ಸಂಪಾದಕೀಯ

ನಿತೀಶ್ ವಿಶ್ವಾಸಮತ ಕಾಂಗ್ರೆಸ್ ತಂತ್ರಗಾರಿಕೆ

Published On :

ಬಿಹಾರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸಂಯುಕ್ತ ಜನತಾದಳ ಹಾಗೂ ಭಾರತೀಯ ಜನತಾ ಪಾರ್ಟಿ ಒಂದು ಕೂಟವಾಗಿಯೇ ಸ್ಪರ್ಧಿಸಿದ್ದು. ಹೀಗಾಗಿ ಕೂಟಕ್ಕೆ ಸಂದ ಜಯ ಸಂಪೂರ್ಣವಾಗಿ ತಮ್ಮ ಪಕ್ಷದ ಪ್ರಭಾವದ ಗೆಲವೇ ಎಂದು ನಿತೀಶ್ ಕುಮಾರ್ ಈಗ ಹೇಳುತ್ತಿರುವುದು ಮೌಲ್ಯಾಧಾರಿತ ರಾಜಕಾರಣಕ್ಕೆ ಹೊಂದುವಂತಹದ್ದಲ್ಲ. ಆದರೂ ಈಗ ನಿತೀಶ್‌ಕುಮಾರ್ ಬಿಜೆಪಿಯ ಸಂಬಂಧವನ್ನು ಕಡಿದುಕೊಂಡಿರುವುದರಿಂದ, ವಿಧಾನಸಭೆಯಲ್ಲಿ ತಮಗಿರುವ ಬಹುಮತವನ್ನು ಪ್ರದರ್ಶಿಸಿರುವುದು ಸಂವಿಧಾನದ ಪಾಲನೆಯ ದೃಷ್ಟಿಯಿಂದ ಸಿಂಧು. ಈ ಪರಿಸ್ಥಿತಿಯನ್ನು ಊಹಿಸಿಯೇ ಅಲ್ಲಿ ಈಗ ಪ್ರತಿಪಕ್ಷವಾಗಿ ಕೆಲಸ ಮಾಡಬೇಕಾದ ಬಿಜೆಪಿ ಸಭಾತ್ಯಾಗ ಮಾಡಿದ್ದು. ನಿತೀಶ್ ಕುಮಾರ್ ಗೆದ್ದಿದ್ದಾರೆ.
ವಿಧಾನ ಸಭೆಯಲ್ಲಿ ನಿತೀಶ್ ಕುಮಾರ್ ಅವರಿಗೆ ಬಹುಮತವಿತ್ತು. ಆದರೂ ಕಾಂಗ್ರೆಸ್‌ನ ನಾಲ್ವರು ಸದಸ್ಯರು, ಯಾರಿಂದಲೂ ಮನವಿ ಬಾರದೇ ಇದ್ದರೂ ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದರು. ಮೂರು ದಿನಗಳ ಹಿಂದೆ ಪ್ರಧಾನಿ ಮನಮೋಹನ ಸಿಂಗ್ ಅವರೇ ನಿತೀಶ್ ಕುಮಾರ್ ಒಬ್ಬ ಸೆಕ್ಯುಲರ್ ನಾಯಕ ಎನ್ನುವ ಬಿರುದನ್ನು ನೀಡಿದ್ದರು. ಇಲ್ಲಿ ಸ್ಪಷ್ಟವಾಗಿ ಗೋಚರವಾಗುವುದು ಕಾಂಗ್ರೆಸ್ಸಿನ ತಂತ್ರಗಾರಿಕೆ. ಕಾಂಗ್ರೆಸ್ಸಿಗೆ ಈಗ ನಿತೀಶ್ ಕುಮಾರ್ ಬೇಕಾಗಿದ್ದಾರೆ. ಲೋಕಸಭೆಯಲ್ಲಿ ಅವರ ಪಕ್ಷದ ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯ ಸದಸ್ಯರು, ಕಾಂಗ್ರೆಸ್ ಮಂಡಿಸಲಿರುವ ವಿಧೇಯಕಗಳಿಗೆ ಬೆಂಬಲ ನೀಡಿದರೆ ಕೇಂದ್ರ ಸರ್ಕಾರದ ಕೆಲಸ ಸುಲಭವಾಗಲಿದೆ. ಅದಕ್ಕಾಗಿ ಕಾಂಗ್ರೆಸ್ ಏನನ್ನು ಬೇಕಾದರೂ ಮಾಡಲು ಸಿದ್ಧವಿದೆ, ಎನ್ನುವುದಕ್ಕೆ ಪಕ್ಷದ ಬಿಹಾರದ ಶಾಸಕರ ವರ್ತನೆಯೇ ಸಾಕ್ಷಿ.
ಇನ್ನು ಮುಂದೆ ಕೇಂದ್ರ ಸರ್ಕಾರದ ಬೆಂಬಲವೂ ಸಿಗುವುದರಿಂದ ನಿತೀಶ್ ಕುಮಾರ್ ಅವರ ಕೆಲಸ ಸುಗಮ. ಈಗಾಗಲೇ ಆ ರಾಜ್ಯಕ್ಕೆ ವಿಶೇಷವಾದ ಸ್ಥಾನಮಾನವನ್ನು ಒದಗಿಸುವುದಕ್ಕೆ ಕೇಂದ್ರ ಒಪ್ಪಿದ್ದೂ ಆಗಿದೆ. ಈ ಬೆಳವಣಿಗೆಯಿಂದಾಗಿ, ಪೂರ್ವ ಭಾರತದಲ್ಲಿ ಹೆಚ್ಚು ಕಡಿಮೆ ಅಸ್ತಿತ್ವವನ್ನೇ ಕಳೆದು ಕೊಂಡಿದ್ದ ಕಾಂಗ್ರೆಸ್ಸಿಗೆ ರೆಕ್ಕೆ-ಪುಕ್ಕ ಬಂದಂತಾಗಿರುವುದಂತೂ ನಿಜ. ಕಾಂಗ್ರೆಸ್ಸಿನ ಸಹವರ್ತಿ ಪಕ್ಷವಾಗಿ ವರ್ತಿಸಲು ರಾಷ್ಟ್ರೀಯ ಮಟ್ಟದಲ್ಲಿ ಸಂಯುಕ್ತ ಜನತಾದಳ ನಿರ್ಧಾರವನ್ನು ಪ್ರಕಟಿಸಿಲ್ಲ. ಸದ್ಯಕ್ಕೆ ಈ ವಿಚಾರದಲ್ಲಿ ಪಕ್ಷದ ಅಧ್ಯಕ್ಷ ಶರದ್ ಯಾದವ್ ಏನನ್ನೂ ಹೇಳಿಲ್ಲ. ಕಾಂಗ್ರೆಸ್ಸಿನ ತಂತ್ರಗಾರಿಕೆ, ಈಗ ತಮಿಳುನಾಡಿನಲ್ಲೂ ಕಂಡುಬಂದಿದೆ. ಅಲ್ಲಿ ಸಂಯುಕ್ತ ಪ್ರಗತಿಪರ ಕೂಟದ ಅಂಗಪಕ್ಷವಾಗಿದ್ದ ಡಿಎಂಕೆ, ಕೇಂದ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದಿದೆ. ಪಕ್ಷದ ಎಲ್ಲ ಮಂತ್ರಿಗಳೂ ರಾಜಿನಾಮೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಸದ್ಯಕ್ಕೆ ಕಾಂಗ್ರೆಸ್ - ಡಿಎಂಕೆ ಸಹಮನಸ್ಕ ಪಕ್ಷಗಳೇನೂ ಅಲ್ಲ. ಡಿಎಂಕೆಯ ವಯೋವೃದ್ಧ ನಾಯಕ ಮುತ್ತುವೇಲು ಕರುಣಾನಿಧಿ ಅವರಿಗೆ ಹೇಗಾದರೂ ಮಾಡಿ ತಮ್ಮ ಪುತ್ರಿ ಕನಿಮೋಳಿ ಅವರನ್ನು ರಾಜ್ಯಸಭೆಗೆ ಮತ್ತೆ ಕಳುಹಿಸಬೇಕೆನ್ನುವ ಬಯಕೆ. ಅಲ್ಲಿ ಈಗ ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಆಳುವ ಅಣ್ಣಾ ಡಿಎಂಕೆ ಮೊದಲು ಐದು ಸ್ಥಾನಗಳಿಗೂ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿತ್ತು. ಐದನೇ ಸ್ಥಾನಕ್ಕೆ ಅಗತ್ಯವಾದಷ್ಟು ಮತಗಳು ಆ ಪಕ್ಷಕ್ಕೆ ಇಲ್ಲ. ಅಣ್ಣಾ ಡಿಎಂಕೆ ನಾಯಕಿ, ಮುಖ್ಯಮಂತ್ರಿ ಜಯಲಲಿತಾ ತನ್ನ ಐದನೇ ಸ್ಥಾನದ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಹಿಂದಕ್ಕೆ ಪಡೆದು, ಪಕ್ಷದಲ್ಲಿ ಉಳಿಯುವ ಹೆಚ್ಚುವರಿ ಮತಗಳನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷದ ಡಿ. ರಾಜಾ ಅವರಿಗೆ ಕೊಡಬಹುದೆನ್ನುವ ನಿರೀಕ್ಷೆ ಇದೆ.
ಹೀಗಾಗಿ ಅಲ್ಲಿನ ನಾಲ್ಕು ಕಾಂಗ್ರೆಸ್ ಮತಗಳಿಗೆ ಸಾಮಾನ್ಯವಾಗಿ ಸಿಗದೇ ಇರುವ ಪ್ರಾಮುಖ್ಯ ಈಗ ಲಭ್ಯವಾಗಿದೆ. ಆ ಮತಗಳನ್ನು ಪಡೆಯಲು ಕರುಣಾನಿಧಿ ಪ್ರಯತ್ನ ನಡೆಸಿದ್ದಾರೆ. ಡಿಎಂಕೆ ನಾಯಕ ಬಾಲೂ ಅವರು ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಅವಕಾಶವನ್ನು ಪಡೆದಿದ್ದಾರೆ. ಭೇಟಿ ಆಗಿದೆ.
ನಿಜ. ಕಾಂಗ್ರೆಸ್ ಅಧಿಕೃತವಾಗಿ ಡಿಎಂಕೆ ಅಭ್ಯರ್ಥಿ ಕನಿಮೋಳಿ ಅವರಿಗೆ ನೀಡುವ ಭರವಸೆಯನ್ನು ಕೊಟ್ಟಿಲ್ಲ. ಆದರೆ ಕೇಂದ್ರ ಸರ್ಕಾರದ ಶಕ್ತಿಯನ್ನು ಕುಗ್ಗಿಸುವ ಕ್ರಮ ಕೈಗೊಂಡು, ಹಲವಾರು ವಿಧೇಯಕಗಳನ್ನು ತಡೆಯಬಹುದಾದ ಸ್ಥಿತಿಯನ್ನು ನಿರ್ಮಿಸಿದ ಡಿಎಂಕೆ ಪ್ರತಿನಿಧಿಯನ್ನು ಭೇಟಿ ಮಾಡಲು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸಿದ್ಧವಾಗಿದ್ದರು. ಕನಿಮೋಳಿ, ಟೆಲಿಕಾಮ್ ಹಗರಣದಲ್ಲಿ ಬಂಧಿತರಾಗಿ ಕೆಲವು ಕಾಲ ತಿಹಾರ್‌ಜೈಲಿನಲ್ಲಿದ್ದವರು. ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅಂತಹ ವ್ಯಕ್ತಿಗೆ, ಅವರು ಪ್ರತಿನಿಧಿಸುವ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುವುದನ್ನು "ಪರಿಶೀಲಿಸುವುದೂ" ಒಂದು ತಂತ್ರವಲ್ಲವೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.