ಸಂಪಾದಕೀಯ

ಯಥಾಸ್ಥಿತಿ ಕಾಪಾಡುವ ಕೊಡುಗೆ ಬಜೆಟ್

Published On :

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ಭಾಷಣದಲ್ಲಿ ಸಾಧಿಸಿದ ಅತಿದೊಡ್ಡ ವಿಕ್ರಮ ಎಂದರೆ, ಇದುವರೆಗೆ ಯಾವ ವಿತ್ತಮಂತ್ರಿಯೂ ಇಷ್ಟು ಸುದೀರ್ಘವಾದ, ಭಾಷಣ ಮಾಡಿರಲಿಲ್ಲ ಎನ್ನುವುದೇ. ಪ್ರತ್ಯೇಕ ಕೃಷಿ ಬಜೆಟ್ ಹಾಗೂ ಸಾರ್ವತ್ರಿಕ ಬಜೆಟ್ ಭಾಷಣಕ್ಕೆ ಹಿಡಿದ ಅವಧಿ ಸುಮಾರು ಇನ್ನೂರು ನಿಮಿಷಗಳಿಗೂ ಹೆಚ್ಚು.
ಇದು ರಾಜ್ಯದ ಪ್ರಥಮ ಬಿಜೆಪಿ ಸರ್ಕಾರದ ಕಟ್ಟ ಕಡೆಯ ಬಜೆಟ್ ಆದ್ದರಿಂದ, ಕಳೆದ ನಾಲ್ಕು ವರ್ಷಗಳ ಸಾಧನೆಯ ವಿವರಗಳನ್ನೂ ಪ್ರಸ್ತಾಪಿಸಿದ್ದು ಭಾಷಣಕ್ಕೆ ನಿಜವಾಗಿಯೂ ತೂಕವನ್ನು ತಂದುಕೊಟ್ಟಿತ್ತು. ಜಗದೀಶ ಶೆಟ್ಟರ್ ಸಮಗ್ರ ಸ್ವರೂಪದ ಆರ್ಥಿಕ ವರದಿಯನ್ನು ನೀಡುವಾಗ ಮೂವರು ಮುಖ್ಯಮಂತ್ರಿಗಳ ಅವಧಿಯಲ್ಲಿನ ಸಾಧನೆಯನ್ನು ವಿಭಾಗಗಳಾಗಿ ವಿಂಗಡಿಸಿಲ್ಲ.
ಮೂಲತಃ ಈಗಿನ ಬಜೆಟ್‌ನ ಉದ್ದೇಶ, ಯಾವುದೇ ರೀತಿಯ ಹೊಸ ಪ್ರಯೋಗಗಳಿಗೆ ಕೈ ಹಾಕದೇ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಜನಸಾಮಾನ್ಯ ವರ್ಗಗಳಿಗೆ ಸಾಧ್ಯವಿರುವಷ್ಟೂ ಕೊಡುಗೆಗಳನ್ನು ಪ್ರಕಟಿಸುವ ಕಸರತ್ತನ್ನು ಮಾಡಿದೆ.
ಕಳೆದ ವರ್ಷದಲ್ಲಷ್ಟೇ ಸದಾನಂದಗೌಡರು ಮುಖ್ಯಮಂತ್ರಿಯಾಗಿ, ಲಕ್ಷ ಕೋಟಿ ರುಪಾಯಿಗಳ ಬಜೆಟ್ ಮಂಡಿಸಿ ವಿಕ್ರಮವನ್ನು ಸಾಧಿಸಿದ್ದರು. ಅದನ್ನು ಜಗದೀಶ ಶೆಟ್ಟರ್ ಗಟ್ಟಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿನ ಸಂಪ್ರದಾಯದಂತೆ, ಈ ವರ್ಷವೂ ರಾಜಸ್ವ ಆದಾಯ ಹಾಗೂ ವೆಚ್ಚದ ಲೆಕ್ಕದಲ್ಲಿ ಬಜೆಟ್ ಉಳಿತಾಯವನ್ನೇ ತೋರಿಸಿದೆ.
ಬಂಡವಾಳ ಸ್ವರೂಪದ ಯೋಜನಾ ವೆಚ್ಚ ಹಾಗೂ ಇತರ ಕೆಲವು ಬಾಬ್ತುಗಳಿಗೆ ಸುಮಾರು 21,532 ಕೋಟಿ ರುಪಾಯಿಗಳ ಸಾಲವನ್ನು ಎತ್ತುವ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಗೆ ರಾಜ್ಯದ ಸಾಲದ ಹೊರೆ 1,17005 ರುಪಾಯಿಗಳೆಂದು ಅಂದಾಜು ಮಾಡಿದಂತಾಯಿತು. ಕಳೆದ ವರ್ಷ ಪಾವತಿ ಮಾಡಿದ ಬಡ್ಡಿಯೇ 5500ಕೋಟಿ ರುಪಾಯಿಗಳು.
ಸರಿಯಾಗಿ ಹಣ ವಿನಿಯೋಗವಾದರೆ, ಈ ಪ್ರಮಾಣದ ಸಾಲವನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಸಾರ್ವಜನಿಕರ ಮನಸ್ಸಿನಲ್ಲಿ ಸರ್ಕಾರದ ಹಣ ಸರಿಯಾದ ರೀತಿಯಲ್ಲಿ, ನಾಗರಿಕರಿಗೆ ಗರಿಷ್ಠ ಫಲ ಸಿಗುವಂತೆ ವೆಚ್ಚವಾಗುತ್ತಿಲ್ಲವೆನ್ನುವ ಭಾವನೆ ಇದೆ. ಅದನ್ನು ಅಳಿಸಿ ಹಾಕುವ ಯಾವ ಪ್ರಯತ್ನವೂ ನಡೆದಿಲ್ಲ.
ನಿಜ. ಚುನಾವಣೆಯ ವರ್ಷದಲ್ಲಿ, ಅದರಲ್ಲೂ ರಾಷ್ಟ್ರದ - ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿನ ಪ್ರಗತಿ ಮಂದಗತಿಯಲ್ಲಿರುವಾಗ ಯಾವ ಸರ್ಕಾರವೂ ಹೊಸ ತೆರಿಗೆಗಳನ್ನು ವಿಧಿಸುವುದಿಲ್ಲ. ಈಗಿನ ತೆರಿಗೆಯ ದರಗಳನ್ನೇ ಉಳಿಸಿಕೊಂಡು, ವರ್ಷದಿಂದ ವರ್ಷಕ್ಕೆ ತಾನೇತಾನಾಗಿ ಹೆಚ್ಚಾಗುವ ಆದಾಯದ ಪ್ರಮಾಣವನ್ನೇ ಜಗದೀಶ ಶಟ್ಟರ್ ನಂಬಿರುವುದು. ಅದೇ ರೀತಿಯಲ್ಲೇ ಎಲ್ಲ ಕಲ್ಯಾಣ ಯೋಜನೆಗಳಿಗೂ ಹೆಚ್ಚು ಹಣದ ವ್ಯವಸ್ಥೆಯಾಗಿದೆ.
ಯಡಿಯೂರಪ್ಪ ಅವರ ಕಾಲದಲ್ಲಿ ಆರಂಭವಾದ ಮಠಮಾನ್ಯಗಳಿಗೆ ಉದಾರ ನೆರವು, ಸಾಂಸ್ಕೃತಿಕ ಸಂಸ್ಥೆಗಳ ಚಟುವಟಿಕೆಗೆ ಹಣದ ಸಹಾಯ ಎಲ್ಲ ಬಗೆಯ ನಿವೃತ್ತಿ - ವಿಶ್ರಾಂತಿ ವೇತನಗಳು, ಇದುವರೆಗೆ ನಡೆದುಕೊಂಡು ಬಂದಿದ್ದ ಉಡುಗೊರೆಗಳು, ಎಲ್ಲವೂ ಮುಂದುವರಿದಿವೆ.
ಈ ಕ್ರಮದಿಂದ ಜಗದೀಶ ಶೆಟ್ಟರ್ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸಿಕ್ಕಿದ್ದ ಹೊಸ ಮತ ಬ್ಯಾಂಕ್‌ಗಳ ನಿಷ್ಠೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದನ್ನೇ ಅವರ ಎದುರಾಳಿಗಳು ಚುನಾವಣೆ ಪ್ರಣಾಳಿಕೆ ಎನ್ನುವುದು.
ರಾಜ್ಯದ ಯೋಜನೆಯ ಗಾತ್ರ ರುಪಾಯಿಯ ಲೆಕ್ಕದಲ್ಲಿ ನಾಲ್ಕು ವರ್ಷಗಳಲ್ಲಿ ದುಪ್ಪಟ್ಟಾಗಿರುವುದು ಒಂದು ರೀತಿಯಲ್ಲಿ ಬಜೆಟ್ ಸಾಧನೆಯೇ. ರಾಜ್ಯದಲ್ಲಿ ಈಗ ತಲಾವಾರು ಲೆಕ್ಕದಲ್ಲಿ 6810 ರುಪಾಯಿಗಳ ಯೋಜನಾ ವೆಚ್ಚ, ದೊಡ್ಡ ರಾಜ್ಯಗಳ ಸಾಲಿನಲ್ಲಿ ರಾಜ್ಯಕ್ಕೆ ಒಳ್ಳೆಯ ಅರ್ಹತಾ ಪತ್ರ. ಆದರೆ ಅದೆಷ್ಟು ಸಫಲವಾಗಿದೆ ಎನ್ನುವುದಕ್ಕೆ ನಂಬಲರ್ಹವಾದ ದಾಖಲೆಗಳಿಲ್ಲ.
ಮನೆಗೊಂದು ಶೌಚಾಲಯ, ವಿದ್ಯಾರ್ಥಿ ನಿಲಯಗಳಲ್ಲಿನ ವೆಚ್ಚದ ಏರಿಕೆ, ಅಂಗನವಾಡಿ ನೌಕರರ ವೇತನದ ಹೆಚ್ಚಳ, ವಿಕಲ ಚೇತನರ ಮಾಸಿಕ ಭತ್ಯ ಎಲ್ಲವೂ ಹೆಚ್ಚಿರುವುದು. ಶ್ರಮಿಕರ ವಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಟ್ಟಡಗಳ ನಿರ್ಮಾಣ ಕಾರ್ಮಿಕರ ನೋಂದಣಿ ಇಂತಹ ಕ್ರಮಗಳು ಸ್ವಾಗತಾರ್ಹ.
ಏಪ್ರಿಲ್‌ನಿಂದ ರಾಜ್ಯದ ಪಡಿತರ ವ್ಯವಸ್ಥೆಯಲ್ಲಿ ಎರಡು ರುಪಾಯಿಗೊಂದು ಕೆಜಿ ಅಕ್ಕಿಯನ್ನು ಒದಗಿಸುವ ಯೋಜನೆಯನ್ನು ಒಪ್ಪಲೇಬೇಕು. ಪ್ರತಿ ಗ್ರಾಮಕ್ಕೊಂದು ಸೈಬರ್ ಕೆಫೆ ಸಾಮಯಿಕ ಯೋಜನೆ.
ಜಗದೀಶ ಶೆಟ್ಟರ್ ಮಂಡಿಸಿರುವ ಕೃಷಿ ಬಜೆಟ್‌ನ ಗಾತ್ರ 22310 ಕೋಟಿ ರುಪಾಯಿಗಳು. ಕೃಷಿ ವಲಯದಲ್ಲಿನ ಹಲವು ಮೂಲಭೂತ ಸಮಸ್ಯೆಗಳ ಪ್ರಸ್ತಾಪವೂ ಬಜೆಟ್‌ನಲ್ಲಿದೆ. ಹಿಡುವಳಿಗಳ ವಿಸ್ತೀರ್ಣ ಕುಗ್ಗುತ್ತಿದೆ. ಹಿಡುವಳಿದಾರರ ಸಂಖ್ಯೆ ಹೆಚ್ಚುತ್ತಿದೆ. ಅಂದರೆ ರೈತಸಮುದಾಯದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದೆ.
ಈ ಸಮಸ್ಯೆಯನ್ನು ಒಂದು ಬಜೆಟ್‌ನಲ್ಲಿ ಬಗೆಹರಿಸುವುದು ಸಾಧ್ಯವಿಲ್ಲ. ಈಗಿನ ಕೃಷಿ ಬಜೆಟ್‌ನಲ್ಲಿ ಬಡರೈತರಿಗೆ ಕೆಲವು ವಿನಾಯಿತಿಗಳನ್ನು ಪರೋಕ್ಷವಾಗಿ ಅಳವಡಿಸಲಾಗಿದೆ. ಕೃಷಿ ವಲಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚುವ ಸಂಭವವೂ, ಕೃಷಿ ಉದ್ಯಮ ಮೇಳದಿಂದ ಹೊರ ಹೊಮ್ಮಿದೆ. ಯಥಾಸ್ಥಿತಿಯನ್ನು ಕಾಪಾಡುವುದನ್ನಷ್ಟೇ ಈಗಿನ ರಾಜಕೀಯ ಸನ್ನಿವೇಶದಲ್ಲಿ ಜಗದೀಶ ಶೆಟ್ಟರ್ ಅವರಿಂದ ನಿರೀಕ್ಷಿಸಿದ್ದು. ಆ ನಿರೀಕ್ಷೆಯನ್ನು ಶೆಟ್ಟರ್ ಈಡೇರಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.