ಮಂಡ್ಯದ ಪಾಂಡವಪುರದಿಂದ ಹರಳಹಳ್ಳಿ ಪುಟ್ಟರಾಜು ಮಿಂಚಂಚೆ ಕಳುಹಿಸಿದ್ದಾರೆ.
'ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ನಿಧನರಾದ ಹಿನ್ನೆಲೆಯಲ್ಲಿ ನೆಚ್ಚಿನ 'ಕನ್ನಡಪ್ರಭ'ವು ಹಲವು ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸಿದೆ. ಆ ಮೂಲಕ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದು ಅರ್ಥಪೂರ್ಣವಾಗಿತ್ತು. ಆದರೆ ಹಲವು ಸುದ್ದಿಗಳ ಒತ್ತಡದಿಂದಲೋ ಏನೋ ಶ್ರೀಗಳ ಬಗೆಗಿನ ಸುದ್ದಿಯ ಚಿತ್ರವೊಂದರ ಕೆಳಗೆ ತಾವುಗಳು ಪ್ರಕಟಿಸಿರುವ ಸಾಲು ಕೊಂಚ ತಪ್ಪಾಗಿದೆ.'
'ಜ.15ರ ಪುಟ2ರಲ್ಲಿ 'ಸನ್ಯಾಸಿಯಾಗಬೇಕೆಂದು ಮನೆ ಬಿಟ್ಟವರು, ಮತ್ತೆ ಮನೆಗೆ ಮರಳಲೇ ಇಲ್ಲ, ನಿರ್ಮಲಾನಂದರ ತಾಯಿಗೆ ಫೋನ್ ಮಾಡಿದ್ರು' ಎಂಬ ಶೀರ್ಷಿಕೆಯಡಿ ಸುದ್ದಿಯೊಂದು ಪ್ರಕಟವಾಗಿದೆ. ಈ ಸುದ್ದಿಗೆ ಪೂರಕವಾಗಿ ಚಿತ್ರವೊಂದನ್ನು ಸಹ ತಾವುಗಳು ಪ್ರಕಟಿಸಿದ್ದೀರಿ. ಚಿತ್ರದ ಕೆಳಗೆಡೆ 'ಮಗನ ಚಿತ್ರ ಹಿಡಿದಿರುವ ತಾಯಿ ನಂಜಮ್ಮ' ಎಂಬ ವಾಕ್ಯವಿದೆ. ಆದರೆ ಇದು ತಪ್ಪು ವಾಕ್ಯ. ಏಕೆಂದರೆ ತಾಯಿ ನಂಜಮ್ಮ ಹಿಡಿದಿರುವುದು ತನ್ನ ಮಗ ನಿರ್ಮಲಾನಂದರ ಚಿತ್ರವಲ್ಲ. ಅದು ದೈವಾಧೀನರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಭಾವಚಿತ್ರವಾಗಿದೆ. ಆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ನಿಮಗೂ ಅರ್ಥವಾಗದೇ ಇರದು. ಏನಪ್ಪಾ ಇದು? ಸಾವಿನ ಸುದ್ದಿಯಲ್ಲೂ ತಪ್ಪುಗಳನ್ನು ಹೆಕ್ಕಿ ತಂದು ತೋರಿಸುವ ಉಸಾಬರಿ ಈ ಹರಳಹಳ್ಳಿ ಪುಟ್ಟರಾಜುವಿಗೆ ಬೇಕಿತ್ತಾ ಅಂತಾ ಮನದಲ್ಲೇ ಬೈಯ್ಕೋತೀರೇನೋ!? ಆದರೆ ಸಾವಿನ ಸುದ್ದಿಯು ಕೂಡ ಸುದ್ದಿಯೇ ಆಗಿರುವಾಗ, ಓದುಗರಿಗೆ ತಾವು ಕೊಡುವ ಸಾವಿನ ಸುದ್ದಿಯು ಕೂಡ ಶುದ್ಧವಾಗಿರಲೆಂಬುದೇ ನಮ್ಮ ಪ್ರೀತಿ ತುಂಬಿದ ಸದಾಶಯವಾಗಿದೆ' ಎಂದು ಹೇಳಿದ್ದಾರೆ.
ಪುಟ್ಟರಾಜು ಅವರು ಹೇಳಿದ ಹಾಗೆ ತಪ್ಪನ್ನು ಗಮನಕ್ಕೆ ತಂದಿರುವುದಕ್ಕೆ ಬೈಯ್ದುಕೊಳ್ಳುವ ಸಾಧ್ಯತೆಯೇ ಇಲ್ಲ. ಹಾಗಿದ್ದರೆ ಈ ಅಂಕಣವೇ ಇರುತ್ತಿರಲಿಲ್ಲ. ಇನ್ನು ಶೀರ್ಷಿಕೆಗೆ ಸಂಬಂಧಿಸಿ ಯಾವುದೇ ತಪ್ಪಾಗಿಲ್ಲ. ಅಲ್ಲಿ ಬಳಸಿದ ಚಿತ್ರದ ಗುಣಮಟ್ಟ ಒಳ್ಳೆಯದಿರಲಿಲ್ಲ. ಆದರೆ ಬಳಸುವುದು ಅನಿವಾರ್ಯವಾಗಿತ್ತು. ಮತ್ತೊಂದೆಡೆ ಪತ್ರಿಕೆಯ ಮುದ್ರಣ ದೋಷದಿಂದ ಸರಿಯಾಗಿ ನಿರ್ಮಲಾನಂದ ಶ್ರೀಗಳ ಮುಖ ಕಾಣುತ್ತಿಲ್ಲ.
ಬೆಂಗಳೂರಿನಿಂದ ಪ್ರಶಾಂತ್ ಎಂಬುವವರು ಮಿಂಚಂಚೆ ಕಳುಹಿಸಿ ಜ.19ರ ಸಂಚಿಕೆಯಲ್ಲಿನ ತಪ್ಪನ್ನು ಗಮನಕ್ಕೆ ತಂದಿದ್ದಾರೆ.
'ನೀವು 'ಕನ್ನಡಪ್ರಭ'ಕ್ಕೆ ಸೇರಿದ ದಿನದಿಂದ ನಾನು ಈ ಪತ್ರಿಕೆಯ ಕಾಯಂ ಓದುಗನಾಗಿದ್ದೇನೆ. ಯಾವುದೇ ಪತ್ರಿಕೆಗಳು ನರ್ಸ್ ಸಮಸ್ಯೆಗಳ ಬಗ್ಗೆ ಕಾಳಜಿ ತೋರಿಸದೇ ಪ್ರತಿಭಟನೆಯ ಸುದ್ದಿಯನ್ನು ಪ್ರಕಟಿಸದಿರುವಾಗ, ನರ್ಸ್ಗಳ ಬೆಂಬಲಕ್ಕೆ ಪತ್ರಿಕೆ ನಿಂತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಜ.19ರ ಪುಟ 12ರಲ್ಲಿನ 'ನರ್ಸಿಂಗ್ ಪರೀಕ್ಷೆಲಿ ಕಾಪಿ ಡ್ರೆಸಿಂಗ್' ಸುದ್ದಿ ಓದಿ ಬೇಸರವಾಯಿತು. ಅರೆ ವೈದ್ಯಕೀಯ ಪರೀಕ್ಷೆಯಲ್ಲಿ ನಡೆದ ಸಾಮೂಹಿಕ ನಕಲು ಕುರಿತು ಸಂಪೂರ್ಣ ವರದಿ ಪ್ರಕಟವಾಗಿದೆ. ಶೀರ್ಷಿಕೆಯಲ್ಲಿ ಮಾತ್ರ ನರ್ಸಿಂಗ್ ಪರೀಕ್ಷೆ ಎಂದು ಹೇಳಿದ್ದೀರಿ. ಇದರಿಂದ ಸಾವಿರಾರು ನರ್ಸಿಂಗ್ ವಿದ್ಯಾರ್ಥಿಗಳಿಗೆ ನೋವಾಗಿದೆ' ಎಂದಿದ್ದಾರೆ.
ಶೀರ್ಷಿಕೆ ಕೊಡುವ ಸಂದರ್ಭದಲ್ಲಿನ ಯಡವಟ್ಟಿನಿಂದ ಹೀಗಾಗಿದೆ. ನರ್ಸಿಂಗ್ ಪರೀಕ್ಷೆ ಬದಲು ಅರೆ ವೈದ್ಯಕೀಯ ಎಂದಾಗಬೇಕಿತ್ತು.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

