ಹತಾಶೆ ನಿವಾರಣೆಯ ದೀಪ

Updated on: 

ಹರ್ಯಾಣದ ಮಾಜಿ ಮುಖ್ಯಮಂತ್ರಿ, ಭಾರತ ರಾಷ್ಟ್ರೀಯ ಲೋಕದಳದ ಅಧ್ಯಕ್ಷ, ಜಾಟ್ ಸಮುದಾಯದ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಓಂ ಪ್ರಕಾಶ ಚೌಟಾಲಾ ಹಾಗೂ ಅವರ ಪುತ್ರ ಅಜಯ ಚೌಟಾಲಾ ಅವರಿಗೆ ದೆಹಲಿಯ ನ್ಯಾಯಾಲಯ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿರುವುದು, ಸುತ್ತಮುತ್ತಲೂ ಭ್ರಷ್ಟಾಚಾರವೇ ತಾಂಡವವಾಡುತ್ತಿರುವಾಗ, ಭ್ರಷ್ಟಾಚಾರಿಗಳಿಗೆ ಶಿಕ್ಷೆ ವಿಧಿಸಿದಂತಾಗಿ ಹತಾಶೆಯ ನಿವಾರಣೆಯ ದೀಪದ ದರ್ಶನವಾದಂತಿದೆ.
ಕಳೆದ ವಾರವೇ ನ್ಯಾಯಾಲಯ ಅವರಿಬ್ಬರನ್ನೂ ಹಾಗೂ ಮೂವರು ಐ.ಎ.ಎಸ್. ಅಧಿಕಾರಿಗಳೂ ಸೇರಿದಂತೆ ಹಲವಾರು ಅಧಿಕಾರಿಗಳನ್ನೂ, ಇತರ 43 ಮಂದಿಯನ್ನೂ, 2000 ದಲ್ಲಿ ನಡೆದ ಅಧ್ಯಾಪಕರ ನೇಮಕದ ಅಕ್ರಮ, ಭ್ರಷ್ಟಾಚಾರದ ಪ್ರಕರಣದಲ್ಲಿ ದೋಷಿಗಳೆಂದು ಗುರ್ತಿಸಿತ್ತು.
ಈಗ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟ ಅಧಿಕಾರಸ್ಥ ರಾಜಕಾರಣಿಗಳಿಗೆ, ನೇಮಕದ ಆದೇಶ ನೀಡಿದ ಅಧಿಕಾರಿಗಳಿಗೆ ಹಾಗೂ ಲಂಚಕೊಟ್ಟು ನೌಕರಿ ಪಡೆದ ಅಧ್ಯಾಪಕರಿಗೆಲ್ಲರಿಗೂ ಶಿಕ್ಷೆಯಾಗಿರುವುದು ನಿಜಕ್ಕೂ ಒಂದು ದೊಡ್ಡ ವಿಚಾರವೇ.
ಅಧ್ಯಾಪಕರ ನೇಮಕವಾಗಿದ್ದು 2000ನೇ ಇಸವಿಯಲ್ಲಿ. ಸಿಬಿಐ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದು 2008ರಲ್ಲಿ. ಈಗ ಮೊದಲ ಹಂತದ ನ್ಯಾಯಾಲಯ ಶಿಕ್ಷೆ ವಿಧಿಸಿದೆ, ನಿಜ. ಇದು ಇಲ್ಲಿಗೇ ಮುಗಿಯುವುದಿಲ್ಲ, ಇನ್ನೂ ಮೇಲ್ಮನವಿಗಳಿಗೆ ಅವಕಾಶವಿದೆ. ಆದರೆ ಕಾಯಿದೆಯ ದೃಷ್ಟಿಯಲ್ಲಿ ಈಗ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದವರೆಲ್ಲ ಭ್ರಷ್ಟಾಚಾರಿಗಳೇ. ಮೇಲಿನ ನ್ಯಾಯಾಲಯದ ತೀರ್ಪು ಹೊರಗೆ ಬರುವವರೆಗೂ ಸಮಾಜದಲ್ಲಿ ಅವರ ಸ್ಥಾನಮಾನ ಅಪರಾಧಿಗಳದ್ದೇ- ಈಗಿನ ಚುನಾವಣೆ ಕಾಯಿದೆಯಂತೆ, ಒಂದು ನ್ಯಾಯಾಲಯದಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾದವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈಗಿನ ತೀರ್ಪು ಸಿಂಧುವಾಗಿರುವಷ್ಟು ದಿನ ಅವರು ಚುನಾವಣೆ ಕಣದಿಂದ ದೂರವೇ ಉಳಿಯಬೇಕು.
ಉನ್ನತ ಮಟ್ಟದ ಅಧಿಕಾರದ ಸ್ಥಾನಗಳಲ್ಲಿ ಭ್ರಷ್ಟಾಚಾರವೆಸಗಿದವರ ವಿರುದ್ಧ ದೂರು ಕೊಟ್ಟರೂ ಏನೂ ಆಗುವುದಿಲ್ಲ, ಅವರು ಹೇಗೋ ಪಾರಾಗಿ ಬಿಡುತ್ತಾರೆ ಎನ್ನುವುದು ಶಾಶ್ವತ ಸ್ಥಿತಿ ಅಲ್ಲ ಎನ್ನುವುದಕ್ಕೆ ದೆಹಲಿ ನ್ಯಾಯಾಲಯದ ತೀರ್ಪೇ ಸಾಕ್ಷಿ.
ಈ ಪ್ರಕರಣದಲ್ಲಿ ಅಪರಾಧಿಗಳ ಪ್ರಭಾವ ಎಷ್ಟಿದೆ ಎಂದರೆ, ನ್ಯಾಯಾಲಯದ ತೀರ್ಪು ಪ್ರಕಟವಾದ ಕೂಡಲೇ ಜನರ ಗುಂಪುಗಳ ಉಗ್ರ ಸ್ವರೂಪದ ಪ್ರತಿಭಟನೆ ನಡೆಯಿತು, ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಗಿ ಬಂದಿತ್ತು. ಆದರೆ ಜನಪ್ರಿಯತೆ, ಕ್ರಿಮಿನಲ್ ಆರೋಪಗಳ ವಿಚಾರದಲ್ಲಿ ಯಾರಿಗೂ ರಕ್ಷಣೆ ನೀಡುವುದಿಲ್ಲ. ಪ್ರದರ್ಶನಗಳನ್ನು ನಿಭಾಯಿಸುವ ಶಕ್ತಿ ವ್ಯವಸ್ಥೆಗೆ ಇದೆ. ಉನ್ನತ ಮಟ್ಟದ ಭ್ರಷ್ಟಾಚಾರದ ತನಿಖೆ ಕುರಿತಂತೆ ಸೋಮವಾರದ ಆಂಧ್ರಪ್ರದೇಶದ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ಗಮನಾರ್ಹವಾದದ್ದು. ಒಬ್ಬ ಮಂತ್ರಿಯ ಮೇಲಿನ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ಆಂಧ್ರಪ್ರದೇಶ ಸಚಿವ ಸಂಪುಟ ಅನುಮತಿಯನ್ನು ನಿರಾಕರಿಸಿ ನಿರ್ಣಯವನ್ನು ಅಂಗೀಕರಿಸಿತ್ತು. ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಸಚಿವ ಸಂಪುಟದ ನಿರ್ಣಯವನ್ನು ಒಪ್ಪಲಿಲ್ಲ.
ಸಿಬಿಐ ಅಧಿಕಾರಿಗಳು ವಿಶೇಷ ನ್ಯಾಯಾಲಯದ ಮುಂದೆ ಈ ಪ್ರಕರಣವನ್ನು ಪ್ರಸ್ತಾಪಿಸಿದಾಗ, ನ್ಯಾಯಾಲಯ, ಸಂಬಂಧಪಟ್ಟ ಮಂತ್ರಿಯ ವಿರುದ್ಧ ಇರುವ ಆರೋಪಗಳ ವಿಚಾರಣೆಗೆ ಸರ್ಕಾರದ ಅನುಮತಿ ಅಗತ್ಯವಿಲ್ಲವೆಂದು ಹೇಳಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಆಂಧ್ರದ ವಿಶೇಷ ನ್ಯಾಯಾಲಯದ ತೀರ್ಪು ಒಂದು ಪ್ರಮುಖವಾದ ಬೆಳವಣಿಗೆ. ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರ ಕುರಿತು ಸಾರ್ವಜನಿಕರಲ್ಲಿರುವ ಆಕ್ರೋಶ ಆಗಾಗ ಪ್ರದರ್ಶನವಾಗಿರುವುದರ ಫಲ ಇದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com