ಸಂಪಾದಕೀಯ

ನರೇಂದ್ರ ಮೋದಿ ಗ/ಡ ಕಾಂಗ್ರೆಸ್

Published On :

ಭಾನುವಾರ, ಪುಣೆ ವಿಶ್ವವಿದ್ಯಾಲಯದ ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿಯ ಚುನಾವಣೆ ಪ್ರಚಾರ ರಥದ ಸಾರಥಿ ನರೇಂದ್ರ ಮೋದಿ ಅವರು ಗಂಟೆಗಟ್ಟಲೆ ಮಾಡಿದ ಭಾಷಣವನ್ನು ದೇಶದ ನಾಲ್ಕೂ ಪ್ರಮುಖ ರಾಷ್ಟ್ರೀಯ ಟಿ.ವಿ. ಛಾನೆಲ್‌ಗಳು ನೇರವಾಗಿ ಪ್ರಸಾರ ಮಾಡಿದ್ದು ಒಂದು ವಿಶೇಷವೇ.
  ಈ ಸಂದರ್ಭವನ್ನು ನರೇಂದ್ರ ಮೋದಿ ಅವರು ಚೆನ್ನಾಗಿಯೇ ಬಳಸಿಕೊಂಡರು. ಲೋಕಸಭೆ ಚುನಾವಣೆಯನ್ನೇ ನರೇಂದ್ರ ಮೋದಿ ಗ/ಡ ಕಾಂಗ್ರೆಸ್ ಆಗುವಂತೆ ನೋಡಿಕೊಳ್ಳುವ ಪ್ರಯತ್ನ ಇದು ಎಂದು ಮೋದಿ ವಿರೋಧಿಗಳು ಆರೋಪಿಸುವುದಕ್ಕೆ ಈಗ ಅವಕಾಶವಾಗುತ್ತಿದೆ. ಇದೇ ಸಮಯದಲ್ಲೇ ಕೇಂದ್ರದಲ್ಲಿ ಆಳುವ ಕೂಟ ಸಾಮಾನ್ಯವಾಗಿ ಜುಲೈ ಮಧ್ಯಭಾಗದಲ್ಲಿ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನವನ್ನು ಸುಮಾರು ಇಪ್ಪತ್ತು ದಿನಗಳ ಅವಧಿಗೆ ಮುಂದಕ್ಕೆ ಹಾಕಿದೆ. ಅಂದರೆ ಪ್ರಮುಖ ವಿಧೇಯಕಗಳ ವಿಲೇವಾರಿಗೆ ಬೇಕಾದ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶವನ್ನು ಪಡೆದುಕೊಂಡಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಲೋಕಸಭೆ ಚುನಾವಣೆಯನ್ನೇ ಹಿಂದಕ್ಕೆ ಹಾಕುವ ಉದ್ದೇಶ ಆಳುವ ಕೂಟಕ್ಕೆ ಇದ್ದರೂ ಇರಬಹುದು ಎನಿಸುತ್ತಿದೆ.
  ಆದರೆ ದೇಶದಲ್ಲಿ ಪ್ರಧಾನ ಪ್ರತಿಪಕ್ಷವಾದ ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್ ವಿರೋಧಿ ಪ್ರಾದೇಶಿಕ ಪಕ್ಷಗಳು ಹಾಗೂ ಶಕ್ತಿಗಳು ಇನ್ನೂ ತಮ್ಮ ಚುನಾವಣೆಯ ತಂತ್ರಗಾರಿಕೆಯನ್ನು ಕುರಿತು ಗಂಭೀರವಾದ ವಿಚಾರ ಮಾಡಿದಂತಿಲ್ಲ. ಚುನಾವಣೆಯ ಪ್ರಚಾರ ಸಮರದಲ್ಲಿ ಸೆಕ್ಯುಲರ್ - ಕಮ್ಯುನಲ್ ಶಕ್ತಿಗಳ ವ್ಯತ್ಯಾಸವನ್ನೇ ದೊಡ್ಡದಾಗಿ ಮಾಡಿ, ಆರ್ಥಿಕ ಬೆಳವಣಿಗೆ, ನಿಜವಾದ ಅರ್ಥದಲ್ಲಿ ಅಭ್ಯುದಯ ಸಾಧನೆಗೆ ಅಗತ್ಯವಾದ ಸುಧಾರಣೆಗಳನ್ನು ರೂಪಿಸುವಲ್ಲಿ ಕಾಂಗ್ರೆಸ್ಸಿನ ವೈಫಲ್ಯ ಕುರಿತ ಅರ್ಥಪೂರ್ಣ ಚರ್ಚೆ ಆಗದಂತೆ ನೋಡಿಕೊಳ್ಳುವುದೇ ಕಾಂಗ್ರೆಸ್ಸಿನ ತಂತ್ರವಾಗಿರಲೂ ಬಹುದು. ಆ ಬಲೆಯಲ್ಲಿ ಇತರರು ಸಿಕ್ಕಿಬೀಳಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.