ಸರ್ಕಾರಿ ಭೂಮಿ ಒತ್ತುವರಿ: ಹಕ್ಕು ಚ್ಯುತಿ ಸಂಬಂಧವಿಲ್ಲ
ಹಲವಾರು ವರ್ಷಗಳಿಂದಲೂ ರಾಜ್ಯದ ನಗರಗಳ ಹೊರವಲಯದಲ್ಲಿ ಬೆಲೆ ಬಾಳುವ ಭೂಮಿಯನ್ನು ಬಲಿಷ್ಠರು ವ್ಯಾಪಾರೀ ಉದ್ದೇಶಗಳಿಗಾಗಿ ಒತ್ತುವರಿ ಮಾಡಿಕೊಂಡಿರುವುದು ರಹಸ್ಯವೇನೂ ಅಲ್ಲ. ಸುಮಾರು ಹನ್ನೆರಡು ವರ್ಷಗಳಿಂದಲೂ ಈ ವಿಚಾರದಲ್ಲಿ ಸಾಕು ಬೇಕಾದಷ್ಟು ಚರ್ಚೆಯಾಗಿದೆ. ಸರ್ಕಾರ ಹಲವಾರು ಬಾರಿ ಒತ್ತುವರಿಯನ್ನು ತೆರವು ಮಾಡಿ ಭೂಮಿಯ ಸದ್ಬಳಕೆ ಕುರಿತ ಭರವಸೆ ನೀಡಿದೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ಕಂದಾಯ ಮಂತ್ರಿ ಶ್ರೀನಿವಾಸ ಪ್ರಸಾದ್ ಅವರು ಒತ್ತುವರಿಯಾದ ಭೂಮಿ ಸರ್ಕಾರದ ವಶಕ್ಕೆ ಬಂದ ಕೂಡಲೇ ಅದನ್ನು ಸಾರ್ವಜನಿಕ ಉದ್ದೇಶಗಳಿಗಾಗಿಯೇ ಮೀಸಲಾಗಿಡಲಾಗುವುದೆನ್ನುವ ಭರವಸೆ ಸ್ವಾಗತಾರ್ಹ.
ಆದರೆ ಮಾಜಿ ಐ.ಎ.ಎಸ್. ಅಧಿಕಾರಿ, ಒತ್ತುವರಿ ತೆರವು ನಿರ್ವಹಣೆಯ ಕಾರ್ಯಪಡೆಯ ಮಾಜಿ ಅಧ್ಯಕ್ಷ ವಿ. ಬಾಲಸುಬ್ರಹ್ಮಣ್ಯನ್ ಅವರು ಒಂದು ಪತ್ರಿಕಾ ಸಂದರ್ಶನದಲ್ಲಿ ಒತ್ತುವರಿ ಪ್ರವೃತ್ತಿ ಕುರಿತಂತೆ ಆಡಿರುವ ಮಾತುಗಳು ಹಾಗೂ ಕೆಲವು ರಾಜಕಾರಣಿಗಳ ಹೆಸರುಗಳನ್ನು ಹೇಳಿದ್ದು ಶಾಸಕರನ್ನು ಕೆರಳಿಸಿದೆ. ಈ ವಿಚಾರದಲ್ಲಿ ಮಂಗಳವಾರವೇ ಮಾಜಿ ಸ್ಪೀಕರ್ ರಮೇಶ್ಕುಮಾರ್ ಅವರು ಕಳುಹಿಸಿದ್ದ ಹಕ್ಕಿನ ಚ್ಯುತಿ ಸೂಚನೆಯನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಹಕ್ಕು ಬಾಧ್ಯತಾ ಸಮಿತಿಯ ಪರಿಶೀಲನೆಗೆ ಕಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರೂ ಇದೇ ಪ್ರಸ್ತಾಪವನ್ನೆತ್ತಿ ಹಕ್ಕಿನ ಚ್ಯುತಿಯ ಸೂಚನೆಯನ್ನು ಕಳಿಸುವ ಪ್ರಸ್ತಾಪ ಮಾಡಿದ್ದಾರೆ. ಇದು ನಿಜವಾಗಲೂ ಗಂಭೀರವಾದ ವಿಚಾರವೇ.
ಆದರೆ ಹಕ್ಕು ಚ್ಯುತಿಯ ಪ್ರಶ್ನೆಗೂ ಸರ್ಕಾರಿ ಭೂಮಿಯ ಒತ್ತುವರಿಗೂ ನೇರವಾದ ಸಂಬಂಧ ಇಲ್ಲ ಎನ್ನುವುದನ್ನು ಮರೆಯಬಾರದು. ಹಕ್ಕುಚ್ಯುತಿಯ ಪ್ರಶ್ನೆ ಅದರ ಪರಿಶೀಲನೆ ಇಂತಹ ವಿಚಾರಗಳೆಲ್ಲವೂ ಬಾಲಸುಬ್ರಹ್ಮಣ್ಯನ್ ಹಾಗೂ ವಿಧಾನ ಮಂಡಲದ ಸದನಗಳ ಸದಸ್ಯರುಗಳಿಗೇ ಸೀಮಿತವಾದ ವಿಚಾರ. ಅದು ರಾಜ್ಯದ ವಿಧಾನ ಮಂಡಲದ ಗೌರವದ ಪ್ರಶ್ನೆ ಎನ್ನುವುದೂ ನಿಜ. ಈ ವಿಚಾರದಲ್ಲಿ ನಿರ್ಧಾರವನ್ನು ಕೈಗೊಂಡು ಸೂಕ್ತ ಕಾರ್ಯಕ್ರಮವನ್ನು ರೂಪಿಸುವುದು ವಿಧಾನ ಮಂಡಲದ ಕೆಲಸ.
ಆದರೆ ಭೂಮಿಯ ಒತ್ತುವರಿಯ ಪ್ರಸ್ತಾಪ ಹಲವಾರು ವರ್ಷಗಳಿಂದಲೂ, ಜನಪ್ರತಿನಿಧಿಗಳ ಒತ್ತಡ ಎಷ್ಟೇ ಬಲವಾಗಿದ್ದರೂ ನೆನೆಗುದಿಗೆ ಬಿದ್ದಿರುವುದೂ ನಿಜ. ಎ.ಟಿ. ರಾಮಸ್ವಾಮಿ ನೇತೃತ್ವದ ಶಾಸಕರ ತಂಡದ ವರದಿಯನ್ನು ಸಲ್ಲಿಸಿದ ಅನಂತರ ಒತ್ತುವರಿ ತೆರವಿನ ಕೆಲಸ ಆಗೇ ಇಲ್ಲ ಎನ್ನಬಹುದು. ಕೆಲಸ ಆಗಿದ್ದರೂ ಅದು ತುಂಬಾ ಕಡಿಮೆ.
ಈ ಸಂಬಂಧದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಅವ್ಯವಹಾರದಲ್ಲಿ ಎಲ್ಲ ಪಕ್ಷಗಳ ರಾಜಕಾರಣಿಗಳೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪಾಲುದಾರರಾಗಿದ್ದಾರೆಂದು ಬಹಿರಂಗವಾಗಿ ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಡತಗಳನ್ನು ಪರಿಶೀಲಿಸಿದ್ದಾರೆ. ಅಧಿಕಾರಿಗಳಿಂದ ವಿಶೇಷ ವರದಿಗಳನ್ನೂ ತರಿಸಿಕೊಂಡಿದ್ದರು.
ಈಗ ಚೆಂಡು ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಸರ್ಕಾರದಲ್ಲಿದೆ. ಅನೇಕ ಪ್ರಕರಣಗಳಲ್ಲಿ ಫೈಲುಗಳು ಕಳೆದು ಹೋಗಿರಲೂಬಹುದು. ಇನ್ನೂ ನ್ಯಾಯಾಲಯಗಳಲ್ಲಿ ಕೆಲವರು ಖಟ್ಲೆ ಹೂಡಲೂಬಹುದು.
ಇದೆಲ್ಲವನ್ನೂ ನೂತನ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಒಂದು ಸವಾಲೆಂದು ಸ್ವೀಕರಿಸಬೇಕು. ಕೆಲವು ಪ್ರಕರಣಗಳಲ್ಲಾದರೂ ಶೀಘ್ರವಾಗಿ ನಿಯಮಗಳಿಗೆ ಅನುಗುಣವಾಗಿ ಕ್ರಮ ಜರುಗಿಸಿ, ತಪ್ಪಿತಸ್ಥರೆಂದು ಗೊತ್ತಾದವರ ಮೇಲೆ ಉಗ್ರ ಕ್ರಮವನ್ನು ಕೈಗೊಳ್ಳಲೇಬೇಕು.
ನಿಜ. ಇಂತಹ ವಿಚಾರದಲ್ಲಿ ಗಡವನ್ನು ವಿಧಿಸುವುದು ಕಷ್ಟ. ಹಲವಾರು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಕೆಟ್ಟ ದಂಧೆ ಇದು. ಇದರಲ್ಲಿ ತೊಡಗಿರುವವರ ಎದೆ ನಡುಗಿಸುವಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರೆ, ಅದೊಂದು ಚರಿತ್ರಾರ್ಹವಾದ ಮಹಾನ್ ದಾಖಲೆಯೇ ಆಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

