ಬರವು ರಾಜ್ಯದ ನೆಲ ಜಲಗಳಿಗೆ ಮಾತ್ರವಾ?
ಬರ ಪರಿಸ್ಥಿತಿ ನಿರ್ವಹಣೆಗಾಗಿ ರಾಜ್ಯಕ್ಕೆ 1014 ಕೋಟಿ ರೂಪಾಯಿಗಳ ನೆರವನ್ನು ನೀಡುವಂತೆ ಕರ್ನಾಟಕ ಸರ್ಕಾರವು ಕೇಂದ್ರವನ್ನು ಕೋರಿದೆ. ಆದರೆ, ಕೋರಿದ ಈ ನೆರವಿನಲ್ಲಿ ಶಾಸಕರ ವಿದೇಶ ಪ್ರವಾಸದ ವೆಚ್ಚಕ್ಕಾಗಿ ಬೇಕಾಗಿರುವ ಹಣವೂ ಸೇರಿದೆಯಾ ಅಥವಾ ಶಾಸಕರ ಇನ್ನೂ ಎಷ್ಟೋ ತಂಡಗಳು ನಾಡಿನ ಸಮಸ್ತ ಬಡ ಜನತೆಯ ಹಿತದೃಷ್ಟಿಯಿಂದ, ಹೊರದೇಶಗಳ ಸುತ್ತಾಟಕ್ಕೆ ಹೋಗಿಬರಲೇ ಬೇಕಾಗಿರುವುದರಿಂದ, ಆ ಅತ್ಯಗತ್ಯ ಕಾರ್ಯಕ್ರಮಕ್ಕಾಗಿ ಬೇಕಾಗುವ ಎಷ್ಟೋ ಕೋಟಿ ರೂಪಾಯಿಗಳ ಅನುದಾನವೂ ಕೇಂದ್ರದಿಂದ ದೊರೆಯಲಿ ಎಂಬ ಉದ್ದೇಶದಿಂದ, ಸದ್ಯದಲ್ಲಿಯೇ ಸರ್ವಪಕ್ಷಗಳ ನಿಯೋಗವೊಂದನ್ನು ದೆಹಲಿಗೆ ಕೊಂಡೊಯ್ಯಲಾಗುವುದೋ ಎಂಬುದನ್ನು ಮುಖ್ಯ ಮಂತ್ರಿಗಳು ಹೇಳಿಲ್ಲ. 'ನೀವು ಶಾಲಾ ಮಕ್ಕಳನ್ನು ರಜೆಗೆ ಪ್ರವಾಸ ಕಳುಹಿಸುವುದಿಲ್ಲವೇ? ಅದೇ ರೀತಿ ಶಾಸಕರು, ಸಂಸದರು ಸಮಿತಿಗಳ ಮೂಲಕ ಪ್ರವಾಸ ಕೈಗೊಳ್ಳುತ್ತಾರೆ' ಹೀಗೆಂದು ವಿದೇಶೀ ಪ್ರವಾಸಾಕಾಂಕ್ಷೀ ಶಾಸಕರೊಬ್ಬರು ಅಪ್ಪಣೆಕೊಡಿಸಿದ್ದಾರೆ. ಆದರೆ, ಕರ್ನಾಟಕದ ಸಾಮಾನ್ಯ ಪ್ರಜೆಗಳ ದುರದೃಷ್ಟವೆಂದರೆ, ಪ್ರತಿವರ್ಷದ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವು ಅವರ ಅರಿವನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ಒಂದಾದ, ಶಿಕ್ಷಣದ ಭಾಗವೇ ಆಗಿರುವ ಪ್ರವಾಸವಾಗಿರುತ್ತದೆ ಹಾಗೂ ಇಡೀ ರಾಜ್ಯದ ಎಲ್ಲಾ ಶಾಲೆಗಳ ಮಕ್ಕಳ ಇಂಥಾ ಪ್ರವಾಸಗಳ ಒಟ್ಟು ವೆಚ್ಚವು, ಶಾಸಕರ ಎಲ್ಲಾ ತಂಡಗಳ ವಿದೇಶಿ ಪ್ರವಾಸಕ್ಕಾಗುವ ವೆಚ್ಚದ ಹತ್ತನೇ ಒಂದು ಭಾಗವೂ ಆಗಲಿಕ್ಕಿಲ್ಲ ಎಂಬುದು ಬಹುಶಃ ಯಾವ ಶಾಸಕರ ಅರಿವಿಗೂ ಬಾರದೇ ಇರುವುದು. ನಿಜವಾಗಿ ಬರ ಬಂದಿರುವುದು ನಮ್ಮ ರಾಜ್ಯದ ನೆಲ ಜಲಗಳಿಗೆ ಮಾತ್ರವಲ್ಲ, ನಾವೇ ಶಾಸಕರೆಂದು ಚುನಾಯಿಸಿ ವಿಧಾನಸೌಧಕ್ಕೆ ಕಳುಹಿಸಿದ ಮಹಾನುಭಾವರ ವಿವೇಕಕ್ಕೂ.
-ಬೊ.ನಾ. ಕೃಷ್ಣಮೂರ್ತಿ, ಸಾಗರ
ದುಡಿಯುವ ಕೈಗಳಿಗೆ ಉದ್ಯೋಗ ನೀಡಿ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದ ಭರವಸೆ ಆಶ್ವಾಸನೆಯಾಗಿ ಉಳಿದಿದೆ. ನಿರುದ್ಯೋಗ ನಿವಾರಣೆಗೆ ನಿರುದ್ಯೋಗಿಗಳು ಸ್ವತಃ ಅವರ ಕಾಲ ಮೇಲೆ ನಿಲ್ಲುವಂತೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. 7 ತಿಂಗಳಾದರೂ ವಿದ್ಯಾವಂತರಿಗೆ ಯಾವ ಕೆಲಸದ ಕರೆಯನ್ನು ಮಾಡಿಲ್ಲ ಹೀಗಾಗಿ ಉನ್ನತ ಶಿಕ್ಷಣ ಮುಗಿಸಿದ ಸಾವಿರಾರೂ ವಿದ್ಯಾರ್ಥಿಗಳು ಕೆಲಸಕ್ಕಾಗಿ ದಾಖಲೆಗಳನ್ನು ಹಿಡಿದು ಮಹಾನಗರಗಳಿಗೆ ಹೋಗುತ್ತಿದ್ದಾರೆ. ಕೇವಲ ಅನ್ನಭಾಗ್ಯ ಶಾದಿಭಾಗ್ಯ ಮಾಡಿದರೆ ಸಾಲದು. ಯುವಕರಿಗೆ ಉದ್ಯೋಗ ಭಾಗ್ಯ ನೀಡಬೇಕು. ನಿರುದ್ಯೋಗಿ ಯುವಕರ ಸಂಖ್ಯೆ ದೀನೆ ದೀನೆ ಹೆಚ್ಚಾಗುತ್ತಿದ್ದರು ಸಹ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಕಡೆ ಯಾವ ಗಮನವನ್ನು ಹರಿಸುತ್ತಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲವಾಗುತ್ತಿದೆ. ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಕಾರ್ಯ ಮಾಡುವುದಾದರೂ ಯಾವಾಗ?
-ವೆಂಕಟೇಶ. ಸಿ. ಭೀಮಸಮುದ್ರ, ದಾವಣಗೆರೆ ವಿಶ್ವವಿದ್ಯಾಲಯ
ಬಡವರ ಅಗ್ಗದ ಅಕ್ಕಿಗೆ ಹುಳು ಭಾಗ್ಯ
ಅಗ್ಗದ ದರದಲ್ಲಿ ಬಡವರ ಹೊಟ್ಟೆ ತುಂಬಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ 'ಅನ್ನಭಾಗ್ಯ' ಯೋಜನೆ ಬಡವರ ಪಾಲಿಗೆ 'ದೌರ್ಭಾಗ್ಯ' ಯೋಜನೆಯಾಗಿ ಪರಿಣಮಿಸಿದೆ ಎಂದರೇ ತಪ್ಪಾಗಲಿಕ್ಕಿಲ್ಲ. ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ವಿತರಿಸುವ ತರಾತುರಿಯಲ್ಲಿ ಹುಳ ಹತ್ತಿದ ಅಕ್ಕಿ ವಿತರಿಸಲಾಗುತ್ತಿದೆ. ಗೋದಾಮಿನಲ್ಲಿರುವ ಅಕ್ಕಿ ಚೀಲಗಳಲ್ಲಿನ ಅಕ್ಕಿ ಗಂಟಿಕಿ ಹುಳು ಹಿಡಿದಿದ್ದರೂ ನಾಗರಿಕ ಆಹಾರ ಸರಬರಾಜು ಇಲಾಖೆ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಬಡವರ ಆರೋಗ್ಯವನ್ನು ಉಳಿಸಲು ಸರ್ಕಾರ ಇರಬೇಕೇ ಹೊರತು ಆರೋಗ್ಯವನ್ನು ಹಾಳು ಮಾಡಲು ಅಲ್ಲ. ಇಂತಹ ಅಕ್ಕಿ ಅನ್ನ ಊಟ ಮಾಡುವುದರ ಬದಲು ಉಪವಾಸ ಇರುವುದೇ ಲೇಸು. ಸರ್ಕಾರ ಹೆಚ್ಚಿನ ಗಮನ ಹರಿಸಲಿ.
-ಶೋಭಾ. ಎಂ ಹಿರೇಮಳಗಾವಿ, ಉಜಿರೆ
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

