ಸಚಿವರಿಗೆಲ್ಲ ಮಾದರಿಯಾಗಿದ್ದ ಕಂಬಳಿ ಸಿದ್ದಪ್ಪನವರು

Updated on: 

ಕಂಬಳಿ ಸಿದ್ದಪ್ಪನವರು ಸ್ವಾತಂತ್ರ್ಯ ಪೂರ್ವದಲ್ಲಿ ಮುಂಬೈ ಸರ್ಕಾರದಲ್ಲಿ ಸಚಿವರಾಗಿ ಉತ್ತಮ ಸಾಧನೆ ಮಾಡಿದ ಅಪ್ಪಟ ಕನ್ನಡಿಗರು. ಗಾಂಧೀಜಿಯವರ ಬಗ್ಗೆ ಅಪಾರ ಗೌರವವಿದ್ದರೂ ಗಾಂಧೀಜಿಯವರು ಯುವಕರಿಗೆ ಕರೆನೀಡಿ ಶಾಲಾ ಕಾಲೇಜುಗಳನ್ನು ಬಹಿಷ್ಕರಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಳ್ಳಬೇಕೆಂಬ ಅಭಿಪ್ರಾಯಕ್ಕೆ ಹೊರತಾಗಿದ್ದರು. ಹಿಂದುಳಿದ ವರ್ಗದವರಿಗೆ ಶಿಕ್ಷಣ ಪಡೆಯಲು ಅನುವಾಗುವಂತೆ ಎಲ್ಲ ಶಾಲಾ ಕಾಲೇಜುಗಳೂ ತುಂಬಿರಬೇಕು ಎಂಬ ಅಭಿಪ್ರಾಯವಿದ್ದವರು. ಪ್ರವಾಸಕ್ಕೆ ಹೋದಾಗ ಯಾವ ಭೋಜನ ಕೂಟಕ್ಕೂ ಹೋಗದೆ, ತಮ್ಮ ಅಡಿಗೆಯವರಿಂದಲೇ ಅಡುಗೆ ಮಾಡಿಸಿ ಊಟಮಾಡುತ್ತಿದ್ದರು. ಮಂದುವರೆದ ಜನಾಂಗಕ್ಕೆ ಸೇರಿದವರಾದರೂ ಅವರಿಗೆ ಹಿಂದುಳಿದ ವರ್ಗದವರನ್ನು ಮತ್ತು ತುಳಿತಕ್ಕೊಳಗಾದವರನ್ನು ಕಂಡರೆ ತುಂಬಾ ಪ್ರೀತಿ. ಅವರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಿದ್ದರು. ಕೇವಲ ಜಾತಿ, ಹಣಕ್ಕೆ ಮಾತ್ರ ಬೆಲೆಕೊಡುವ ಇಂದಿನ ದಿನಗಳಲ್ಲಿ ಕಂಬಳಿಯವರು ಆದರ್ಶವಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ನಾಡವರ ಸಮಾಜದ ವೆಂಕಣ್ಣನಾಯಕ ಎನ್ನುವವರು ಜಿಲ್ಲಾ ಡೆಪ್ಯುಟಿ ಕಲೆಕ್ಟರರಾಗಿದ್ದರು. ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಅವರು ಮುಂದುವರಿದ ಜನಾಂಗದವರ ಪ್ರಾಬಲ್ಯದಿಂದಾಗಿ ಬಡ್ತಿಯಿಂದ ವಂಚಿತರಾಗಿದ್ದರು. ಇದು ಸಚಿವರಾಗಿದ್ದ ಸಿದ್ದಪ್ಪ ಕಂಬಳಿಯವರಿಗೆ ತಿಳಿದು ಬಂತು. ಅವರು ಮುಂಬೈ ಗವರ್ನರ್ ಆಗಿದ್ದ ಸರ್ ಲೆಸ್ಲೀ ವಿಲ್ಸನ್ ಅವರನ್ನು ಭೇಟಿಯಾಗಿ ವೆಂಕಣ್ಣ ನಾಯಕರಿಗಾಗಿರುವ ಅನ್ಯಾಯವನ್ನು ಅವರ ಗಮನಕ್ಕೆ ತಂದರು. ಅವರಿಗೆ ಬಡ್ತಿ ನೀಡಲು ವಿನಂತಿಸಿದರು. ಆಗ ವಿಲ್ಸನ್ ಅವರು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ವೆಂಕಣ್ಣನಾಯಕರಿಗೆ ಕಲೆಕ್ಟರ್ ಹುದ್ದೆಗೆ ನೇಮಿಸಿದರು. ಇದು ಕೆಲವರ ಕೆಂಗಣ್ಣಿಗೆ ಗುರಿಯಾದರೂ ಸಿದ್ದಪ್ಪನವರು ಅದನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಅದೇ ರೀತಿ ಎಲ್ಲರಿಂದ ಉಪೇಕ್ಷೆಗೆ ಒಳಗಾಗಿದ್ದ ಡಾ.ವಿ.ಆರ್.ಪರಮಾರ್ ಎಂಬ ಸರ್ಜನರು ಆಗಿನ ಕಾಲದ ಪ್ರಖ್ಯಾತ ವೈದ್ಯರಾಗಿದ್ದರು. ಎಫ್.ಆರ್.ಸಿ.ಎಸ್. ಅನ್ನು ಒಂದೇ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದವರು. ಎರಡು ಬಾರಿ ಮುಂಬಯಿ ವಿಶ್ವವಿದ್ಯಾನಿಲಯದ ಸೆನೆಟ್‌ಗೆ ನಿಂತು ಪರಾಭವಗೊಂಡಿದ್ದರು. ಏಕೆಂದರೆ ಅವರಿಗಿದ್ದ ಒಂದೇ ಒಂದು ಅನರ್ಹತೆ ಎಂದರೆ ಅವರು ಹಿಂದುಳಿದ 'ವಿಶ್ವಕರ್ಮ' ಜನಾಂಗಕ್ಕೆ ಸೇರಿದವರಾಗಿದ್ದುದು. ಇದು ಕಂಬಳಿಯವರ ಗಮನಕ್ಕೆ ಬಂದು ಅವರನ್ನು ಮುಂಬೈ ವಿವಿಗೆ ಸೆನೆಟರ್ ಆಗಿ ನಾಮಕರಣ ಮಾಡಿದರು. 'ಪರಮಾರರು ಆಗ ಕಂಬಳಿಯವರ ಬಳಿ ಬಂದು ನೀವಿದ್ದೀರಿ ಎಂದು ಹಿಂದುಳಿದ ವರ್ಗಗಳಿಗೆ ಸೇರಿದ ನನ್ನಂಥಹವರಿಗೆ ಬೆಲೆ ಬಂದಿದೆ. ಇಲ್ಲದಿದ್ದರೆ ನಮಗೆ ಬೆಲೆ ಕೊಡುವವರು ಯಾರಿದ್ದಾರೆ?' ಎಂದು ತಮ್ಮ ಕೃತಜ್ಞತೆ ಸಲ್ಲಿಸಿದರು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com