿವೆ, ಚತುರಮತಿ, ವಾಗ್ಮಿತೆಗೆ ಹೆಸರಾದ ಜಯಂತಿ ನಟರಾಜನ್ ಅವರು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ, ಚುನಾವಣೆ ಸಂಬಂಧದಲ್ಲಿ ಪಕ್ಷದ ಕೆಲಸಕ್ಕೆ ಹಾಜರಾಗುವುದನ್ನು ಪ್ರಕಟಿಸಿದ್ದಾರೆ.  ಅವರ ರಾಜಿನಾಮೆಯನ್ನು ದಿಢೀರನೆ ರಾಷ್ಟ್ರಪತಿ ಒಪ್ಪಿದ್ದನ್ನು ನೋಡಿದರೆ, ಇದಕ್ಕೆ ಪೂರ್ವಸಿದ್ಧತೆ ನಡೆದಿತ್ತು ಎನ್ನುವುದು ಸ್ಪಷ್ಟ.
  ಹೆಚ್ಚು ಕಡಿಮೆ ಅದೇ ಸಮಯದಲ್ಲೇ ಕಂಪ್ಯೂಟರ್ ಚತುರ ಜೈರಾಮ್ ರಮೇಶ್ ಅವರೂ ಎಐಸಿಸಿ ಕಾರ್ಯಾಲಯಕ್ಕೆ ಬರುವ ಸುದ್ದಿಯನ್ನು ಹಬ್ಬಿಸಲಾಗಿದೆ. ಉಳಿದಂತೆ ಸದ್ದು ಗದ್ದಲವಿಲ್ಲದೇ ಕೆಲಸ ಮಾಡುತ್ತಿರುವ ರಾಹುಲ ಬ್ರಿಗೇಡ್‌ನ ಜ್ಯೋತಿರಾದಿತ್ಯ ಸಿಂಧ್ಯ, ಸಚಿನ್ ಪೈಲಟ್ ಹಾಗೂ ಇತರರೂ ರಾಹುಲ ರಥವನ್ನು ಹತ್ತುವ ಸಂಭವವಿದೆ. ಈಗಾಗಲೇ ಜನವರಿ ಹದಿನೇಳಕ್ಕೆ (ಸಂಕ್ರಮಣ ಕಳೆದ ನಂತರ) ದೆಹಲಿಯಲ್ಲಿ ಎಐಸಿಸಿ ಅಧಿವೇಶನವನ್ನು ಕರೆಯಲು ನಿರ್ಧರಿಸಲಾಗಿದೆ. ಆ ವೇಳೆಗೆ ರಾಹುಲ ಬ್ರಿಗೇಡ್ ಹಾಗೂ ಅದನ್ನು ನಿಯಂತ್ರಿಸುವ ಚಿಂತನ ಚಾವಡಿ, ಪಕ್ಷದ ಪರವಾಗಿ ಸರ್ಕಾರದಲ್ಲಿ ಯಾರಿರಬೇಕು, ಕಾಂಗ್ರೆಸ್ ಸಂಘಟನೆಯಲ್ಲಿ ಯಾರಿರಬೇಕು, ಚುನಾವಣೆ ಪ್ರಚಾರ ರಥದಲ್ಲಿ ಇರುವವರು ಯಾರು ಎನ್ನುವುದನ್ನೆಲ್ಲ ನಿರ್ಧರಿಸಿರುತ್ತದೆ.
  ಈಗಾಗಲೇ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಕೂಟದಿಂದ ಹೊರಗೆ ಬಿದ್ದಿರುವ ದ್ರಾವಿಡ ಮುನ್ನೇಟ್ರ ಕಳಗಂ ನಾಯಕ ಕರುಣಾನಿಧಿ ಅವರ ಜತೆ ಸಂಪರ್ಕ ಪೂರ್ತಿಯಾಗಿ ಕಡಿದು ಹೋಗದಂತೆ ನೋಡಿಕೊಳ್ಳುವ ಹೊಣೆಯನ್ನು ಜಯಂತಿ ನಟರಾಜನ್ ಅವರಿಗೆ ವಹಿಸಲಾಗಿದೆ. ಇತರ ಪಕ್ಷಗಳಲ್ಲಿ, ಶರದ್ ಪವಾರ್ ಅವರ ಜತೆ ಸಮಾನ ಹಂತದಲ್ಲಿ ನಿಂತು ಮಾತನಾಡಬಲ್ಲ ಹಿರಿಯರ್ಯಾರೂ ಈಗ ಕಾಂಗ್ರೆಸ್ಸಿನಲ್ಲಿ ಇಲ್ಲ. ವಾಸ್ತವದಲ್ಲಿ ಈಗ ಕಾಂಗ್ರೆಸ್ಸಿನಲ್ಲಿ ಹಿರಿಯ ನಾಯಕರ ಕೊರತೆ ಎದ್ದು ಕಾಣುತ್ತಿದೆ.  ರಾಹುಲ ಗಾಂಧಿ ಅವರೀಗ ಮಂದಗತಿಯಲ್ಲಿ ನಡೆಯುವುದಕ್ಕೆ ಅವಕಾಶವಿಲ್ಲ. ಇತರ ಪಕ್ಷಗಳೂ ಕೂಟಗಳ ವ್ಯವಸ್ಥೆಯನ್ನು ಭದ್ರಪಡಿಸಲು ಪ್ರಯತ್ನಗಳನ್ನು ಆರಂಭಿಸಿದ್ದರೆ, ಯಾವುದೇ ರಾಜಕೀಯ, ಆರ್ಥಿಕ ಸಿದ್ಧಾಂತಕ್ಕೂ ಬದ್ಧರಲ್ಲದ ಪ್ರಾದೇಶಿಕ ನಾಯಕರ ನಿಲವು ಪ್ರಕಟವಾಗಿಲ್ಲ.
ಮಮತಾ ಬ್ಯಾನರ್ಜಿ, ಜಯಲಲಿತಾ ಅವರನ್ನು ಅರ್ಥ ಮಾಡಿಕೊಳ್ಳುವ ಗೊಡವೆಗೇ ಕಾಂಗ್ರೆಸ್ ಹೋಗಿಲ್ಲ. ಆ ಕೆಲಸ ರಾಹುಲ ಬ್ರಿಗೇಡ್‌ಗೇ ಬಿಡುವುದೂ ಕಷ್ಟವಾದೀತು. ರಾಹುಲ ಗಾಂಧಿ ಸಂಪ್ರದಾಯ, ಹಿರಿತನವನ್ನು ಸಂಪೂರ್ಣವಾಗಿ ನಿರಾಕರಿಸುವಂತೆಯೂ ಇಲ್ಲ. ಕಾಂಗ್ರೆಸ್ಸಿನಲ್ಲಿ ಈಗ ನಾಯಕತ್ವದಲ್ಲಿ ತಲೆಮಾರಿನ ಬದಲಾವಣೆಯ ಪ್ರಕ್ರಿಯೆ ಆರಂಭವಾಗಿರುವುದಂತೂ ನಿಜ. ಅದು ಪಕ್ಷವನ್ನು ಯಾವ ಹಂತಕ್ಕೆ ಕೊಂಡೊಯ್ಯುವುದೋ ಎನ್ನುವುದನ್ನು ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.